ದೊಡ್ಡಬಳ್ಳಾಪುರ: ತಾಲೂಕಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಎಂಎಸ್‌ವಿ ಪಬ್ಲಿಕ್ ಶಾಲೆಯಲ್ಲಿ (MSV Public School) 2025-26 ನೇ ಸಾಲಿಗೆ ಹೊಸದಾಗಿ ಶಾಲೆಗೆ ದಾಖಲಾದ ಮಕ್ಕಳ ಸ್ವಾಗತಕ್ಕಾಗಿ “ಫ್ರೆಶರ್ಸ್ ಡೇ” (Freshers’ Day) ಯನ್ನು ಅದ್ದೂರಿಯಾಗಿ ಆಚರಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ದೊಡ್ಡಬಳ್ಳಾಪುರ ಮಹಿಳಾ ಪೊಲೀಸ್ ಠಾಣೆಯ ಸಬ್ ಇನ್ಪೆಕ್ಟರ್ ಶುಭಾ.ಎನ್ ಭಾಗವಹಿಸಿದ್ದರು.

ಈ ವೇಳೆ ಮಾತನಾಡಿದ ಅವರು, ವಿದ್ಯಾರ್ಥಿ ಜೀವನದಲ್ಲಿ ಮಕ್ಕಳು ಪಾಲಿಸಬೇಕಾದ ಶಿಸ್ತಿನ ಬಗ್ಗೆ ವಿವರಿಸಿದರು. ಅಲ್ಲದೆ ಸುರಕ್ಷತಾ ದೃಷ್ಟಿಯಿಂದ ಅವರಿಗೆ ಒಳ್ಳೆಯ ಸ್ಪರ್ಷ ಮತ್ತು ಕೆಟ್ಟ ಸ್ಪರ್ಷದ ಬಗ್ಗೆ ಪೋಷಕರು ಹಾಗೂ ಶಿಕ್ಷಕರು ತಿಳುವಳಿಕೆ ನೀಡಬೇಕು ಎಂದು ಸಲಹೆ ನೀಡಿದರು.

ಶಾಲೆಯಲ್ಲಿ ವಿವಿಧ ಚಟುವಟಿಕೆ ಆಧಾರಿತ ಕಲಿಕೆ ಮಕ್ಕಳ ಮನೋವಿಕಾಸಕ್ಕೆ ಕಾರಣವಾಗುತ್ತದೆ. ಅಂತಹ ಕಲಿಕೆಯನ್ನು ಇಲ್ಲಿನ ಶಿಕ್ಷಕರು ತಮ್ಮ ವೃತ್ತಿಯಲ್ಲಿ ಅಳವಡಿಸಿಕೊಂಡಿರುವುದು ತುಂಬಾ ಸಂತಸದ ಸಂಗತಿ ಎಂದರು.
ಮಕ್ಕಳು ಹೆಚ್ಚಿಗೆ ಓದುವ ಕಡೆ ಗಮನ ಹರಿಸಿ, ಸಾಮಾಜಿಕ ಜಾಲತಾಣಗಳಿಂದ ದೂರವಿದ್ದಷ್ಟೂ ಅವರ ಕನಸು ನನಸಾಗುವುದರ ಜೊತೆಗೆ ಹಿರಿಯ ಆಸೆಯನ್ನು ಈಡೇರಿಸಿದ ಸಂತೃಪ್ತಿ ನಮಗಿರುತ್ತದೆ. ಯಾವುದೇ ದುಶ್ಚಟಗಳಿಗೆ ಒಳಗಾಗದೇ ತಮ್ಮನ್ನು ತಾವು ಮಾದರಿ ವ್ಯಕ್ತಿಯಾಗಿ, ಇನ್ನೊಬ್ಬರಿಗೆ ನಮ್ಮ ವ್ಯಕ್ತಿತ್ವ ದಾರಿಯಾಗಬೇಕು. ಅಂತಹ ವ್ಯಕ್ತಿತ್ವವನ್ನು ನಾವು ಸಂಪಾದಿಸಬೇಕು ಎಂದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ತಿಳಿಸಿದರು.

ಸಂಸ್ಥೆಯ ಅಧ್ಯಕ್ಷರಾದ ಸುಬ್ರಮಣ್ಯ.ಎ ಅವರು ಮಾತನಾಡಿ, “ಇಂದಿನ ಮಕ್ಕಳು ತಮ್ಮ ಭವಿಷ್ಯವನ್ನು ಶಾಲೆಯ ಶಿಕ್ಷಕರ ಮಾರ್ಗದರ್ಶನದೊಂದಿಗೆ ಹಾಗೂ ಮನೆಯ ಹಿರಿಯರ ಸಂಸ್ಕಾರದೊಂದಿಗೆ ಉತ್ತಮವಾದ ಆಲೋಚನೆಯೊಂದಿಗೆ ರೂಪಿಸಿಕೊಳ್ಳಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಾಲೆಗೆ ದಾಖಲಾದ ನೂತನ ಮಕ್ಕಳು ನಡೆಸಿಕೊಟ್ಟ ಫ್ಯಾಶನ್ ಶೋ ಕಾರ್ಯಕ್ರಮದ ಪ್ರಮುಖ ಅಂಶವಾಗಿದ್ದು, ಇತರ ಮಕ್ಕಳಿಂದ ನಡೆದ ನೃತ್ಯ, ಗಾಯನ, ನಾಟಕ, ಮುಂತಾದ ಚಟುವಟಿಕೆಗಳು ನೋಡುಗರ ಗಮನ ಸೆಳೆಯಿತು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಸ್ವರೂಪ್, ಪ್ರಾಂಶುಪಾಲಾದ ರೆಮ್ಯ ಬಿ.ವಿ. ಹಾಗೂ ಶಿಕ್ಷಕವೃಂದ, ವಿದ್ಯಾರ್ಥಿವೃಂದ ಇದ್ದರು.
