ಬೆಂಗಳೂರು: ಜಿಲ್ಲಾ (ZP) ಹಾಗೂ ತಾಲೂಕು ಪಂಚಾಯಿತಿಗಳಿಗೆ (TP) ಮೀಸಲಾತಿ ಪ್ರಕ್ರಿಯೆ ಚಾಲ್ತಿಯಲ್ಲಿದ್ದು, ಇದು ಪೂರ್ಣಗೊಂಡ ನಂತರ ಶೀಘ್ರದಲ್ಲೇ ಚುನಾವಣೆ ನಡೆಸಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ಹೇಳಿದರು.
ವಿಧಾನಪರಿಷತ್ ಅಧಿವೇಶನದ ಭೋಜನ ವಿರಾಮದ ನಂತರ ಗಮನ ಸೆಳೆಯುವ ಕಲಾಪದಡಿ ಕಾಂಗ್ರೆಸ್‌ನ ಮಂಜುನಾಥ್ ಭಂಡಾರಿ ಮತ್ತು ಬಿಜೆಪಿಯ ಡಿ.ಎಸ್.ಅರುಣ್ ಈ ಬಗ್ಗೆ ಪ್ರಸ್ತಾಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಮಂಜುನಾಥ್ ಭಂಡಾರಿ, ಬಿಜೆಪಿ ಆಡಳಿತದ ಅವಧಿಯಲ್ಲಿ ಚುನಾವಣೆ ನಡೆಯಬೇಕಾಗಿತ್ತು. ಆದರೆ ಈವರೆಗೂ ತಾಲೂಕು ಮತ್ತು ಜಿಲ್ಲಾ ಪಂಚಾಯಿತಿಗಳಿಗೆ ಚುನಾವಣೆ ನಡೆದಿಲ್ಲ.
ಪಂಚಾಯತ್ ರಾಜ್ ವ್ಯವಸ್ಥೆ ಬಲಿಷ್ಠವಾಗಬೇಕಾದರೆ ಪಂಚಾಯತ್ ಗಳಿಗೆ ಅಧಿಕಾರ ನೀಡಬೇಕು. ಈ ಹಿನ್ನೆಲೆಯಲ್ಲಿ ಸರಕಾರ ಈಗಿರುವ ಕಾನೂನಾತ್ಮಕ ತೊಡಕು ಬಗೆಹರಿಸಿ ಶೀಘ್ರದಲ್ಲೇ ಚುನಾವಣೆ ನಡೆಸಿ ಸರಕಾರಕ್ಕೆ ಮನವಿ ಮಾಡಿದರಲ್ಲದೆ, ಚುನಾವಣೆ ನಡೆಯದೆ ಹಿನ್ನೆಲೆಯಲ್ಲಿ ಹಲವು ಸವಲತ್ತುಗಳು ಸಿಗುತ್ತಿಲ್ಲ. ಸರಕಾರ ಈ ಬಗ್ಗೆ ಹೆಚ್ಚಿನ ಕಾಳಜಿ ತೋರಬೇಕು. ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ನಡೆಸಬೇಕು ಎಂದು ಒತ್ತಾಯಿಸಿದರು.
ಜತೆಗೆ ಗ್ರಾಮ ಪಂಚಾಯಿತಿ ಚುನಾವಣೆಗಳನ್ನು ಪಕ್ಷದ ಚಿಹ್ನೆಯಲ್ಲಿ ನಡೆಸಬೇಕು. ಕೇರಳದಲ್ಲಿ ಚಿಹ್ನೆಯಡಿ ಚುನಾವಣೆ ನಡೆಸಲಾಗುತ್ತಿದೆ. ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಸರಕಾರ ಚುನಾವಣೆಗೆ ಅವಕಾಶ ನೀಡಬೇಕು. ಪಂಚಾಯಿತಿ ಸದಸ್ಯರುಗಳ ಗೌರವಧನ ಹೆಚ್ಚಳ ಸಂಬಂಧ ಸರಕಾರ ತಿದ್ದುಪಡಿ ತರಬೇಕು. ಪಂಚಾಯಿತಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಕೆಲಸದ ಭದ್ರತೆ ನೀಡಬೇಕು ಎಂದು ಭಂಡಾರಿ ಒತ್ತಾಯಿಸಿದರು.
ಏಕಕಾಲದಲ್ಲಿ ಚುನಾವಣೆ ನಡೆಯಲಿ: ಬಿಜೆಪಿಯ ಡಿ.ಎಸ್.ಅರುಣ್ ಮಾತನಾಡಿ, ಸರಕಾರ ಗ್ರಾಮ ಪಂಚಾಯಿತಿಗಳಿಗೆ ಶಕ್ತಿ ನೀಡುವ ಕೆಲಸ ಆಗಬೇಕು. ಸರಕಾರ ಅಸ್ತಿತ್ವಕ್ಕೆ ಬಂದು ಮೂರು ವರ್ಷ ಪೂರೈಸುವತ್ತ ಸಮೀಪಿಸುತ್ತಿದೆ. ದ್ವಿತೀಯ ಹಂತದ ನಾಯಕತ್ವದ ಬೆಳೆಯಲು ಇದಕ್ಕೆ ಅನುಕೂಲವಾಗಲಿದೆ. ಇದಕ್ಕೆ ಕೋಟಾ ಶ್ರೀನಿವಾಸ ಪೂಜಾರಿ ಅವರೇ ಉದಾಹರಣೆ.
ಗ್ರಾಮ ಪಂಚಾಯಿತಿಯಿಂದ ವಿಧಾನ ಪರಿಷತ್ ವರೆಗೆ ಇದೀಗ ಲೋಕಸಭೆಗೂ ಹೆಜ್ಜೆಯಿರಿಸಿದ್ದಾರೆ. ಅಂತಹ ನಾಯಕರು ಹುಟ್ಟಿಕೊಳ್ಳಲು ಪಂಚಾಯಿತಿ ವ್ಯವಸ್ಥೆ ಕಾರಣವಾಗಲಿದೆ ಎಂದರು. ಒಂದೇ ದೇಶ ಒಂದೇ ಚುನಾವಣೆ ಮಾದರಿಯಲ್ಲಿ ಮೂರು ಪಂಚಾಯಿತಿಗಳಿಗೆ ಏಕ ಕಾಲದಲ್ಲಿ ಚುನಾವಣೆ ನಡೆಸುವಂತೆ ಒತ್ತಾಯಿಸಿದರು. ಜತೆಗೆ ಚುನಾವಣೆ ನಡೆಯದಿದ್ದರೆ ಕೇಂದ್ರ ಸರಕಾರ ಅನುದಾನ ಕೂಡ ಕುಂಠಿತವಾಗಲಿದೆ ಎಂದರು.
ಏಕಕಾಲದಲ್ಲಿ ಚುನಾವಣೆ ನಡೆಸಲು ಸಾಧ್ಯವಿಲ್ಲ
ಈ ಹಿಂದೆ ಕ್ಷೇತ್ರ ಪುನರ್ ವಿಂಗಡಣೆ ತೊಡಕಾಗಿತ್ತು. ಅದು ನಿವಾರಣೆಯಾಗಿದೆ. ಮೀಸಲಾತಿ ಪ್ರಕ್ರಿಯೆ ಪೂರ್ಣಗೊಂಡ ನಂತರ ಸರಕಾರ ಚುನಾವಣೆ ನಡೆಸಲಿದೆ.
ಪಂಚಾಯಿತಿಗಳಿಗೆ ಚುನಾವಣೆ ನಡೆಸಬೇಕು ಎಂಬುವುದು ಸರಕಾರದ ಇರಾದೆ. ಆದರೆ, ಜಿಲ್ಲಾ, ತಾಲೂಕು ಹಾಗೂ ಗ್ರಾಮ ಪಂಚಾಯಿತಿಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಆಗದು. ಕಾರಣ ಗ್ರಾಮ ಪಂಚಾಯಿತಿ ಅಧಿಕಾರವಧಿ ಇನ್ನೂ ಒಂದೆರಡು ವರ್ಷವಿದೆ. ಆದರೆ ಮೀಸಲಾತಿ ಪಟ್ಟಿ ಬಿಡುಗಡೆಯಾದ ತಕ್ಷಣ ಸರಕಾರ ಚುನಾವಣೆ ನಡೆಸಲು ಸಿದ್ದವಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.