ನವದೆಹಲಿ: ರಷ್ಯಾದ ತೈಲವನ್ನು ಮರುಮಾರಾಟ ಮಾಡುವ ಮೂಲಕ ಭಾರತ ಲಾಭಗಳಿಸುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಭಾರತದ ಮೇಲೆ ವಿಧಿಸಿರುವ ತೆರಿಗೆ ಬರೆ ಗಾರ್ಮೆಂಟ್ಸ್ ಕ್ಷೇತ್ರವನ್ನು ತಲ್ಲಣಗೊಳಿಸಿದೆ.
ಇದರ ಬೆನ್ನಲ್ಲೇ ಆಗಸ್ಟ್ 27ರಿಂದ ಜಾರಿಗೆ ಬರುವಂತೆ ಭಾರತೀಯ ಉತ್ಪನ್ನಗಳ ಮೇಲೆ ಘೋಷಿಸಿದ್ದ ಹೆಚ್ಚುವರಿ ಶೇ 25 ರಷ್ಟು ಸುಂಕವನ್ನು ಜಾರಿಗೆ ತರುವ ಯೋಜನೆಗಳನ್ನು ವಿವರಿಸುವ ಕರಡು ಆದೇಶವನ್ನು ಅಮೆರಿಕ ಹೊರಡಿಸಿದೆ.
ಆಗಸ್ಟ್ 27ರ ಮಧ್ಯರಾತ್ರಿ 12.01ರಿಂದ ಈ ಹೊಸ ಸುಂಕ ಜಾರಿಗೆ ಬರಲಿದೆ ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟೀಸ್ ಆದೇಶದಲ್ಲಿ ತಿಳಿಸಿದೆ.
ಭಾರತವು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುತ್ತಿರುವುದರಿಂದ ದಂಡದ ಮಾದರಿಯಲ್ಲಿ ಭಾರತೀಯ ಸರಕುಗಳ ಮೇಲಿನ ಸುಂಕವನ್ನು ಶೇ 50ಕ್ಕೆ ದ್ವಿಗುಣಗೊಳಿಸುವುದಾಗಿ ಆಗಸ್ಟ್ 7ರಂದು ಟ್ರಂಪ್ ಘೋಷಿಸಿದ್ದರು. ಆದರೆ, ಒಪ್ಪಂದದ ಕುರಿತಂತೆ ಮಾತುಕತೆ ನಡೆಸಲು 21 ದಿನಗಳ ಕಾಲಾವಕಾಶ ನೀಡಿದ್ದರು.
ಜುಲೈ ಅಂತ್ಯದಲ್ಲಿ ಘೋಷಿಸಲಾದ ಶೇ 25ರಷ್ಟು ಸುಂಕ ಮತ್ತು ಆಗಸ್ಟ್ 7 ರಂದು ಘೋಷಿಸಿದ ಶೇ 25ರಷ್ಟು ಸುಂಕ ಸೇರಿ ಭಾರತದ ಸರಕುಗಳ ಮೇಲೆ ಶೇ 50ರಷ್ಟು ಸುಂಕ ಹೇರಿಕೆಗೆ ಅಮೆರಿಕ ಮುಂದಾಗಿದೆ.
ಇದರಿಂದ ಭಾರತದಿಂದ ರಫ್ತು ಮಾಡಲಾಗುತ್ತಿದ್ದ ಉತ್ಪನ್ನಗಳಿಗೆ ಶೇ.50 ರಷ್ಟು ತೆರೆಗೆ ಕಟ್ಟಬೇಕಾದ ಅನಿವಾರ್ಯತೆ ಎದುರಾಗಿದ್ದು, ಉತ್ಪಾದಕರು ತಮ್ಮ ಕಂಪನಿಗಳ ಬಾಗಿಲು ಮುಚ್ಚುವ ಪರಿಸ್ಥಿತಿ ಬಂದಿದೆ.
ಈಗಾಗಲೇ ಟ್ರಂಪ್ ಆದೇಶದಿಂದ ಗಾರ್ಮೆಂಟ್ಸ್ ಕಾರ್ಖಾನೆಗಳು ರಜೆ ಘೋಷಿಸುತ್ತಿರುವ ಕಾರಣ ಲಕ್ಷಾಂತರ ಮಂದಿ ನೌಕರರು ಕೆಲಸ ಕಳೆದುಕೊಳ್ಳುತ್ತಿದ್ದು, ನಿರುದ್ಯೋಗ ಸಮಸ್ಯೆ ಹೆಚ್ಚಾಗುವ ಆತಂಕ ಎದುರಾಗಿದೆ.