ದೊಡ್ಡಬಳ್ಳಾಪುರ: ತಾಲೂಕಿನಲ್ಲಿ 2025-26ನೇ ಸಾಲಿನ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯನ್ನು (Karnataka Farmer Safety Prime Minister Fasal Bima Yojana) ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ ಎಂದು ಸಹಾಯಕ ಕೃಷಿ ನಿರ್ದೇಶಕ ಡಾ.ಪಿ.ರಾಘವೇಂದ್ರ ಅವರು ತಿಳಿಸಿದ್ದಾರೆ.
ಈ ಕುರಿತಂತೆ ಪ್ರಕಟಣೆ ನೀಡಿರುವ ಅವರು, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಇಲ್ಲಿಯವರೆಗೂ ವಾರ್ಷಿಕ ಮಳೆ 192 ಮಿ.ಮೀ.ಗೆ 280.38 ಮಿ.ಮೀ ರಷ್ಟು ಮಳೆ ಆಗಿದ್ದು, ಶೇ.68.47 ರಷ್ಟು ಹೆಚ್ಚಿಗೆ ಮಳೆಯಾಗಿರುತ್ತದೆ. ಕೃಷಿ ಭೂಮಿ ಸಿದ್ದತೆ ಕಾರ್ಯ ಭರದಿಂದ ಸಾಗಿದ್ದು, ಅಲ್ಲಲ್ಲಿ ಮುಸುಕಿನ ಜೋಳ, ರಾಗಿ, ತೊಗರಿ, ನೆಲಗಡಲೆ, ಅಲಸಂದೆ, ಅವರೆ ಬಿತ್ತನೆ ಕಾರ್ಯ ಮುಂದುವರಿದಿದೆ.
ಪ್ರಸ್ತುತ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಮೋಡ ಮುಸುಕಿದ ವಾತಾವರಣವಿದ್ದು, ಗಾಳಿಯ ವೇಗ ಹೆಚ್ಚಾಗಿರುತ್ತದೆ. ಹಾಗೂ ಅಲ್ಲಲ್ಲಿ ಚದುರಿದಂತೆ ತುಂತುರು ಮಳೆಯಾಗುತ್ತದೆ. ಆದ ಕಾರಣ ವಿವಿಧ ಬೆಳೆಗಳಲ್ಲಿ ರೈತರು ದೀರ್ಘಾವಧಿ ತಳಿಗಳ ಬದಲು ಮಧ್ಯಮಾವಧಿ ಅಥವಾ ಅಲ್ಪಾವಧಿ ತಳಿಗಳ ಬಿತ್ತನೆ ಕೈಗೊಳ್ಳಬಹುದಾಗಿರುತ್ತದೆ.
ಬೆಳೆ ಸಂದಿಗ್ಧ ಪರಿಸ್ಥಿತಿಯ ಸಂದರ್ಭದಲ್ಲಿ ರೈತರ ಆರ್ಥಿಕ ಭದ್ರತೆಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾವು “ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಭೀಮಾ (ವಿಮಾ) ಯೋಜನೆ” ಯನ್ನು ಜಾರಿಮಾಡಲಾಗಿರುತ್ತದೆ.
ಆದ್ದರಿಂದ 2025-26ನೇ ಸಾಲಿನ ಮುಂಗಾರು ಹಂಗಾಮಿಗೆ ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ಆಯ್ಕೆಯಾಗಿದ್ದು, ದೊಡ್ಡಬಳ್ಳಾಪುರ ತಾಲ್ಲೂಕಿನಲ್ಲಿ ಅಧಿಸೂಚಿತ ಬೆಳೆಗಳಾದ ನೆಲಗಡಲೆ ( ಮಳೆಯಾಶ್ರಿತ) , ತೊಗರಿ ( ಮಳೆಯಾಶ್ರಿತ), ರಾಗಿ (ಮಳೆಯಾಶ್ರಿತ ಮತ್ತು ನೀರಾವರಿ) ಮುಸುಕಿನ ಜೋಳ (ಮಳೆಯಾಶ್ರಿತ ಮತ್ತು ನೀರಾವರಿ) ಬೆಳೆಗಳನ್ನು ಬೆಳೆಯುವ ರೈತರು ನೊಂದಾಹಿಸಿಕೊಳ್ಳಬಹುದು.
ಬೆಳೆ ಸಾಲ ಪಡೆಯುವ ರೈತರಿಗೆ ಈ ಯೋಜನೆಯಲ್ಲಿ ನೊಂದಣಿ ಮಾಡಿಕೊಳ್ಳಲು ಐಚಿಕ ಆಯ್ಕೆಯ ಅವಕಾಶವಿದೆ. ಆದರೆ ಅಧಿಸೂಚಿತ ಬೆಳೆಗಳಿಗೆ ಬೆಳೆ ಸಾಲ ಪಡೆಯುವ ರೈತರನ್ನು ಕಡ್ಡಾಯವಾಗಿ ಬೆಳೆ ವಿಮೆಗೆ ಒಳಪಡಿಸಲಾಗುವುದು.
ಮುಸುಕಿನ ಜೋಳ ಹಾಗೂ ರಾಗಿ ನೊಂದಾಯಿಸಿಕೊಳ್ಳಲು ಕೊನೆಯ ಆಗಸ್ಟ್ 16 ಕೊನೆಯ ದಿನವಾಗಿದೆ. ಆದ್ದರಿಂದ ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ಕಂಪನಿಗೆ ವಿಮಾ ಕಂತಿನ ಮೊತ್ತವನ್ನು ಪಾವತಿಸಲು ಹೆಚ್ಚಿನ ವಿವರಗಳಿಗೆ ಶುಲ್ಕರಹಿತ ಸಹಾಯವಾಣಿ 1800 425 0505 ಕರೆ ಮಾಡಬಹುದು.
ಅಥವಾ ಸಮೀಪದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಿ, ಹೆಚ್ಚಿನ ಸಂಖ್ಯೆಯಲ್ಲಿ ವಿಮಾ ಯೋಜನೆಯಲ್ಲಿ ಪಾಲ್ಗೊಂಡು ಪ್ರಯೋಜನ ಪಡೆಯುವಂತೆ ರಾಘವೇಂದ್ರ ಅವರು ರೈತರಲ್ಲಿ ಮನವಿ ಮಾಡಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)