ಬೆಂ.ಗ್ರಾ.ಜಿಲ್ಲೆ: ಕಳೆದ ಎರಡು ದಿನಗಳ ಹಿಂದೆ ಜಲ ಶಕ್ತಿ ಅಭಿಯಾನ’ ಕ್ಯಾಚ್ ದ ರೈನ್’ 2025 ನೇ ಸಾಲಿನ ಕೇಂದ್ರಿಯ ನೋಡಲ್ ಅಧಿಕಾರಿ ಅನೇಶ್ ಪಿ ರಾಜನ್ ಅವರು ಇಂದು ಜಿಲ್ಲೆಗೆ ಭೇಟಿ ನೀಡಿ ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಲ ಜೀವನ್ ಮಿಷನ್ ಹಾಗೂ ಸ್ವಚ್ಛ ಭಾರತ್ ಮಿಷನ್(Swachh Bharat) ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡಿದ್ದಾರೆ.
ಕೆಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ ಜಲ ಜೀವನ್ ಮಿಷನ್(ಗ್ರಾಮೀಣ) ಮತ್ತು ಸ್ವಚ್ಛ ಭಾರತ್ ಮಿಷನ್(ಗ್ರಾಮೀಣ) ಕಾರ್ಯಕ್ರಮಗಳು ರಾಜ್ಯಗಳಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ.
ಎರಡೂ ಯೋಜನೆಗಳ ಸಮರ್ಪಕ ಅನುಷ್ಠಾನ ಮತ್ತು ಯೋಜನೆಗಳ ಕಾರ್ಯಾಚರಣೆಯ ಸುಸ್ಥಿರತೆಗೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಡಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಿರುವ ಯೋಜನೆಗಳು ಹಾಗೂ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ ವಿವರ ಪಡೆದುಕೊಂಡಿದ್ದಾರೆ
ಈ ಸಂದರ್ಭದಲ್ಲಿ ಜಿ.ಪಂ ಉಪಕಾರ್ಯದರ್ಶಿ ಶಿವಕುಮಾರ್, ಉಪವಿಭಾಗಾಧಿಕಾರಿ ದುರ್ಗ ಶ್ರೀ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಇಂಜಿನಿಯರ್ ಶ್ರೀಕಾಂತ್, ಕೃಷಿ ಇಲಾಖೆ ಜಂಟಿ ನಿರ್ದೇಶಕಿ ಕಲಾವತಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಇದರ ಮುಂದುವರಿದ ಭಾಗವಾಗಿ ದೊಡ್ಡಬಳ್ಳಾಪುರ ತಾಲೂಕಿನ ಹಲವು ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ವಿಷಯ ಗ್ರಾಮಪಂಚಾಯಿತಿ ಪಿಡಿಒಗಳಿಗೆ ತಿಳಿಯುತ್ತಿದ್ದಂತೆ ಹಲವು ದಿನಗಳಿಂದ ಗಬ್ಬೆದ್ದು ನಾರುತ್ತಿದ್ದ ಪ್ರದೇಶಗಳಿಗೆ ಏಕಾಏಕಿ ಸ್ವಚ್ಚತಾ ಕಾರ್ಯವನ್ನು ನಡೆಸಲಾಗಿದೆ.
ತ್ಯಾಜ್ಯ ತೆರವು, ಸಾರ್ವಜನಿಕ ಶೌಚಾಲಯ ಸ್ವಚ್ಚತಾ ಕಾರ್ಯವನ್ನು ದಿಢೀರ್ ನಡೆಸುವ ಮೂಲಕ, ಅಧಿಕಾರಿಗಳ ಪರಿಶೀಲನೆ ವೇಳೆ ಸಮಸ್ಯೆ ಸಿಲುಕಬಹುದೆಂಬ ಆತಂಕದಿಂದ ಹಲವು ವರ್ಷಗಳಿಂದ ಮಲಿನವಾಗಿದ್ದ ಪ್ರದೇಶಗಳು ಸ್ವಲ್ಪ ಸ್ವಚ್ಚತೆಗೊಂಡಿವೆ ಎಂದು ಗ್ರಾಮಸ್ಥರು ಲೇವಡಿ ಮಾಡುತ್ತಿದ್ದಾರೆ.