ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ (Bangalore) ಹೆಸರನ್ನು ಬೆಂಗಳೂರು ಉತ್ತರ ಜಿಲ್ಲೆ ಎಂದು ಮರು ನಾಮಕರಣ ಮಾಡುವ ಪ್ರಸ್ತಾವನೆ ಜುಲೈ 2 ರಂದು ನಂದಿಬೆಟ್ಟದಲ್ಲಿ ನಡೆಯುತ್ತಿರುವ 2025ನೇ ಸಾಲಿನ 14 ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆಗಾಗಿ ಮಂಡಿಸಲಾಗುತ್ತಿದೆ ಎಂದು ಸರ್ಕಾರದ ಉನ್ನತ ಮೂಲಗಳು ತಿಳಿಸಿವೆ.
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣಗೊಂಡ ನಂತರ ಈಗ ಹೆಸರಿನ ಬದಲಾವಣೆ ಸರದಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯದ್ದಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳು ಸಲ್ಲಿಸಿರುವ ಪ್ರಸ್ತಾವೆಯಲ್ಲಿ ಬೆಂಗಳೂರು ಗ್ರಾಮಾಂತರ ಎಂಬ ಹೆಸರಿನಲ್ಲಿ ಯಾವುದೇ ಐತಿಹಾಸಿಕ ಸಂಪರ್ಕ ಇರುವುದಿಲ್ಲ. ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಅವಿಭಜಿತ ಬೆಂಗಳೂರು ಜಿಲ್ಲೆಯಿಂದ ಸರ್ಕಾರದ ಆದೇಶದಂತೆ 31 ಜುಲೈ 1986ರಲ್ಲಿ ದೊಡ್ಡಬಳ್ಳಾಪುರ, ಹೊಸಕೋಟೆ, ನೆಲಮಂಗಲ,ರಾಮನಗರ,ಮಾಗಡಿ,ಕನಕಪುರ,ಚನ್ನಪಟ್ಟಣ ತಾಲ್ಲೂಕುಗಳನ್ನೊಳಗೊಂಡು ಪ್ರತ್ಯೇಕ ಜಿಲ್ಲೆಯಾಗಿ ಕಾರ್ಯನಿರ್ವಹಿಸಿತ್ತು.
ನಂತರದಲ್ಲಿ ಸರ್ಕಾರದ ಅಧಿಸೂಚನೆಯಂತೆ 2007ರ ಆಗಸ್ಟ್ 3 ರಂದು ಜಿಲ್ಲಾಧಿಕಾರಿಯವರು ನೀಡಿರುವ ಪ್ರಸ್ತಾವನೆಯಂತೆ ಬೆಂಗಳೂರು ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳಾಗಿ ವಿಭಜನೆಯಾಗಿತ್ತು.
ಪ್ರಸ್ತುತ ಬೆಂಗಳೂರು ಗ್ರಾಮಾಂತರ ಜಿಲ್ಲಾ ವ್ಯಾಪ್ತಿಯಲ್ಲಿ ದೇವನಹಳ್ಳಿ, ಹೊಸಕೋಟೆ, ದೊಡ್ಡಬಳ್ಳಾಪುರ ಹಾಗೂ ನೆಲಮಂಗಲ ತಾಲ್ಲೂಕುಗಳು ಇವೆ. ಈಗಾಗಲೇ ಬೆಂಗಳೂರು ವಿಶ್ವ ವಿದ್ಯಾಲಯವನ್ನು ವಿಭಜನೆ ಮಾಡಿದ ಸಂದರ್ಭದಲ್ಲಿ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯನ್ನು ಒಳಗೊಂಡಂತೆ ಬೆಂಗಳೂರು ಉತ್ತರ ವಿಶ್ವ ವಿದ್ಯಾಲಯವನ್ನು ಸ್ಥಾಪನೆ ಮಾಡಲಾಗಿದೆ.
ಹೆಸರು ಯಾವುದೇ ಇರಲಿ, ಬೆಂಗಳೂರು ಮುಂದೆ ಸೇರಿರಲಿ
ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಇದುವರೆಗೂ ಯಾವುದೇ ತಾಲ್ಲೂಕಿನ ನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಸರ್ಕಾರ ಘೋಷಣೆ ಮಾಡಿಲ್ಲ. ಹಾಗಾಗಿ ಜಿಲ್ಲಾ ಕೇಂದ್ರವೇ ಇಲ್ಲದ ಜಿಲ್ಲೆಯಾಗಿರುವ ರಾಜ್ಯದ ಏಕೈಕ ಜಿಲ್ಲೆಯಾಗಿದೆ ಬೆಂಗಳೂರು ಗ್ರಾಮಾಂತರ ಜಿಲ್ಲೆ.
ಈಗ ರಾಜ್ಯದಲ್ಲಿ ಜಿಲ್ಲೆಗಳ ಹೆಸರಿನ ಬದಲಾವಣೆ ಪರ್ವ ಪ್ರಾರಂಭವಾಗಿದೆ. ಇದೇ ಸಂದರ್ಭದಲ್ಲಿ ಅಂತರ ರಾಷ್ಟ್ರೀಯ ಮಟ್ಟದಲ್ಲಿ ‘ಬೆಂಗಳೂರು’ ಹೆಸರು ಹೆಚ್ಚು ಜನಮನ್ನಣೆ ಪಡೆದಿದೆ. ಇದರಿಂದಾಗಿಯೇ ಉತ್ತರ, ದಕ್ಷಿಣ ಎನ್ನುವುದಕ್ಕಿಂತಲು ಮೊದಲು ‘ಬೆಂಗಳೂರು’ ಹೆಸರು ಬರಬೇಕು ಎನ್ನುವ ವ್ಯಾಮೋಹ ಎಲ್ಲರದ್ದು. ಹೀಗಾಗಿ ‘ಬೆಂಗಳೂರು ಉತ್ತರ ಜಿಲ್ಲೆ’ಯಾಗಿ ಹೆಸರು ಬದಲಾವಣೆಯಾದರು ಸಹ ಯಾವುದೇ ಆರ್ಥಿಕ ಚಟುವಟಿಕೆಗಳಿಗು ಧಕ್ಕೆಯಾಗುವುದಿಲ್ಲ ಎನ್ನುವುದು ಸಾರ್ವಜನಿಕರ ಅಭಿಪ್ರಾಯ.