ದೊಡ್ಡಬಳ್ಳಾಪುರ: ತಾಲೂಕಿನ ಕಲ್ಲುಕೋಟೆಯಲ್ಲಿ ಪಾರಂಪರಿಕವಾಗಿ ನಡೆದುಕೊಂಡು ಬಂದಿರುವ ಭೂತ ನೆರಿಗೆ (Bhuta Nerige) ಹಬ್ಬ ಆಚರಣೆ ಹಾಗೂ ಲಕ್ಷ್ಮೀ ನರಸಿಂಹ ಸ್ವಾಮಿ ಜಾತ್ರೆ ಸಂಭ್ರಮದಿಂದ ನೆರವೇರಿತು.
ಹುಟ್ಟಲು ಗೋಪುರದ ಬಳಿಯಿಂದ ತಮಟೆ ವಾದ್ಯಗಳೊಂದಿಗೆ ತಮಟೆ ವಾದ್ಯಗಳೊಂದಿಗೆ ಆರಂಭವಾದ ಭೂತಗಳ ಆರ್ಭಟ ಊರಿನ ವಿವಿಧಡೆ ಸಂಚರಿಸಿ. ಮನೆಮನೆಗೆ ತೆರಳಿ ಪ್ರಸಾದ ಸ್ವೀಕರಿಸಿ ನಂತರ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದಲ್ಲಿ ಮುಕ್ತಾಯವಾಯಿತು.
ಕೆಂಚಣ್ಣ, ಕರಿ ಯಣ್ಣ, ಪಾಪಣ್ಣ, ಲಕ್ಷ್ಮೀನರಸಿಂಹಸ್ವಾಮಿ (ಭೂತಗಳ ವೇಷಧಾರಿಗಳು) ಆರಂಭದಲ್ಲಿ ಭಕ್ತಾದಿಗಳಿಂದ ಪೂಜೆ ಸ್ವೀಕರಿಸಿ, ಕೆರಳಲು ಧೂಪ ಹಾಕಿಸಿಕೊಂಡು ಆರಂಭಿಸಿದರು.
ಭೂತಗಳ ಕೆರಳಿಕೆಗೆ ಜನ ಬೆಚ್ಚಿ ಓಡಿದರು.
ಭೂತಗಳ ವೇಷಧಾರಿಗಳು ಕೈಯಲ್ಲಿ ಭೂತದ ಗುರಾಣಿ ಹಿಡಿದು, ನರ್ತನ ಮಾಡುತ್ತ ಕೈಯಲ್ಲಿನ ಭತ್ತವನ್ನು ಬೀಸುತ್ತ ಜನರ ಗುಂಪಿನತ್ತ ನುಗ್ಗಲು ಆರಂಭಿಸಿದವು.
ಕೋಪಗೊಂಡಿರುವ ಭೂತಗಳನ್ನು ಸಮಾಧಾನ ಪಡಿಸಲು ಹಲಸಿನ ಹಣ್ಣಿನಿಂದ ತಯಾರಿಸಲಾದ ರಸಾಯನವನ್ನು ಭೂತಗಳಿಗೆ ತಿನ್ನಿಸಲಾಯಿತು.
ಊರಿನಲ್ಲೆಲ್ಲಾ ಅಡ್ಡಾಡಿಕೊಂಡು ಮನೆಗಳ ಬಳಿ ಬಂದು ಪೂಜೆ ಸ್ವೀಕರಿಸಿದ ನಂತರ ದೇವಾಲಯದಲ್ಲಿ ಭೂತ ನೆರಿಗೆ ಮುಕ್ತಾಯವಾಯಿತು.
ಜಾತ್ರೆಯ ಅಂಗವಾಗಿ ಲಕ್ಷ್ಮಿನರಸಿಂಹಸ್ವಾಮಿಗೆ ಅಭಿಷೇಕ ಹಾಗೂ ದೇವಾಲಯಗಳಲ್ಲಿ ವಿಶೇಷ ಬೆಣ್ಣೆ ಅಲಂಕಾರ, ಪೂಜಾ ಕಾರ್ಯಕ್ರಮಗಳು ನಡೆದವು. ಅಕ್ಕಪಕ್ಕದ ಗ್ರಾಮಸ್ಥರು ಟ್ರಾಕ್ಟರ್‌ಗಳಲ್ಲಿ ಆಗಮಿಸಿ ಜಾತ್ರೆಯಲ್ಲಿ ಪಾಲ್ಗೊಂಡು ಮಜ್ಜಿಗೆ, ಪಾನಕ ವಿತರಣೆ ಮಾಡಿದರು.
ಸುಮಾರು 500 ವರ್ಷಗಳ ಇತಿಹಾಸವಿರುವ ಭೂತನೆರಿಗೆ ಜಾನಪದ ಉತ್ಸವವು ತಾಲೂಕಿನ ತೂಬಗೆರೆ ಹಾಗೂ ಕಲ್ಲುಕೋಟೆ ಗ್ರಾಮಗಳಲ್ಲಿ ಮಾತ್ರ ವಿಶಿಷ್ಠವಾಗಿ ಆಚರಿಸಲ್ಪಡುತ್ತದೆ.