ದೊಡ್ಡಬಳ್ಳಾಪುರ: ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದನ್ನೇ ಬಳಸಿಕೊಂಡಿರುವ ಕಳ್ಳರು ಮನೆಯ ಮುಂದೆ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನವನ್ನು (Two-wheeler bike) ಕದ್ದೊಯ್ದಿರುವ ಘಟನೆ ತಾಲೂಕಿನ ಆರೂಢಿ ಗ್ರಾಮದಲ್ಲಿ ನಡೆದಿದೆ.
ಮಳೆಯ ಹಿನ್ನೆಲೆಯಲ್ಲಿ ಸಾಸಲು ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ಪದೇ ಪದೇ ಸ್ಥಗಿತಗೊಳ್ಳುತ್ತಿದೆ. ಇದೇ ಸಂದರ್ಭವನ್ನು ಬಳಸಿಕೊಂಡಿರುವ ಕಳ್ಳರು ದುಷ್ಕೃತ್ಯ ಎಸಗಿದ್ದಾರೆ.
ದೊಡ್ಡಬಳ್ಳಾಪುರ ತಾಲೂಕಿನ ಆರೂಢಿ ಗ್ರಾಮದ ತಿಮ್ಮರಾಜ್ (ಏಜೆಂಟ್ ತಿಮ್ಮಣ್ಣ) ಅವರು ತಮ್ಮ ಹೊಂಡಾ ಪ್ಯಷನ್ ಬೈಕನ್ನು ಮನೆಯ ಬಳಿ ಲಾಕ್ ಮಾಡಿ ಮಲಗಿದ್ದಾರೆ. ಬುಧವಾರ ಬೆಳಗ್ಗಿನ ಜಾವ ಸುಮಾರು 2.30 ರ ಸಮಯದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿರುವುದನ್ನು ಹೊಂಚು ಹಾಕಿ ದ್ವಿಚಕ್ರ ವಾಹನದಲ್ಲಿ ಬಂದಿರುವ ಕಳ್ಳರು, ಬೈಕನ್ನು ಕದ್ದೊಯ್ದಿದ್ದಾರೆ.
ಈ ದೃಶ್ಯ ಸಿಸಿ ಟಿವಿ ಕ್ಯಾಮೆರಾದಲ್ಲಿ ಅಸ್ಪಷ್ಟವಾಗಿ ಸೆರೆಯಾಗಿದೆ.
ಈ ಕುರಿತಂತೆ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.