ದೊಡ್ಡಬಳ್ಳಾಪುರ: ನಗರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸೆವೆನ್ ಹಿಲ್ಸ್ ಆಸ್ಪತ್ರೆ (Seven Hills Hospital) ವಿರುದ್ಧ ಕಾರ್ಮಿಕರು ಅಹೋರಾತ್ರಿ ಪ್ರತಿಭಟನೆ ಆರಂಭಿಸಿದ್ದಾರೆ.
ಕೋರ್ಟ್ ರಸ್ತೆಯಲ್ಲಿನ ಆಸ್ಪತ್ರೆ ಆವರಣದಲ್ಲಿ ಪ್ರತಿಭಟನೆ ಆರಂಭಿಸಿರುವ ಕಾರ್ಮಿಕರು ವೇತನಕ್ಕಾಗಿ ಒತ್ತಾಯಿಸಿ, ಮಾಲೀಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುಮಾರು 20ಕ್ಕೂ ಹೆಚ್ಚು ಮಂದಿ ಕಾರ್ಮಿಕರಿಗೆ ವೇತನ ನೀಡದೆ, ಆಸ್ಪತ್ರೆಯನ್ನು ಮಾರಾಟ ಮಾಡಿದ್ದಾರೆ ಎಂಬ ಆರೋಪ ಕಾರ್ಮಿಕರದ್ದಾಗಿದೆ.
ಈ ಕುರಿತಂತೆ ಕಳೆದ ಒಂದು ತಿಂಗಳ ಹಿಂದಿನಿಂದಲೂ ವೇತನಕ್ಕಾಗಿ ಕಾರ್ಮಿಕರು ಹೋರಾಟ ನಡೆಸುತ್ತಿದ್ದು, ಮಾಲೀಕರು ಸ್ಪಂದಿಸುತ್ತಿಲ್ಲ ಎನ್ನಲಾಗಿದೆ.
ಇನ್ನೂ ಸ್ಥಳಕ್ಕೆ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ಕಾರ್ಯದರ್ಶಿ ರಾಜಘಟ್ಟ ರವಿ ಭೇಟಿ ನೀಡಿ ಕಾರ್ಮಿಕರ ಹೋರಾಟಕ್ಕೆ ಬೆಂಬಲ ನೀಡಿದ್ದು, ಕಾರ್ಮಿಕ ಇಲಾಖೆಗೆ ಹಾಗೂ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮಿ ಚೌಧರಿ ಅವರಿಗೆ ದೂರು ನೀಡಲು ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.