ಬೆಂಗಳೂರು: ಸೆಲೆಬ್ರಿಟಿಗಳ ವಿಚಾರವನ್ನೇ ದೇಶದ ಅತಿ ದೊಡ್ಡ ಸಮಸ್ಯೆ ಎಂಬಂತೆ ಕೆಲ ಖಾಸಗಿ ಚಾನೆಲ್ಗಳು (Private channels) ವರದಿ ಪ್ರಸಾರ ಮಾಡುವ ಮೂಲಕ ತಮ್ಮ ಚಾಳಿಯನ್ನೇ ಮುಂದುವರಿಸಿರುವುದು ಸಾರ್ವಜನಿಕ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
ನಟ ದರ್ಶನ್ ಪ್ರಕರಣದಲ್ಲಿ ತೀವ್ರ ಆಕ್ಷೇಪಕ್ಕೆ ಒಳಗಾದರೂ, ಖಾಸಗಿ ಚಾನೆಲ್‌ಗಳ ಖಾತೆಯಲ್ಲಿಯೇ ನೆಟ್ಟಿಗರು ಹಿಗ್ಗಾಮುಗ್ಗಾ ತಾರಾಟೆಗೆ ತೆಗೆದುಕೊಂಡರು, ತಮ್ಮ ವರ್ತನೆ ಮುಂದುವರಿಸಿರುವ ಕೆಲ ಖಾಸಗಿ ಚಾನೆಲ್‌ಗಳು, ಈಗ ನಟ ಅಜಯ್ ರಾವ್ ಅವರ ಕೌಟುಂಬಿಕ ವಿಚಾರವನ್ನು ದೊಡ್ಡದು ಮಾಡಿ, ಗಂಡ-ಹೆಂಡತಿಯ ನಡುವೆ ದೊಡ್ಡ ಮಟ್ಟದಲ್ಲಿ ಬಿರುಕು ಎಂಬಂತೆ ಬಿಂಬಿಸುತ್ತಿವೆ ಎಂಬುದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ.
ಹೌದು ಕನ್ನಡ ಚಿತ್ರರಂಗದ ನಟ ಅಜಯ್ ರಾವ್ ಹಾಗೂ ಅವರ ಪತ್ನಿ ಸ್ವಪ್ನಾ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಇಬ್ಬರು ವಿವಾಹ ವಿಚ್ಚೇದನಕ್ಕೆ ಅರ್ಜಿ ಹಾಕಿದ್ದಾರೆ ಎಂದು ಖಾಸಗಿ ಚಾನೆಲ್ಗಳು ವರದಿ ಮಾಡಿವೆ.
ಈ ಕುರಿತಂತೆ ನಟ ಅಜಯ್ ರಾವ್, ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು ಪರೋಕ್ಷವಾಗಿ ಎಲ್ಲರ ಮನೆಯ ದೋಸೆ ತೂತೆಂಬುದ ಅರಿತು, ಕುಟುಂಬದ ಖಾಸಗಿತನ ಗೌರವಿಸುವಂತೆ ಹೇಳಿದ್ದಾರೆ.
ಅಜಯ್ ರಾವ್ ಪೋಸ್ಟ್
ಈ ಸೂಕ್ಷ್ಮ ಸಮಯದಲ್ಲಿ ನಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸುವಂತೆ ಹಾಗೂ ವ್ಯಯಕ್ತಿಕ ವಿಷಯಗಳಿಗೆ ಸಂಬಂಧಿಸಿದ ಯಾವುದೇ ಸುದ್ದಿಯನ್ನು ಹಂಚಿಕೊಳ್ಳುವುದನ್ನು ಅಥವಾ ಹರಡುವುದನ್ನು ದೂರವಿಡುವಂತೆ ತಮ್ಮನ್ನು ವಿನಮ್ರವಾಗಿ ವಿನಂತಿಸುತ್ತೇನೆ.
ಪ್ರತಿಯೊಂದು ಕುಟುಂಬವೂ ಸವಾಲುಗಳನ್ನು ಎದುರಿಸುತ್ತದೆ, ಅವುಗಳನ್ನು ಖಾಸಗಿಯಾಗಿ ಉಳಿಯುವುವಂತೆ ಸಹಕರಿಸಿ ಎಂದು ಎಲ್ಲರಲ್ಲಿ ಹೃತ್ತೂರ್ವಕ ವಿನಂತಿ.
ನಿಮ್ಮ ಮನವೊಲಿಕೆ, ಬೆಂಬಲ ಮತ್ತು ವಿವೇಕ ನಮಗೆ ಅತ್ಯಂತ ಮುಖ್ಯ. ಎಂದು ಜಾಲತಾಣದಲ್ಲಿ ಬರೆದುಕೊಳ್ಳುವ ಮೂಲಕ ಕೌಟುಂಬಿಕ ಕಲಹವನ್ನು ದೊಡ್ಡದು ಮಾಡಬೇಡಿ ಎಂದು ಪರೋಕ್ಷವಾಗಿ ಕೆಲ ಚಾನೆಲ್ ಗಳಿಗೆ ಜಾಡಿಸಿದ್ದಾರೆ.