ದೊಡ್ಡಬಳ್ಳಾಪುರ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣ ಸಮಿತಿ ವತಿಯಿಂದ 79ನೇ ಸ್ವಾತಂತ್ರ್ಯ ದಿನಾಚರಣೆ (Independence Day) ಸಮಾರಂಭ ಆ.15 ರಂದು ಬೆಳಗ್ಗೆ9 ಗಂಟೆಗೆ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ನಡೆಯಲಿದೆ.
ಧ್ವಜಾರೋಹಣವನ್ನು ಉಪವಿಭಾಗಾಧಿಕಾರಿ ಎನ್.ದುರ್ಗಾಶ್ರೀ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಶಾಸಕ ಧೀರಜ್ ಮುನಿರಾಜು ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಪಥ ಸಂಚಲನ, ವಿವಿಧ ಕ್ಷೇತ್ರ ಗಣ್ಯರಿಗೆ ಸನ್ಮಾನ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿರುತ್ತವೆ.
ಮೇಲೆ ಥಳುಕು ಒಳಗೆ ಹುಳುಕು
ಇನ್ನೂ ಸ್ವಾತಂತ್ರ್ಯದಿನದ ಅಂಗವಾಗಿ ದೊಡ್ಡಬಳ್ಳಾಪುರ ತಾಲೂಕಿನ ಸರ್ಕಾರಿ ಕಚೇರಿಗಳನ್ನು ಸಿಂಗರಿಸಲಾಗುತ್ತಿದೆ. ಅಂತೆಯೇ ತಾಲೂಕಿನ ಶಕ್ತಿ ಸೌಧವಾದ ಮಿನಿ ವಿಧಾನಸೌಧದ ಕಚೇರಿಯನ್ನು ತಳಿರು ತೋರಣ, ವಿದ್ಯುತ್ ದೀಪಗಳಿಂದ ಸಿಗರಿಸಲಾಗುತ್ತಿದೆ.
ಆದರೆ ಕಟ್ಟಡದಲ್ಲಿ ಕಟ್ಟಿರುವ ಜೇಡರ ಬಲೆಗಳನ್ನು ಸ್ವಚ್ಚಗೊಳಿಸದೆ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ತಾಲೂಕು ಕಚೇರಿಯ ಹೊರಾಂಗಣದ ಮೇಲ್ಚಾವಣಿಯಲ್ಲಿ ಜೇಡರ ಬಲೆಗಳು ಕಟ್ಟಿದ್ದು, ಸಿಬ್ಬಂದಿಗಳು ಸ್ವಚ್ಚಗೊಳಿಸದೆ, ಹೊರಭಾಗದಲ್ಲಿ ತಳಿರು, ತೋರಣ ಕಟ್ಟಿ, ವಿದ್ಯುತ್ ದೀಪಗಳ ಅಲಂಕಾರ ಮಾಡಿ ಕೆಲಸ ಮಾಡಿ ಮುಗಿಸಿದ್ದಾರೆ. ಆದರೆ ಮೇಲೆಲ್ಲ ಥಳುಕು ಒಳಗೆ ಹುಳುಕು ಎಂಬಂತೆ ಕೆಲಸವಾಗಿದೆ ಎಂಬ ಆಕ್ಷೇಪ ಸಾರ್ವಜನಿಕರದ್ದು.
ಈ ಕುರಿತಂತೆ ಸಾರ್ವಜನಿಕರಾದ ನಾಗರಾಜು, ಹನುಮಂತರಾಜು ಮತ್ತಿತರರು ಎನ್ನುವವರು ಬೇಸರ ವ್ಯಕ್ತಪಡಿಸಿದ್ದು, ಕೂಡಲೇ ಸ್ವಚ್ಚತಾ ಕಾರ್ಯ ನಡೆಸುವಂತೆ ಆಗ್ರಹಿಸಿದ್ದಾರೆ.