ಬೆಂಗಳೂರು: ದೇಶದಲ್ಲಿಯೇ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಈ ಘನತೆಗೆ ಧಕ್ಕೆ ಬರುವಂತೆ ನಡೆದುಕೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಪರಿಷತ್ತನ್ನು ತನ್ನ ವಶಕ್ಕೆ ಪಡೆದುಕೊಳ್ಳಬೇಕೆಂದು ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ತಿನ ಸಂಸ್ಥಾಪಕ ಅದ್ಯಕ್ಷ ಹುಲಿಕಲ್ ನಟರಾಜ್ (Hulikal Nataraj) ಒತ್ತಾಯಿಸಿದ್ದಾರೆ.
ಈ ಕುರಿತಂತೆ ಪ್ರಕಟಣೆ ನೀಡಿರುವ ಅವರು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವಿಜ್ಞಾನದ ದಾರಿ ಬಿಟ್ಟು ಎಷ್ಟೋ ಕಾಲವಾಗಿದ್ದು ಅದರಲ್ಲಿ ಅಧಿಕಾರ ಲಾಲಸೆಯ ಪಟ್ಟಭದ್ರ ಹಿತಾಸಕ್ತಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ಅಧಿಕಾರ ಹಿಡಿದು ಕುಳಿತಿವೆ.
ಅಲ್ಲಿದ್ದ ಸಾರ್ವಜನಿಕರ ಕೋಟ್ಯಂತರ ಹಣವು ಈಗ ಖಾಲಿಯಾಗಿ ವಿಜ್ಞಾನ ಕಾರ್ಯಕ್ರಮಗಳಿಗೆ ಬೊಕ್ಕಸ ಖಾಲಿಯಾಗಿದೆ. ಉದ್ಯೋಗಿಗಳ ವೇತನಕ್ಕೂ ಹಣವಿಲ್ಲ. ಇಂತಹ ಪರಿಸ್ಥಿತಿಗೆ ಕಾರಣ ಯಾರು? ಈ ಸಮಸ್ಯೆಯಿಂದಾಗಿ ವಿಜ್ಞಾನ ಪರಿಷತ್ತು ಕೈಗೊಳ್ಳಬೇಕಾದ ಅಸಂಖ್ಯ ವಿಜ್ಞಾನ ಪ್ರಸರಣ ಕಾರ್ಯಕ್ರಮಗಳಿಗೆ ತಡೆಯುಂಟಾಗಿದೆ.
ವೈಜ್ಞಾನಿಕ ಮನೋಭಾವದ ಗಂಧ ಗಾಳಿ ಇಲ್ಲದೇ ಇರುವವರು ಅಲ್ಲಿ ಅಧಿಕಾರ ಹಿಡಿದು ಸದಾ ತಂಬಾಕು ಜಗಿಯುತ್ತಾ ವಿಜ್ಞಾನವನ್ನು ಮೂಲೆಗುಂಪು ಮಾಡಿರುವುದು ವಿಷಾದಕರ.
ವಿಜ್ಞಾನದ ಅರಿವು ಇಲ್ಲದಿದ್ದರೂ ಅಧಿಕಾರವನ್ನು ಹೇಗೆ ತಮ್ಮ ಮುಷ್ಠಿಯಲ್ಲಿರಿಸಿಕೊಳ್ಳಬೇಕು ಎಂಬ ಚಾಕಚಕ್ಯತೆ ಪ್ರಸ್ತುತದ ಅಧಿಕಾರಸ್ಥರಿಗೆ ಇದೆ. ಅದಕ್ಕಾಗಿ ಲಕ್ಷಾಂತರ ರೂಗಳನ್ನು ಒಂದೇ ಕಂತಿನಲ್ಲಿ ಜಮಾ ಮಾಡಿ ತಮ್ಮವರನ್ನೇ ಸದಸ್ಯರನ್ನು ಮಾಡಿ ಮೌಡ್ಯತೆಯನ್ನು ಬಿತ್ತುತ್ತಾ ಅಧಿಕಾರ ಲಾಲಸೆಯಲ್ಲಿ ಮೆರೆಯುತ್ತಿದ್ದಾರೆ.
ಡಾ.ಎಚ್.ನರಸಿಂಹಯ್ಯ ಅವರು ರಾಜ್ಯದಲ್ಲಿ ವಿಜ್ಞಾನದ ಚಟುವಟಿಕೆಗಳನ್ನು ಸಕ್ರಿಯವಾಗಿ ನಡೆಸಲು, ವೈಜ್ಞಾನಿಕ ಮನೋಭಾವ ಮೂಡಿಸಲು ಮಹದಾಸೆಯಿಂದ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿಗೆ ಚಾಲನೆ ನೀಡಿದ್ದರು. ಈಗ ಅವರ ಆಶಯಗಳು ಮಣ್ಣುಪಾಲಾಗಿವೆ.
ಅಧಿಕಾರಕ್ಕಾಗಿ ತಮಗೆ ಬೇಕಾದವರನ್ನು ಸದಸ್ಯರನ್ನಾಗಿಸಿ ಅಲ್ಲಿ ಸದಾಕಾಲ ಅಧಿಕಾರ ಹಿಡಿದು ಕೂರುವ ದುರಾಸೆಗೆ ಕರ್ನಾಟಕದ ಮಾನ್ಯ ಉಚ್ಚ ನ್ಯಾಯಾಲಯ ತಡೆಯಾಜ್ಞೆ ನೀಡಿರುವುದು ಈ ನಿಟ್ಟಿನಲ್ಲಿ ಸ್ವಾಗತಾರ್ಹ. ಮಾನ್ಯ ಮುಖ್ಯಮಂತ್ರಿಗಳು ಈ ಕುರಿತು ಗಮನ ಹರಿಸಬೇಕು.
ರಾಜ್ಯದಲ್ಲಿ ವೈಜ್ಞಾನಿಕ ಮನೋಭಾವದ ಪ್ರಸಾರಕ್ಕೆ ಈ ಸರ್ಕಾರವು ಅತ್ಯಂತ ಆದ್ಯತೆ ನೀಡಿದೆ. ಆದ್ದರಿಂದ ತಮಗೆ ಬೇಕಾದ ಸದಸ್ಯರನ್ನು ಸೇರ್ಪಡೆ ಮಾಡಿಕೊಂಡು ತಮಗೆ ಬೇಕಾದಂತೆ ಪರಿಷತ್ತಿನ ಚುಕ್ಕಾಣಿ ಹಿಡಿದು ನಡೆಸುತ್ತಿರುವ ದುಷ್ಟಶಕ್ತಿಗಳನ್ನು ಮಟ್ಟ ಹಾಕಲು ಕರ್ನಾಟಕ ಸರ್ಕಾರ ಮುಂದಾಗಬೇಕು. ತಕ್ಷಣವೇ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತನ್ನು ಸರ್ಕಾರದ ವಶಕ್ಕೆ ಪಡೆದುಕೊಳ್ಳಬೇಕು ಎಂದು ಈ ಮೂಲಕ ಸರ್ಕಾರವನ್ನು ಹುಲಿಕಲ್ ನಟರಾಜ್ ಒತ್ತಾಯಿಸಿದ್ದಾರೆ.