ಬೆಂಗಳೂರು: ಧರ್ಮಸ್ಥಳ (Dharmasthala) ಸುತ್ತಮುತ್ತಲು ನೂರಾರು ಶವಗಳನ್ನು ಹೂತಿಟ್ಟ ಆರೋಪ ಪ್ರಕರಣ ಸಂಬಂಧದ ಚರ್ಚೆ ಇಂದು ಸದನದ ಕಲಾಪದಲ್ಲಿ ತೀವ್ರ ಚರ್ಚೆ ನಡೆಯಿತು.
ತನಿಖೆಯ ಮಧ್ಯಂತರ ವರದಿ ಕುರಿತಾಗಿ ವಿಪಕ್ಷನಾಯಕ, ಸದನದ ಸದಸ್ಯರು ಸರ್ಕಾರ ಉತ್ತರಿಸಬೇಕು ಎಂಬ ಒತ್ತಾಯಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಉತ್ತರಿಸಿದರು.
ವ್ಯಕ್ತಿಯೋರ್ವ ಶವಗಳನ್ನು ಹೂಳಲಾಗಿದೆ ಎಂದು ಧರ್ಮಸ್ಥಳ ಪೊಲೀಸ್ ಠಾಣೆ ದೂರಿನ ಬಳಿಕ, ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಯಿತು. ಅಲ್ಲದೆ ರಾಜ್ಯ ಮಹಿಳಾ ಆಯೋಗ ಮನವಿ ಮಾಡಿದ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಎಸ್ಐಟಿ ರಚನೆ ಮಾಡಲಾಯಿತು.
ಎಸ್ಐಟಿ ತಂಡ ಪಾರದರ್ಶಕವಾಗಿ ನಡೆಸುತ್ತಿದೆ. ಈ ವಿಶೇಷ ತನಿಖಾ ತಂಡವನ್ನು ಯಾರ ಒತ್ತಡಕ್ಕೆ ಮಣಿದು ರಚನೆ ಮಾಡಿಲ್ಲ. ಯಾರನ್ನು ರಕ್ಷಣೆ ಅಥವಾ ದೂಷಣೆ ಮಾಡುವ ಅಗತ್ಯ ನಮ್ಮ ಸರ್ಕಾರಕ್ಕೆ ಇಲ್ಲ.
ತನಿಕೆಗೆ ವಿರೋಧ ಪಕ್ಷದವರು ಸಹಕರಿಸಬೇಕೆಂದು ಮನವಿ ಮಾಡಿದರು. ಇಡೀ ದೇಶದಲ್ಲಿ ಧರ್ಮಸ್ಥಳ ದೊಡ್ಡ ಕ್ಷೇತ್ರವಾಗಿದೆ. ಅಂತಹ ಕ್ಷೇತ್ರದ ಮೇಲೆ ಕೇಳಿ ಬಂದಿರುವ ಕಳಂಕದ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ. ಸರ್ಕಾರ ಯಾವುದನ್ನೂ ಮುಚ್ಚಿಡಲ್ಲ. ಸರ್ಕಾರಕ್ಕೂ ಅದರ ಅಗತ್ಯವಿಲ್ಲ ಎಂದು ಸ್ಪಷ್ಟ ಪಡಿಸಿದರು. ಆರಂಭದಲ್ಲಿ ಎಸ್ಐಟಿ ತನಿಖೆ ಸ್ವಾಗತಿಸಿದ ಬಿಜೆಪಿ ಮುಖಂಡರು 15 ದಿನಗಳ ಬಳಕ ಏನಾಯ್ತು..? ಏಕೆ..? ಯಾವ ಕಾರಣಕ್ಕೆ..? ವಿರೋಧ ಪಕ್ಷಗಳ ಪ್ರಶ್ನೆಗೆ ವಸ್ತು ಸ್ಥಿತಿ ತಿಳಿಸಿದ್ದೇನೆ.
ಈಗಾಗಲೇ ಉತ್ಕನನದ ವೇಳೆ ಸಿಕ್ಕ ಅಸ್ಥಿಪಂಜರಗಳನ್ನು, ಕೆಲ ಸ್ಥಳಗಳಲ್ಲಿ ಮಣ್ಣು ಮೂಳೆಯನ್ನು ಕರಗಿಸುವಂತಿದ್ದು, ಅಲ್ಲಿನ ಮಣ್ಣನ್ನು ಸಂಗ್ರಹಿಸಿ ಎಫ್ಎಸ್ಎಲ್ ಪರೀಕ್ಷೆಗೆ ರವಾನಿಸಲಾಗಿದೆ. ಆ ವರದಿ ಬರುವವರೆಗೂ ಉತ್ಪನನ ನಡೆಸಲ್ಲ ಎಂದು ಎಸ್ಐಟಿ ತಂಡ ತೀರ್ಮಾನಿಸಿದೆ.
ಇನ್ನು ಮುಂದೆಯೂ ಅನಾಮಿಕ, ಸಾಕ್ಷಿದಾರ ಸೂಚಿಸುವ ಸ್ಥಳಗಳಲ್ಲಿ ಉತ್ಪನನ ಕಾರ್ಯ ಮುಂದುವರಿಯಬೇಕಾ ಅಥವಾ ಬೇಡವಾ ಎಂಬುವುದನ್ನು ಸರ್ಕಾರ ನಿರ್ಧರಿಸಲ್ಲ. ಅದನ್ನು ಎಸ್ಐಟಿ ಮಾತ್ರ ನಿರ್ಧರಿಸಲಿದೆ.
ಇನ್ನೂ ಮುಸುಕುಧಾರಿಗೆ ರಕ್ಷಣೆ ನೀಡುವಂತೆ, ವಶಕ್ಕೆ ಪಡೆಯದಂತೆ ಆದೇಶ ಇರುವ ಕಾರಣ ಆತನನ್ನು ವಶಕ್ಕೆ ಪಡೆದಿಲ್ಲ ಎಂದು ಸ್ಪಷ್ಟ ಪಡಿಸಿದರು.
ಊಟ ಬಿಟ್ಟು ಬಂದೆ: ಆರ್.ಅಶೋಕ
ಬಳಿಕ ಮಾತನಾಡಿದ ವಿರೋಧ ಪಕ್ಷದ ನಾಯಕ ಆರ್. ಅಶೋಕ ಮಾತನಾಡಿ, ಇಂದು ಪರಮೇಶ್ವರ್ ಉತ್ತರ ಕೊಡ್ತಾರೆ ಅಂತ ಊಟ ಮಾಡೋದ್ ಬಿಟ್ಟು ಬಂದೆ. ಮಾಸ್ಕ್ ಮ್ಯಾನ್ ಮ್ಯಾನ್ ನೋಡಿದರೆ ಬೆಟ್ಟ ಅಗೆದು ಇಲಿ ಕೂಡ ಸಿಕ್ಕಿಲ್ಲ. ಇಲ್ಲಿ ಪರಮೇಶ್ವರ್ ಹೇಳಿದ್ರಲ್ಲಿ ಸೊಳ್ಳೆಕೂಡ ಸಿಕ್ಕಿಲ್ಲ. ಬರೆದು ಕೊಟ್ಟಿದ್ದು ಓದಿದ್ದಾರೆ ಅಷ್ಟೇ
ಯಾರ ಒತ್ತಡಕ್ಕೂ ಮಣಿದು ತನಿಖೆಗೆ ಎಸ್ಐಟಿ ರಚನೆ ಮಾಡಿಲ್ಲ ಎಂದು ಗೃಹ ಸಚಿವರು ಹೇಳಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ಅವರ ಮನೆಗೆ ಯಾರೆಲ್ಲಾ ಭೇಟಿ ನೀಡಿ ತನಿಖೆ ಆಗ್ರಹಿಸಿದ್ದರು ಎಂದು ರಾಜ್ಯದ ಜನತೆಗೆ ಗೊತ್ತಿದೆ. ತನಿಖೆ ನಡೆಯುತ್ತಿದೆ ಎಂದೀರಿ. ಉಪಮುಖ್ಯಮಂತ್ರಿಗಳೇ ಧರ್ಮಸ್ಥಳದ ಈ ಬೆಳವಣಿಗೆ ಹಿಂದೆ ದೊಡ್ಡ ಷಡ್ಯಂತ್ರ ನಡೆದಿದೆ ಎಂದಿದ್ದಾರೆ.
ಹೀಗಾಗಿ ಸತ್ಯ ಹೊರಗೆ ಬರಲಿ. ಗೃಹ ಸಚಿವರು ಸಹ ವಿವರವಾಗಿ ರಾಜ್ಯದ ಜನತೆಗೆ ಮಾಹಿತಿ ನೀಡಬೇಕಿತ್ತು ಎಂದು ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರು ಪರಮೇಶ್ವರ್ ಅವರ ಉತ್ತರಕ್ಕೆ ಅಸಮಾಧಾನ ಹೊರಹಾಕಿದರು. ಇನ್ನು ಅಶೋಕ್ ಅವರ ಮಾತಿಗೆ ಧ್ವನಿಗೂಡಿಸಿದ ಶಾಸಕ ಸುನೀಲ್ ಕುಮಾರ್ ಅವರು, ಅನಾಮಿಕನಿಗೆ ಬುರುಡೆ ಅಗೆದು ತೆಗೆಲು ಹೇಳಿದ್ಯಾರು? ಈ ಷಡ್ಯಯಂತ್ರದ ಹಿಂದೆ ಯಾರಿದ್ದಾರೆ ಎಂದು ಗೃಹ ಸಚಿವರು ಬಹಿರಂಗ ಪಡಿಸಲಿ ಎಂದು ಒತ್ತಾಯಿಸಿದರು.
ಹೆಗಡೆ ಸಹೋದರ ತನಿಖೆ ಸ್ವಾಗತಿಸಿದ್ದಾರೆ, ಬಿಜೆಪಿ ರಾಜಕೀಯ; ಬಾಲಕೃಷ್ಣ
ಈ ವೇಳೆ ಮಾತನಾಡಿದ ಶಾಸಕ ಬಾಲಕೃಷ್ಣ, ಸರ್ಕಾರ ಪ್ರಕರಣವನ್ನು ಎಸ್ಐಟಿ ತನಿಖೆ ಒಳಪಡಿಸಿದ ಬಳಿಕ ವೀರೇಂದ್ರ ಹೆಗಡೆ ಅವರ ಸಹೋದರ ಸಿಎಂ ಸಿದ್ದರಾಮಯ್ಯ ಅವರ ಮನೆಗೆ ಬಂದು ಧನ್ಯವಾದಗಳನ್ನು ಹೇಳಿ ಸ್ವಾಗತಿಸಿದ್ದಾರೆ.ಬಿಜೆಪಿಯವರು ಈ ವಿಚಾರದಲ್ಲಿ ರಾಜಕೀಯ ಮಾಡಲು ಮುಂದಾಗಿದ್ದಾರೆ. ಗುಂಪು ಕಟ್ಟಿಕೊಂಡು ಧರ್ಮಸ್ಥಳಕ್ಕೆ ನಾವು ಪರ, ಕಾಂಗ್ರೆಸ್ ವಿರೋಧಿಗಳು ಎಂದು ಬಿಂಬಿಸುತ್ತಿದ್ದಾರೆ. ಎಸ್ಐಟಿ ತನಿಖೆಗೆ ಬಿಜೆಪಿಯವರು ಅಡ್ಡಿ ಪಡಿಸುತ್ತಿದ್ದಾರೆ. ಇವರ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಮಾಧ್ಯಮಗಳಿಗೆ ಸೂಚನೆ ನೀಡಿ: ಸುರೇಶ್ ಕುಮಾರ್
ಮಾಜಿ ಸಚಿವ ಸುರೇಶ್ ಕುಮಾರ್ ಮಾತನಾಡಿ, ಎಸ್ಐಟಿ ತನಿಖೆ ಕುರಿತು ಮಾಧ್ಯಮಗಳಲ್ಲಿ ಬೇಕಾಬಿಟ್ಟಿ ವರದಿ ಪ್ರಸಾರವಾಗುತ್ತಿದೆ. ಈ ಪ್ರಕರಣದ ತನಿಖೆ ಕುರಿತು ವರದಿ ಪ್ರಸಾರ ಮಾಡದಂತೆ ಸೂಚನೆ ನೀಡುವಂತೆ ಹೇಳಿದರು.