ಬೆಂಗಳೂರು: ಸಮಾಜದ ಶಾಂತಿ ಕದಡುವ ದ್ವೇಷ ಭಾಷಣ ಮತ್ತು ಸುಳ್ಳು ಸುದ್ದಿ ಹರಡುವವರಿಗೆ ಎಡೆಮುರಿಕಟ್ಟುವಂತೆ ಸಿಎಂ ಸಿದ್ದರಾಮಯ್ಯ (Cmsiddaramaiah) ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.
DC, CEO ಗಳ ಸಭೆಯಲ್ಲಿ ನಾನಾ ಇಲಾಖೆಗಳ ಪ್ರಗತಿ ಪರಿಶೀಲನೆ ವೇಳೆ ಮಾತನಾಡಿದ ಅವರು, ದ್ವೇಷ ಭಾಷಣದ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದ್ದರೂ, ಯಾಕೆ ಜಿಲ್ಲೆಗಳಲ್ಲಿ ದ್ವೇಷ ಭಾಷಣದ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ? ತಕ್ಷಣ ದೂರು ದಾಖಲಿಸಿ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು.
ಅಲ್ಲದೆ ಇದೇ ರೀತಿ ಸರ್ಕಾರದ ಯೋಜನೆಗಳ ಬಗ್ಗೆ, ಕೈಗೊಂಡಿರುವ ಕ್ರಮಗಳ ಬಗ್ಗೆ ಸುಳ್ಳು ಸುದ್ದಿಗಳನ್ನು, ಮಾಹಿತಿಗಳನ್ನು ಹರಡುವ ಪ್ರಕರಣಗಳಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕು.
ನಾವು ರಾಜ್ಯವನ್ನು ಮಾದಕ ದ್ರವ್ಯ ಮುಕ್ತ ಕರ್ನಾಟಕ ಮಾಡುತ್ತೇವೆ ಎಂದು ಈಗಾಗಲೇ ಘೋಷಿಸಿದ್ದೇವೆ. ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಮುಂದುವರೆಸಬೇಕು.
ಮಾದಕ ವಸ್ತು ಮಾರಾಟ ಮಾಡುವವರ ಅಂಗಡಿ ಮತ್ತಿತರ ಕೇಂದ್ರಗಳ ಪರವಾನಗಿ ರದ್ದುಗೊಳಿಸುವ ಸಂಬಂಧ ಕಾನೂನು ತಿದ್ದುಪಡಿ ತನ್ನಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.
2023ರಲ್ಲಿ 6767 ಪ್ರಕರಣಗಳು, 2024ರಲ್ಲಿ 4188 ಪ್ರಕರಣಗಳು ದಾಖಲಾಗಿವೆ. ಈ ವರ್ಷ ಇದುವರೆಗೆ 1793 ಪ್ರಕರಣಗಳು ದಾಖಲಾಗಿವೆ. ಜಿಲ್ಲೆಗಳಲ್ಲಿ ಮಾದಕ ದ್ರವ್ಯ ದಂಧೆಯನ್ನು ಮಟ್ಟ ಹಾಕಲು ಡಿಸಿ ಹಾಗೂ ಎಸ್ಪಿ ಅವರು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು.
ಅಗತ್ಯಬಿದ್ದರೆ ಇನ್ನಷ್ಟು ಕಠಿಣ ಕಾಯ್ದೆಗಳನ್ನು ಜಾರಿಗೆ ತರಲು ನಾವು ಬದ್ಧರಾಗಿದ್ದೇವೆ. ಶಾಲಾ, ಕಾಲೇಜುಗಳಲ್ಲಿ ಮಾದಕ ದ್ರವ್ಯ ಚಟುವಟಿಕೆಗಳ ಮೇಲೆ ನಿರಂತರ ನಿಗಾ ವಹಿಸಬೇಕು.
ಜಿಲ್ಲಾಧಿಕಾರಿಗಳು ಅಪರಾಧ ಚಟುವಟಿಕೆಗಳನ್ನು ಹತ್ತಿಕ್ಕಲು ಎಲ್ಲಾ ಸಹಕಾರ ಪೊಲೀಸ್ ಇಲಾಖೆಗೆ ನೀಡಬೇಕು. ಗೂಂಡಾ ಕಾಯ್ದೆಯಡಿ ಬಾಕಿಯಿರುವ ಎಲ್ಲಾ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಬೇಕು.