ದೊಡ್ಡಬಳ್ಳಾಪುರ: ಕ್ಷುಲ್ಲಕ ಕಾರಣಗಳಿಗೆ ವಿದ್ಯಾರ್ಥಿಗಳು ಆತ್ಮಹತ್ಯೆಗೆ ಶರಣಾಗುತ್ತಿರುವ ಪ್ರಕರಣಗಳು ಕಳವಳಕಾರಿಯಾಗಿದ್ದು, ಸಮಸ್ಯೆಗಳಿಗೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ ಎಂಬುದನ್ನು ಅರಿತು, ವಿದ್ಯಾರ್ಥಿಗಳು ಆತ್ಮ ಸ್ಥೈರ್ಯವನ್ನು ಬೆಳಸಿಕೊಳ್ಳಬೇಕೆಂದು ದೊಡ್ಡಬಳ್ಳಾಪುರ ಮಹಿಳಾ ಠಾಣೆ ಇನ್ಸ್ಪೆಕ್ಟರ್ ಡಾ.ಎಂ.ಬಿ. ನವೀನ್ ಕುಮಾರ್ (Dr. M.B. Naveen Kumar) ಸಲಹೆ ನೀಡಿದರು.
ನಗರದ. ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಬಾಲ ಕಾರ್ಮಿಕ ವಿರೋಧಿ ದಿನದ ಅಂಗವಾಗಿ, ಬಾಲ ಕಾರ್ಮಿಕ ನಿಷೇಧ ಕಾಯ್ದೆ, ಪೋಕ್ಸೊ ಕಾಯ್ದೆಗಳ ಕುರಿತು ಅರಿವು ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ಕ್ಷುಲ್ಲಕ ಕಾರಣಗಳಿಗೆ ಮನೋವ್ಯಾದಿಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇದು ಆಧುನಿಕ ಯುವ ಸಮುದಾಯಕ್ಕೆ ಕಳಂಕವಾಗಲಿದೆ, ರಾಷ್ಟ್ರಪಿತಾ ಮಹಾತ್ಮ ಗಾಂಧಿ ಅವರು ಹೇಳಿದ್ದಾರೆ ಆತ್ಮಹತ್ಯೆ ಮಹಾಪಾಪ ಎಂದು.
ವಿದ್ಯಾರ್ಥಿಗಳಿಗೆ ಆ ರೀತಿಯ ಸಂದರ್ಭ ಎದುರಾದಲ್ಲಿ, ಆ ಸ್ಥಳದಿಂದ, ಆ ಪರಿಸ್ಥಿತಿಯಿಂದ ಹೊರಬನ್ನಿ, ಯೋಚಿಸಿ.. ನಾ ಆತ್ಮಹತ್ಯೆ ಮಾಡಿಕೊಂಡ ಬಳಿಕ ಸಾಧಿಸುವುದೇನು ಎಂಬುದನ್ನು ಪ್ರಶ್ನಿಸಿಕೊಳ್ಳಿ. ನಿಮಗೆ ಸಾಧಿಸುವ ಶಕ್ತಿಯಿಂದ ಪ್ರಾಣಿಗಳಿಗೆ ಇಲ್ಲದ ಬುದ್ದಿ ಇದೆ, ಓಡಾಡಲು ಕೈಕಾಲ್ ಇದೆ, ಸಾಧನೆ ಮಾಡಲು ಅನೇಕ ಅವಕಾಶಗಳಿವೆ ಇವುಗಳನ್ನು ಬಳಸಿಕೊಳ್ಳಿ ಎಂದು ಸಲಹೆ ನೀಡಿದರು.
ಬಾಲ ಕಾರ್ಮಿಕ ವಿರೋಧಿ ದಿನ
ಮುಂದಿವರಿದು ಮಾತನಾಡಿದ ಇನ್ಸ್ಪೆಕ್ಟರ್ ಡಾ.ಎಂ.ಬಿ.ನವೀನ್ ಕುಮಾರ್, ಬಾಲಕಾರ್ಮಿಕ ಪದ್ಧತಿಯನ್ನು ನಿರ್ಮೂಲನೆ ಮಾಡಲು ಹಾಗೂ ಈ ಅನಿಷ್ಟ ಪದ್ಧತಿಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಜೂನ್ 12 ರಂದು ವಿಶ್ವ ಬಾಲಕಾರ್ಮಿಕ ವಿರೋಧಿ ದಿನವನ್ನು ಆಚರಿಸಲಾಗುತ್ತದೆ.

ದೇಶದಲ್ಲಿ ಬಾಲಕಾರ್ಮಿಕರನ್ನು ನಿಷೇಧಿಸಲಾಗಿದ್ದು, ಹದಿನಾಲ್ಕು ವರ್ಷದೊಳಗಿನ ವಯಸ್ಸಿನ ಮಕ್ಕಳನ್ನು ಬಾಲ ಕಾರ್ಮಿಕರೆನ್ನಲಾಗಿದೆ.
ಓದುವ ವಯಸ್ಸಿನಲ್ಲಿ ದುಡಿಯಲು ಹೋಗಿ ಸುಂದರವಾದ ಬಾಲ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಮಕ್ಕಳ ಬಾಲ್ಯವನ್ನು ಕಸಿದುಕೊಳ್ಳುತ್ತಿರುವ ಬಾಲಕಾರ್ಮಿಕತನವನ್ನು ತೊಡೆದು ಹಾಕುವ ಉದ್ದೇಶದಿಂದ ಪ್ರತಿ ವರ್ಷ ಜೂನ್ 12 ರಂದು ವಿಶ್ವ ಬಾಲಕಾರ್ಮಿಕ ವಿರೋಧಿ ದಿನವನ್ನು ಆಚರಿಸಲಾಗುತ್ತದೆ ಎಂದರು.
ಈ ವೇಳೆ ಪ್ರತಿಜ್ಞಾವಿಧಿ ಭೋಧಿಸಲಾಯಿತು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಸುನಿತಾ, ಮಹಿಳಾ ಠಾಣೆ ಪಿಎಸ್ಐ ಶುಭ, ಸಿಬ್ಬಂದಿಗಳಾದ ಶ್ರುತಿ, ಜಗದೀಶ್ ಕುಮಾರ್ ಸೇರಿದಂತೆ ಕಾಲೇಜಿನ ಉಪನ್ಯಾಸಕಗಳು ಹಾಜರಿದ್ದರು.