ಬೆಂಗಳೂರು: ಸರ್ಕಾರಿ ಶಾಲೆ ಶಿಕ್ಷಕರು (Teachers) ಪಾಠ ಮಾಡುವುದಕ್ಕಿಂತ ಬೇರೆ ಕೆಲಸದಲ್ಲಿಯೇ ಹೆಚ್ಚು ಸಮಯ ಕಳೆಯುವಂತಾಗಿದೆ ಎನ್ನುವ ಆರೋಪ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ, ಇದೀಗ ಶಿಕ್ಷಕರಿಗೆ ಪಾಠ ಮಾಡಲು ಹೆಚ್ಚು ಸಮಯ ನೀಡುವ ಹಾಗೂ ಹೆಚ್ಚುವರಿ ಕೆಲಸಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಮಹತ್ವದ ತೀರ್ಮಾನ ಕೈಗೊಂಡಿದೆ.
ವಿವಿಧ ತರಬೇತಿ, ಸಭೆ, ಸಮೀಕ್ಷೆಯ ನೆಪದಲ್ಲಿ ಶಿಕ್ಷಕರಿಗೆ ಪಾಠ ಮಾಡಲು ಸಮಯ ಸಿಗುತ್ತಿಲ್ಲ ಎನ್ನುವ ಆರೋಪ ವಿರುವುದರಿಂದ, ಶಾಲಾ ಸಮಯದಲ್ಲಿ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರು ಯಾವುದೇ ಸಮೀಕ್ಷೆ, ಸಭೆಗಳಿಗೆ ತೆರಳುವಂತಿಲ್ಲ.
ಶಾಲಾ ಅವಧಿಯಲ್ಲಿ ಜಿಲ್ಲಾಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಸಹ ಸಭೆಗಳಿಗೆ ಶಿಕ್ಷಕರನ್ನು ಕರೆಯುವಂತಿಲ್ಲ ಎನ್ನುವ ಸ್ಪಷ್ಟ ಸುತ್ತೋಲೆಯನ್ನು ಸರಕಾರ ಹೊರಡಿಸಿದೆ.
ರಾಜ್ಯದಲ್ಲಿ 46,757 ಸರಕಾರಿ ಶಾಲೆಗಳಿವೆ. ಇದರಲ್ಲಿ 42.92 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 1.77 ಲಕ್ಷ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಸರಕಾರಿ ಶಾಲೆಗಳ ಶಿಕ್ಷಕರನ್ನು ಇಲಾಖೆ ಸಭೆ, ತರಬೇತಿ, ಸಮೀಕ್ಷೆ ಕಾರ್ಯ ಸೇರಿದಂತೆ ವಿವಿಧ ಕೆಲಸಗಳಲ್ಲಿ ತೊಡಗಿಸಿಕೊಳ್ಳುವುದರಿಂದ ವಿದ್ಯಾರ್ಥಿಗಳಿಗೆ ಪಾಠ ಮಾಡಲು ಅಡ್ಡಿಯಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ತರಗತಿ ಅವಧಿಯಲ್ಲಿ ಶಿಕ್ಷಕರು ಯಾವುದೇ ಸಭೆ ಅಥವಾ ಸಮೀಕ್ಷೆಗಳಲ್ಲಿ ಭಾಗವಹಿಸದಂತೆ ಸೂಚನೆ ನೀಡಲಾಗಿದೆ.
ಶಿಕ್ಷಕರನ್ನು ಶಾಲಾ ಅವಧಿಯ ಸಮಯದಲ್ಲಿ ತರಬೇತಿ ಗಳಿಗೆ ನಿಯೋಜಿಸುವಂತಿಲ್ಲ. ಒಂದು ವೇಳೆ ಡಿಡಿಪಿಐ ಅಥವಾ ಬಿಇಒ ಮೌಖಿಕ ಅಥವಾ ಲಿಖಿತವಾಗಿಯೂ ಶಾಲಾ ಸಮಯದಲ್ಲಿ ಶಿಕ್ಷಕರನ್ನು ಎಲ್ಲಿಗೂ ಆಹ್ವಾನಿಸುವಂತಿಲ್ಲ.
ಈ ರೀತಿಯ ಸೂಚನೆಗಳನ್ನು ಮೀರಿಯೂ ಶಿಕ್ಷಕರು ತೆರಳಿದಲ್ಲಿ ಅವರಿಗೆ ಯಾವುದೇ ಸರಕಾರಿ ಕೆಲಸದ ಮೇಲೆ (ಒಒಡಿ) ಅವಕಾಶ ಕಲ್ಪಿಸುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ. ಅಲ್ಲದೆ, ಶಾಲಾ ಅವಧಿಯಲ್ಲಿ ಡಿ.ಸಿ, ಸಿಇಒಗಳು ಸಹ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯರನ್ನು ಒಳಗೊಂಡ ಸಭೆಗಳನ್ನು ನಡೆಸುವಂತಿಲ್ಲ ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ.
ಸರಕಾರಿ ಶಾಲೆಗಳಲ್ಲಿ ಶಾಲೆಯ ಸಮಯದಲ್ಲಿ ವಿದ್ಯಾ ರ್ಥಿಗಳು ಮತ್ತು ಶಿಕ್ಷಕರು ಶಾಲೆಯಲ್ಲಿಯೇ ಹಾಜರಿದು, ಶಿಕ್ಷಣದ ಹಕ್ಕು ಕಾಯಿದೆಯ ಅಡಿಯಲ್ಲಿ ಪ್ರತಿದಿನ ಶಾಲೆಯ ಹಂತದಲ್ಲಿ ಬೋಧನೆ ಮತ್ತು ಕಲಿಕೆ ನಡೆಸಲು ಅನು ವಾಗಬೇಕು.
ಸರಕಾರಿ ಶಾಲೆಗಳಲ್ಲಿ ಕಲಿಕೆ ಫಲಿತಾಂಶಗಳನ್ನು ಸುಧಾರಿಸಲು ಮತ್ತು ಉತ್ತಮ ಬೋಧನೆ ನೀಡಲು ಶಿಕ್ಷಕರೂ ಹಾಗೂ ಶಾಲಾ ಮುಖ್ಯೋಪಾಧ್ಯಾಯರೂ ಸಂಪೂರ್ಣ ವಾಗಿ ಶಾಲೆಯಲ್ಲಿ ಹಾಜರಿರುವುದು ಅತ್ಯಂತ ಅಗತ್ಯವಾಗಿರುವ ಹಿನ್ನೆಲೆಯಲ್ಲಿ ಈ ಸುತ್ತೋಲೆ ಹೊರಡಿಸಲಾಗಿದೆ.