ಕೋಲಾರ: ಮುಳಬಾಗಿಲು ವಿಧಾನಸಭಾ ಕ್ಷೇತ್ರದಲ್ಲಿ ನನ್ನ ರಾಜ್ಯ ಪ್ರವಾಸ ನಿಗಧಿ ಆಗಿಲ್ಲ ಅಂತ ಮಾಧ್ಯಮದಲ್ಲಿ ಚರ್ಚೆ ಆಗ್ತಿತ್ತು ಆದರೆ ಇಂದು ಗೊಂದಲಕ್ಕೆ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ಅವರು ಮಾಹಿತಿ ನೀಡಿದರು.
ಈ ಬಗ್ಗೆ ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ ಜೆಡಿಎಸ್ ಸದಸ್ಯತ್ವಕ್ಕೆ ಚಾಲನೆ ನೀಡಿ ಮಾತನಾಡಿದರು.
ಶಾಸಕ ಸಮೃದ್ಧಿ ಮಂಜಣ್ಣ ಅವರು ವಿದೇಶಕ್ಕೆ ತೆರಳಿದ್ರು. ಅಲ್ಲಿಯು ಕೂಡ ತಾಲ್ಲೂಕಿನ ಹಾಗೂ ಜಿಲ್ಲೆಯ ರಾಜಕಾರಣದ ಬಗ್ಗೆ ಮಾಧ್ಯಮದಲ್ಲಿ ಚರ್ಚೆ ಆಗುವುದನ್ನು ಶಾಸಕ ಮಂಜಣ್ಣ ಅವರು ತಿಳಿದುಕೊಂಡಿದ್ದಾರೆ ಎಂದು ತಿಳಿಸಿದರು.
ನಾನು ರಾಜ್ಯ ಪ್ರವಾಸ ಮಾಡುತ್ತಿರುವುದು ಶೋ ಮಾಡುವುದಕಲ್ಲ.ಇದು ಜೆಡಿಎಸ್ ಪಕ್ಷದ ಶಕ್ತಿ ತೋರಿಸುವ ಕಾರ್ಯಕ್ರಮವಲ್ಲ ಇದು. ನಮ್ಮ ಶಕ್ತಿಯನ್ನು ನಾವು ಎಲ್ಲಿ ತೋರಿಸಬೇಕೆಂದರೆ ಮುಂದಿನ ತಾಪಂ, ಜಿಪಂ ಹಾಗೂ 2028ರ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕುಮಾರಣ್ಣ ಮುಖ್ಯಮಂತ್ರಿ ಮಾಡುವುದರಲ್ಲಿ ತೋರಿಸಬೇಕು ಎಂದು ಹೇಳಿದರು.
ನನ್ನ ರಾಜ್ಯ ಪ್ರವಾಸ 58 ದಿನ ಅಂದುಕೊಂಡೆ ಆದರೆ ದಿನ ಕಳೆದಂತೆ ಅದು ಜಾಸ್ತಿ ಆಗ್ತಿದೆ. ಎಷ್ಟು ದಿನ ಬೇಕಾದರೂ ಆಗಲಿ, ನಾನು ಲೆಕ್ಕಾ ಮಾಡಿ ಬಂದಿಲ್ಲ. ಈ ರಾಜ್ಯ ಪ್ರವಾಸ ಮುಗಿದ ಮೇಲೆ ಮುಂದೆ ಏನು ಮಾಡಬೇಕೆನ್ನುವುದು ಈಗಾಗಲೇ ಆಲೋಚನೆ ಮಾಡಿದ್ದೇನೆ ಎಂದು ಹೇಳಿದರು.
ನಾನು ಇನ್ನ ಮೂರು ವರ್ಷ ಸುಮ್ನೆ ಕೂರೋದಿಲ್ಲ ನಿಮ್ಮನ್ನು ಸುಮ್ನೆ ಕೂರಲು ಬಿಡುವುದಿಲ್ಲ. ಇದು ನಿಮಗೋಸ್ಕರ. ಮುಂದಿನ ಮೂರು ವರ್ಷ ನಾವು ನೀವು ಹೋರಾಟ ಮಾಡಬೇಕಾಗುತ್ತದೆ ಎಂದು ಕಾರ್ಯಕರ್ತರಿಗೆ ಕಿವಿಮಾತು ಹೇಳಿದರು.
2028ರ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ಕ್ಷೇತ್ರಗಳನ್ನು ನಾವು ಗೆಲ್ಲಬೇಕು. ಹಳ್ಳಿಗೆ ತೆರಳಿ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳು, ಹಗರಣಗಳ ಬಗ್ಗೆ ತಿಳಿಸಬೇಕು. ಕಾರ್ಯಕರ್ತರು ಯಾವುದೇ ಕಾರಣಕ್ಕೂ ಧೃತಿಗೆಡಬಾರದು ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.
ಯಾವುದೇ ಕಾರಣಕ್ಕೂ ಸಂಘಟನೆ ಕುಸಿಯಬಾರದು. ಚುನಾವಣೆ ಇನ್ನು ಮೂರು ವರ್ಷ ಇದೆ ಆಗ ನೋಡೋಣ ಎಂಬ ಮನಸ್ಥಿತಿಯಿಂದ ಎಲ್ಲರೂ ಹೊರಗಡೆ ಬರಬೇಕು. ನಾನು ಮೂರು ವರ್ಷ ಮನೆಯಲ್ಲಿ ಕೂರುವುದಿಲ್ಲ. ನನಗೆ ಮೂರು ಸೋಲು ಆಗಿರಬಹುದು ನನ್ನ ರಾಜಕಾರಣ ಮೇಲೆ ಅದು ಯಾವ ಪರಿಣಾಮ ಬೀರಿಲ್ಲ ಎಂದು ಕಾರ್ಯಕರ್ತರಿಗೆ ಧೈರ್ಯ ತುಂಬಿದರು.
ದೇವೇಗೌಡರಿಗೆ ಒಂದು ಮಾತನ್ನು ಕೊಟ್ಟಿದ್ದೇನೆ. ಇನ್ನ ಮೂರು ವರ್ಷದಲ್ಲಿ ಜೆಡಿಎಸ್ ಪಕ್ಷವನ್ನ ಅಧಿಕಾರಕ್ಕೆ ಬರುವುದನ್ನ ನಾನು ಕಣ್ಣಾರೆ ನೋಡಬೇಕೆಂದು ಸನ್ಮಾನ್ಯ ದೇವೇಗೌಡರು ಭಾವನಾತ್ಮಕವಾಗಿ ನನ್ನ ಬಳಿ ಹೇಳಿದ್ದಾರೆ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು 2 ವರ್ಷ ಕಳೆದಿದೆ. ಕರ್ನಾಟಕ ರಾಜ್ಯ ಇತಿಹಾಸದಲ್ಲಿ ಇಂತ ಕೆಟ್ಟ ಸರ್ಕಾರ ಇತಿಹಾಸದ ಪುಟದಲ್ಲಿ ಶಾಶ್ವತವಾಗಿ ಉಳಿಯುತ್ತೆ. ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕುಮಾರಸ್ವಾಮಿ ಅವರು ವಾಗ್ದಾಳಿ ನಡೆಸಿದರು.
ಪ್ರತಿ ತಿಂಗಳು ಗ್ಯಾರಂಟಿ ಯೋಜನೆಯನ್ನು ಕೊಡುತ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದ್ದಾರೆ. ಆದರೆ ಇಲ್ಲಿವರೆಗೂ ಅದು ಸಮರ್ಪಕವಾಗಿ ಜನಕ್ಕೆ ತಲುಪಿದಿಯಾ.? ಸಂಸತ್, ಉಪ ಚುನಾವಣೆ ಬಂದಾಗ ಆರು ತಿಂಗಳಿಗೊಮ್ಮೆ ಫಲಾನುಭವಿಗಳ ಖಾತೆಗಳಿಗೆ ಜಮೆ ಮಾಡ್ತಾರೆ. ಮುಂದಿನ ತಾಪಂ, ಜಿಪಂ ಚುನಾವಣೆ ವರೆಗೂ ಹಣ ಹಾಕುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜಕಾರಣ ಅಧಿಕಾರಕ್ಕೋಸ್ಕರ ಮಾಡುವುದಲ್ಲ. ಸಮಾಜದಲ್ಲಿ ಏನಾದರೂ ಬದಲಾವಣೆ. ಒಂದು ಕ್ರಾಂತಿಕರ ಹೆಜ್ಜೆ ಇಡಬೇಕೆಂಬ ದೃಷ್ಟಿಕೋನದಿಂದ ನಾವು ನೀವು ಹೋರಾಟ ಮಾಡೋಣ ಎಂದು ಯುವ ಸಮುದಾಯಕ್ಕೆ ನಿಖಿಲ್ ಕುಮಾರಸ್ವಾಮಿ ಅವರು ಕರೆ ನೀಡಿದರು.
ಅಧಿಕಾರ ಭಗವಂತ ಕೊಡ್ತಾನೆ. ಅಧಿಕಾರದ ಹಿಂದೆ ಓಡುವುದು ಬೇಡ. ಅಧಿಕಾರ ನಮ್ಮನ್ನ ಹುಡ್ಕೊಂಡು ಬರಬೇಕು. ಕಾಲ ಬರುತ್ತೆ ಪಕ್ಷಕ್ಕಾಗಿ ದುಡಿಯೋಣ. ಧ್ವನಿಯಾಗಿ ಕೆಲಸ ಮಾಡೋಣ ಎಂದು ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿಯವರು ಧೈರ್ಯ ತುಂಬಿದರು.
ಇದಕ್ಕೂ ಮೊದಲು ಭಗವಾನ್ ಶಿರಡಿ ಸಾಯಿಬಾಬಾ ದೇವಸ್ಥಾನಕ್ಕೆ ನಿಖಿಲ್ ಕುಮಾರಸ್ವಾಮಿ ಅವರು ಭೇಟಿ ನೀಡಿ ಆಶೀರ್ವಾದ ಪಡೆದರು. ನಗರದ ಪಟ್ಟಣದಲ್ಲಿ ನಿಖಿಲ್ ಕುಮಾರಸ್ವಾಮಿಯವರಿಗೆ ಹೂವಿನ ಮಳೆ ಸುರಿಸಿ ಅದ್ದೂರಿ ಸ್ವಾಗತ ಕೋರಿದರು.
ಇದೇ ವೇಳೆ ಸಹಸ್ತ್ರಾರು ಸಂಖ್ಯೆಯಲ್ಲಿ ಬೈಕ್ ರ್ಯಾಲಿಯಲ್ಲಿ ಪಾಲ್ಗೊಂಡು ನಿಖಿಲ್ ಕುಮಾರಸ್ವಾಮಿಗೆ ಜೈಕಾರ ಕೂಗುತ್ತಾ ರ್ಯಾಲಿಯಲ್ಲಿ ಪಾಲ್ಗೊಂಡರು.