ದೊಡ್ಡಬಳ್ಳಾಪುರ: ನಗರದ ತಾಯಿ ಮಗು ಸರ್ಕಾರಿ ಆಸ್ಪತ್ರೆಯಲ್ಲಿ (Government Hospital) ಇತ್ತೀಚೆಗೆ ತುಂಬು ಗರ್ಭಿಣಿ ಸಾವನಪ್ಪಿರುವ ಕುರಿತು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಸೋಮವಾರ ಉಪವಿಭಾಗಾಧಿಕಾರಿ ಎನ್.ದುರ್ಗಾಶ್ರೀ ಅವರು ಒಂದು ವರ್ಷದಿಂದ ನಡೆಯದೆ ಉಳಿದಿದ್ದ ಆರೋಗ್ಯ ರಕ್ಷಾ ಸಮಿತಿಯ ಸಭೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.

ಈ ವೇಳೆ ಆಸ್ಪತ್ರೆಯ ಕಾರ್ಯಚಟುವಟಿಕೆಗಳಿಗೆ ಯಾವುದೇ ಅಡಚಣೆ ಇಲ್ಲದಂತೆ ನಿರಂತರವಾಗಿ ವಿದ್ಯುತ್ ಪೂರೈಕೆಯಾಗುವಂತೆ ನೋಡಿಕೊಳ್ಳಬೇಕು ಎಂದು ಬೆಸ್ಕಾಂ ಅಧಿಕಾರಿಗಳು ಸೂಚಿಸಿದರು.
ಆಸ್ಪತ್ರೆಯಿಂದ ಬೆಸ್ಕಾಂಗೆ ವಿದ್ಯುತ್ ಶುಲ್ಕ ಪಾವತಿ ಬಾಕಿ ಉಳಿದಿದೆ. ಹೆಚ್ಚಿನ ಅನುದಾನಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಆದರೆ ಇದನ್ನೇ ನೆಪವಾಗಿಸಿಕೊಂಡು ಆಸ್ಪತ್ರೆಗೆ ವಿದ್ಯುತ್ ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಆಗಬಾರದು ಎಂದರು.
ಆಸ್ಪತ್ರೆಯಲ್ಲಿನ ಶೌಚಾಲಯ ಸೇರಿದಂತೆ ಇತರೆಡೆಗಳಿಗೆ ನೀರು ಸರಬರಾಜು ಆಗುತ್ತಿರುವ ಪೈಪ್ಲೈನ್ಗಳ ದುರಸ್ಥಿಯನ್ನು ಆದ್ಯತೆ ಮೇರೆಗೆ ನಡೆಸಲಾಗುವುದು. ಆಸ್ಪತ್ರೆ ರೋಗಗಳಿನ್ನು ಕರೆದುಕೊಂಡು ಬರುವವರಿಗೆ ವಾಹನ, ಬೈಕ್ಗಳನ್ನು ನಿಲ್ಲಿಸಲು ಅನುಕೂಲವಾಗುವಂತೆ ಆಸ್ಪತ್ರೆ ಸಮೀಪ ರಸ್ತೆ ವಿಸ್ತರಣೆ ಹಾಗೂ ಡಾಂಬರೀಕರಣಕ್ಕೆ ಸಾರ್ವಜನಿಕರಿಂದ ಮನವಿಗಳು ಬಂದಿವೆ. ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಗೆ ಸೂಚನೆ ನೀಡಿದರು.
ಆಸ್ಪತ್ರೆಗೆ ಪ್ರತಿ ದಿನವು ನೂರಾರು ಸಂಖ್ಯೆಯಲ್ಲಿ ರೋಗಿಗಳು ಹಾಗೂ ಹತ್ತಾರು ಅಪಘಾತದ ಪ್ರಕರಣಗಳು ಬರುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆ ಬಳಿಯೇ ಪೊಲೀಸ್ ಹೊರ ಠಾಣೆಯನ್ನು ತರೆಯುವಂತೆಯು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ಆರೋಗ್ಯ ರಕ್ಷಾ ಸಮಿತಿ ಸಭೆಯಲ್ಲಿ ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಶಾರದ, ಆಸ್ಪತ್ರೆ ಆಡಳಿತ ಅಧಿಕಾರಿ ಡಾ.ರಮೇಶ್, ಆಸ್ಪತ್ರೆಯ ವೈದ್ಯರಾದ ಡಾ.ಪರಮೇಶ್ವರ, ಡಾ.ಅರುಣ್ಕುಮಾರ್, ಬೆಸ್ಕಾಂ ಸಹಾಯಕ ಎಂಜಿನಿಯರ್ ಉಮಾಶಂಕರ್, ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್ ಕಿರಣ್ ಇದ್ದರು.