ನವದೆಹಲಿ: ಗುರುವಾರ ಮಧ್ಯಾಹ್ನ ಗುಜರಾತ್ನ ಅಹಮದಾಬಾದ್ನಲ್ಲಿ ಸಂಭವಿಸಿದ ಏರ್ ಇಂಡಿಯಾ ವಿಮಾನ ದುರಂತದಲ್ಲಿ (AI171) ಮೃತಪಟ್ಟವರ ಸಂಖ್ಯೆ 274ಕ್ಕೆ ಏರಿಕೆಯಾಗಿದೆ.
ಇವರಲ್ಲಿ 12 ಸಿಬ್ಬಂದಿಗಳು ಸೇರಿ 241 ಮಂದಿ ವಿಮಾನದಲ್ಲಿ ಇದ್ದವರಾಗಿದ್ದರೆ, ಉಳಿದಂತೆ ವಿಮಾನ ಅಪ್ಪಳಿಸಿದ ಹಾಸ್ಟಲ್ನಲ್ಲಿದ್ದ 33 ಮಂದಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ಹಾಗೂ ಸ್ಥಳೀಯ ನಿವಾಸಿಗಳು ಎಂಬುದು ತಿಳಿದು ಬಂದಿದೆ.
ಅಲ್ಲದೇ ಅನೇಕ ವಿದ್ಯಾರ್ಥಿಗಳ ಸ್ಥಿತಿ ಚಿಂತಾಜನಕವಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಆತಂಕ ಕಾಡುತ್ತಿದೆ.
ಗುರುವಾರ ಮಧ್ಯಾಹ್ನ ಅಹಮದಾಬಾದ್ ನಿಂದ ಲಂಡನ್ನ ಗ್ಯಾಟ್ವಿಕ್ಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ ಟೇಕಾಫ್ ಆದ ಕೆಲವೇ ನಿಮಿಷಗಳಲ್ಲಿ ಮೇಘನಾನಿ ನಗರದಲ್ಲಿ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನವಾಗಿ ಘನಘೋರ ದುರಂತ ಸಂಭವಿಸಿತ್ತು.
ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ ಪ್ರಯಾಣಿಕರಲ್ಲಿ ಗುಜರಾತ್ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕೂಡ ಸೇರಿದ್ದಾರೆ. ಪವಾಡವೆಂಬಂತೆ ವಿಮಾನದಲ್ಲಿದ್ದ ಏಕೈಕ ಭಾರತೀಯ ಮೂಲದ ಬ್ರಿಟಿಷ್ ಪ್ರಜೆ ವಿಶ್ವಾಸ್ ಕುಮಾರ್ ಬದುಕುಳಿದಿದ್ದಾರೆ.
ಇದರ ನಡುವೆ ವಿಮಾನ ಪತನದ ಕಾರಣಗಳನ್ನು ಪತ್ತೆಹಚ್ಚಲು ತನಿಖೆ ತ್ವರಿತಗತಿಯಲ್ಲಿ ಸಾಗುತ್ತಿದೆ. ತನಿಖೆಯಲ್ಲಿ ಮಹತ್ವದ ಪಾತ್ರವಹಿಸಲಿರುವ ನಿರ್ಣಾಯಕ ಸಾಧನವಾಗಿದ್ದ ಬ್ಲ್ಯಾಕ್ ಬಾಕ್ಸ್ ಅನ್ನು ಗುರುವಾರ ಪತ್ತೆಹಚ್ಚಿ ವಶಪಡಿಸಿಕೊಳ್ಳಲಾಗಿದೆ.