ದೊಡ್ಡಬಳ್ಳಾಪುರ: ಹೊಲದ ಬಳಿ ಮೇಸಲು ತೆರಳಿದ್ದ ವೇಳೆ ದಾಳಿ ನಡೆಸಿರುವ ಚಿರತೆ (Leopard) ಮೇಕೆಯನ್ನು (Goat) ಬಲಿ ಪಡೆದಿರುವ ಘಟನೆ ದೊಡ್ಡಬಳ್ಳಾಪುರ ತಾಲೂಕಿನ ದೊಡ್ಡಗುಂಡಪ್ಪನಾಯಕನಹಳ್ಳಿ ಹೊರವಲಯದಲ್ಲಿ ನಡೆದಿದೆ.
ಘಟನೆಯಲ್ಲಿ ಈಶ್ವರಪ್ಪ ಎನ್ನುವವರ ಸುಮಾರು 15 ಸಾವಿರ ರೂ ಮೌಲ್ಯದ ಮೇಕೆ ಸಾವನಪ್ಪಿದೆ.
ಪ್ರತಿ ನಿತ್ಯದಂತೆ ಇಂದು ಕೂಡ ಈಶ್ವರಪ್ಪ ಅವರ ಪತ್ನಿ ತಮ್ಮ ಜಮೀನಿನ ಬಳಿ ಕುರಿ ಹಾಗೂ ಮೇಕೆಗಳನ್ನು ಮೇಸಲು ತೆರಳಿದ್ದಾರೆ. ಈ ವೇಳೆ ಏಕಾಏಕಿ ದಾಳಿ ನಡೆಸಿರುವ ಚಿರತೆ, ಮೇಕೆಯನ್ನು ಪೊದೆಗೆ ಎಳೆದುಕೊಂಡು ಹೋಗಿ ಕೊಂದಿದೆ.
ಚಿರತೆ ದಾಳಿಕಂಡು ಆತಂಕಕ್ಕೆ ಒಳಗಾದ ಈಶ್ವರಪ್ಪ ಅವರ ಪತ್ನಿ ಊರಿಗೆ ಓಡಿ ಬಂದು ವಿಷಯ ಮುಟ್ಟಿಸಿದ್ದಾರೆ. ಗ್ರಾಮದ ಯುವಕರು ಸ್ಥಳಕ್ಕೆ ತೆರಳಿ ನೋಡಿದಾಗ ಚಿರತೆ ಸತ್ತ ಮೇಕೆಯನ್ನು ಬಿಟ್ಟು ಪರಾರಿಯಾಗಿದೆ.
ಈ ವ್ಯಾಪ್ತಿಯಲ್ಲಿ ಈ ಹಿಂದೆ ಕೂಡ ಚಿರತೆ ದಾಳಿ ನಡೆದಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಹೊಸಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)