ದೊಡ್ಡಬಳ್ಳಾಪುರ: ತಾಲೂಕಿನ ಐತಿಹಾಸಿಕ ಹುಲುಕುಡಿ ಕ್ಷೇತ್ರದಲ್ಲಿ ಹುಲುಕುಡಿ ಗಿರಿ ಪ್ರದಕ್ಷಿಣೆ (Hulukudi Giri Pradakshine) ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಬೆಟ್ಟದ ತಪ್ಪಲಿನ ವೀರಗಣಪತಿ ದೇವಾಲಯದಲ್ಲಿ ಪೂಜೆ ಸಲ್ಲಿಸುವಮೂಲಕ ಗುರುವಾರ ಬೆಳಗ್ಗೆ 9.40 ಗಂಟೆಗೆ ಆರಂಭವಾದ ಪಾದಯಾತ್ರೆಯಲ್ಲಿ ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸಾವಿರಾರು ಜನ ಭಕ್ತಾದಿಗಳು ಭಾಗವಹಿಸಿದ್ದರು.
10 ಕಿ.ಮೀ ಪಾದಯಾತ್ರೆ: ಹುಲುಕುಡಿಬೆಟ್ಟದ ತಪ್ಪಲಿನಿಂದ ಆರಂಭವಾದ ಗಿರಿಪ್ರದಕ್ಷಿಣೆ ಹಳೇಕೋಟೆ, ತಳಕಿನ ಕೆರೆ, ಮಾಡೇಶ್ವರ ಮಾರ್ಗವಾಗಿ ಸುಮಾರು 10 ಕಿ.ಮೀ. ಸಾಗಿ ಮಧ್ಯಾಹ್ನ 1 ಗಂಟೆಗೆ ಮುಕ್ತಾಯವಾಯಿತು.
ಹುಲುಕುಡಿ ಬೆಟ್ಟದ ತಪ್ಪಲಿನ ಮಾಡೇಶ್ವರದಲ್ಲಿ ಚೋಳರ ಕಾಲದಲ್ಲಿ ಸ್ಥಾಪಿತವಾಗಿರುವ ಬೃಹತ್ ಶಿವಲಿಂಗಮೂರ್ತಿ ಹೊಂದಿರುವ ಮುಕ್ಕಣ್ಣೇಶ್ವರ, ಬಸವಣ್ಣ, ಹಾಲು ಬಾವಿ ಆಂಜನೇಯಸ್ವಾಮಿ, ಬೊನ್ನಹಳ್ಳಿ ಗ್ರಾಮದಲ್ಲಿನ ಚನ್ನಕೇಶವಸ್ವಾಮಿ, ನರಸಿಂಹಸ್ವಾಮಿ, ಚೌಡೇಶ್ವರಿ ದೇವರ ದರ್ಶನಗಳನ್ನುಮಾಡಿ ಭಕ್ತಾದಿಗಳು ಪುನೀತರಾದರು.
ಗಿರಿ ಪ್ರದಕ್ಷಿಣೆಯಲ್ಲಿ ಭಾಗವಹಿಸಿದ್ದ ಭಕ್ತಾದಿಗಳಿಗೆ ಶ್ರೀ ಹುಲುಕುಡಿ ವೀರಭದ್ರಸ್ವಾಮಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್‌ವತಿಯಿಂದ ಅನ್ನಸಂತರ್ಪಣೆ ನಡೆಯಿತು. ಗಿರಿ ಪ್ರದಕ್ಷಿಣೆಯಲ್ಲಿ ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ಮಾರ್ಗದುದ್ದಕ್ಕೂ ಪಾನಕ, ಮಜ್ಜಿಗೆ, ಕೋಸಂಬರಿ ವಿತರಣೆ ನಡೆಯಿತು.
ಗಿರಿ ಪ್ರದಕ್ಷಿಣೆ ಚಾಲನೆ ಕಾರ್ಯಕ್ರಮದಲ್ಲಿ ಟ್ರಸ್ಟ್ ಸದಸ್ಯರಾದ ನಂದಕುಮಾರ್, ಚನ್ನೇಗೌಡ, ಸಿದ್ದಲಿಂಗಪ್ಪ, ನಂಜುಂಡಪ್ಪ, ಆನಂದ್, ಮಾರೇಗೌಡ, ಬೈರೇಗೌಡ, ಅರವಿಂದ್ ಮತ್ತಿತರರಿದ್ದರು.
ಧರ್ಮಸ್ಥಳ ಪಾದಯಾತ್ರಿಗಳಿಂದ ಗಿರಿ ಪ್ರದಕ್ಷಿಣೆ
ದೊಡ್ಡಬೆಳವಂಗಲದ ದೊಡ್ಡಮ್ಮದೇವಿ ಪಾದಯಾತ್ರಿಗಳ ಸಂಘದಿಂದ ಧರ್ಮಸ್ಥಳಕ್ಕೆ ಹೊರಟ್ಟಿದ್ದ ಪಾದಯಾತ್ರಿಗಳು ಗಿರಿ ಪ್ರದಕ್ಷಿಣೆಯಲ್ಲಿ ಭಾಗವಹಿಸಿದ್ದರು.