ಚಿಕ್ಕಬಳ್ಳಾಪುರ: ಭಾರತಕ್ಕೆ ಉತ್ತಮ ಭವಿಷ್ಯ, ಭ್ರಷ್ಟಾಚಾರಮುಕ್ತ ಆಡಳಿತ ಮತ್ತು ದೇಶದಲ್ಲಿ ಅಭಿವೃದ್ಧಿಪಡಿಸಿ ವಿಶ್ವದ ಅಗ್ರಗಣ್ಯ ದೇಶಗಳ ಸಾಲಿಗೆ ಒಯ್ದ ನಾಯಕರು ಎಂದರೆ ನಮ್ಮ ಹೆಮ್ಮೆಯ ಪ್ರಧಾನಮಂತ್ರಿ ಮೋದಿ ಅವರು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (B.Y. Vijayendra) ಅವರು ಶ್ಲಾಘಿಸಿದರು.
ಹರ್ ಘರ್ ತಿರಂಗಾ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಾರತಕ್ಕೆ ಭವಿಷ್ಯವಿಲ್ಲ, ಭ್ರಷ್ಟಾಚಾರದ ಮುಕ್ತ ಆಡಳಿತ ಕೊಡುವುದಕ್ಕೆ ಸಾಧ್ಯವಿಲ್ಲ ಹಾಗೂ ಉಜ್ವಲ ಭವಿಷ್ಯವಿಲ್ಲವೆಂದು ದೇಶದ ಜನ ಕಂಗಾಲಾಗಿದ್ದಾಗ ಈ ಸಾಧನೆಯನ್ನು ಮೋದಿಜೀ ಅವರು ಮಾಡಿದ್ದಾರೆ ಎಂದು ಮೆಚ್ಚುಗೆ ಸೂಚಿಸಿದರು.
ಸ್ವಾತಂತ್ರದ ದಿನದಲ್ಲಿ ಸರ್ಕಾರಿ ಕಚೇರಿಗಳಲ್ಲಿ ಮತ್ತು ಶಾಲಾ ಕಾಲೇಜುಗಳಲ್ಲಿ ಧ್ವಜವನ್ನು ಹಾರಿಸಿ ಸಂಭ್ರಮಾಚಾರಣೆ ಮಾಡುತ್ತಿದ್ದೆವು. ಆದರೆ, ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿ ಹುತಾತ್ಮರಾದ ಕೋಟಿ ಕೋಟಿ ದೇಶ ಭಕ್ತರಿಗೆ ಗೌರವವನ್ನು ಕೊಡಬೇಕು ಮತ್ತು ಯುವ ಪೀಳಿಗೆಗೆ ಅವರ ಕೊಡುಗೆ ಹಾಗೂ ತ್ಯಾಗದ ಬಲಿದಾನವನ್ನು ನೆನಪಿಸಿಕೊಳ್ಳಲು ದೇಶದ ಪ್ರತಿಯೊಬ್ಬರ ಮನೆಯ ಮೇಲೆ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಬೇಕು ಎಂದು ಮೋದಿ ಜೀ ಅವರು ಕರೆ ಕೊಟ್ಟಿದ್ದಾರೆ ಎಂದು ತಿಳಿಸಿದರು.
ಬೆಂಗಳೂರಿನ ಬ್ಯಾಟರಾಯನಪುರದಿಂದ ಹರ್ ಘರ್ ತಿರಂಗಾ ಯಾತ್ರೆಗೆ ಚಾಲನೆ ನೀಡಲಾಗಿದೆ. ಚಿಕ್ಕಬಳ್ಳಾಪುರದ ಜಿಲ್ಲೆಯ ವಿದುರಾಶ್ವತ್ಥದಲ್ಲಿ ಸ್ವಾತಂತ್ರ್ಯ ಪೂರ್ವ 1938 ರಲ್ಲಿ ಬ್ರಿಟಿಷ್ ಅಧಿಕಾರಿಗಳ ಗುಂಡಿಗೆ 33 ಜನ ಬಲಿಯಾಗಿದ್ದ ಹುತಾತ್ಮಾರ ಸ್ಮಾರಕಕ್ಕೆ ಗೌರವವನ್ನು ಸಲ್ಲಿಸಬೇಕು ಹಾಗೂ ಸ್ವಾತಂತ್ರ್ಯ ಹೋರಾಟ ಮಾಡಿದ ಹಿರಿಯರಿಗೆ ಗೌರವ ಸಲ್ಲಿಸಲು ಈ ತಿರಂಗಾ ಯಾತ್ರೆ ಕಾರ್ಯಕ್ರಮವನ್ನು ನಡೆಸುತ್ತಿದ್ದೇವೆ ಎಂದು ಅವರು ತಿಳಿಸಿದರು.
ಕಾಶ್ಮೀರದಲ್ಲಿ 370 ನೇ ವಿಧಿ ತೆಗೆದುಹಾಕಿದರೆ ದೇಶದಲ್ಲಿ ರಕ್ತದೋಕುಳಿ ನಡೆಯುತ್ತದೆ ಎಂದು ಕಾಂಗ್ರೆಸ್ ಪಕ್ಷ ಹೇಳಿತ್ತು. 370 ನೇ ವಿಧಿಯಿಂದ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸದಿಂದ ಲಕ್ಷಾಂತರ ಯೋಧರು ಮತ್ತು ಹಿಂದುಗಳ ಮಾರಣ ಹೋಮವಾಗುತಿತ್ತು. ನರೇಂದ್ರ ಮೋದಿ ಜೀ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಉಕ್ಕಿನ ಮನುಷ್ಯರಾದ ಅಮಿತ್ ಶಾ ಜೀ ಅವರ ನೇತೃತ್ವದಲ್ಲಿ ಒಂದೇ ಒಂದು ಹನಿ ರಕ್ತ ಬೀಳದಂತೆ 370ನೇ ವಿಧಿ ರದ್ದುಪಡಿಸಿದ್ದನ್ನು ಇಡೀ ಜಗತ್ತೇ ಅಚ್ಚರಿಯಿಂದ ನೋಡುತಿತ್ತು ಎಂದು ಅವರು ಶ್ಲಾಘಿಸಿದರು.
ಕೆಲ ರಾಜಕೀಯ ಪಕ್ಷಗಳು ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು. ದೇಶ ಮೊದಲು ಎಂದು ನಿಷ್ಠೆಯನ್ನು ಇಟ್ಟುಕೊಂಡು, ದೇಶದ ಬಗ್ಗೆ ಅಪಾರ ಭಕ್ತಿಯನ್ನು ತೋರಿಸುವ ಹಾಗೂ ಭಾರತ ಮಾತಾಕೀ ಜೈ ಎಂದು ಜಯ ಘೋಷಣೆಯನ್ನು ಕೂಗುವ ರಾಜಕೀಯ ಪಕ್ಷವೆಂದರೆ ಬಿಜೆಪಿ ಎಂದು ಅವರು ತಿಳಿಸಿದರು.
ಹುತಾತ್ಮ ದೇಶಭಕ್ತರಿಂದ ಭಾರತ ಉಳಿದಿದೆ – ಎಸ್.ಆರ್.ವಿಶ್ವನಾಥ್
ಶಾಸಕ ಎಸ್.ಆರ್ ವಿಶ್ವನಾಥ್ ಅವರು ಮಾತನಾಡಿ, ಭಾರತ ಉಳಿದಿರುವುದೇ ಸ್ವಾತಂತ್ರ ಹೋರಾಟದಲ್ಲಿ ಹುತಾತ್ಮರಾದ ದೇಶಭಕ್ತರಿಂದ ಎಂದು ತಿಳಿಸಿದರು. 1938 ರಲ್ಲಿ ವಿದುರಾಶ್ವತ್ಥದಲ್ಲಿ 2ನೇ ಜಲಿಯಾನ್ ವಾಲಾಬಾಗ್ ರೀತಿ ದುರಂತ ನಡೆದಿರುವುದು, 33 ಜನರ ಬಲಿದಾನ ಬಹಳ ಜನಕ್ಕೆ ತಿಳಿದಿಲ್ಲ ಎಂದು ಹೇಳಿದರು. ಈ ಹುತಾತ್ಮರು ದೇಶಕ್ಕಾಗಿ ಹೋರಾಟ ಮಾಡಿ ತಮ್ಮ ಪ್ರಾಣಗಳನ್ನು ಅರ್ಪಿಸಿದ್ದಾರೆ. ಆದ್ದರಿಂದ ನಾವು ಈ ಜಾಗಕ್ಕೆ ಬಂದು ಅವರಿಗೆ ಗೌರವ ಸಲ್ಲಿಸುತ್ತಿದ್ದೇವೆ ಎಂದು ತಿಳಿಸಿದರು.
ರಾಜ್ಯದಲ್ಲಿನ 9 ಕಡೆ ದೇಶಕ್ಕಾಗಿ ಹೋರಾಟ ಮಾಡಿ ಸ್ವಾತಂತ್ರ ಹೋರಾಟಗಾರರು ಹುತಾತ್ಮರಾಗಿದ್ದಾರೆ. ಆ ಎಲ್ಲ ಜಾಗಕ್ಕೆ ನಮ್ಮ ಬಿಜೆಪಿ ಮುಖಂಡರು ಹೋಗಲಿದ್ದು, ಕೃತಜ್ಞತೆಯನ್ನು ಸಲ್ಲಿಸಲಿದ್ದಾರೆ ಎಂದು ತಿಳಿಸಿದರು.
ಪ್ರತಿಯೊಬ್ಬ ಭಾರತೀಯನ ಮನೆಯ ಮೇಲೆ ಭಾರತದ ತ್ರಿವರ್ಣ ಧ್ವಜ ರಾರಾಜಿಸಬೇಕು. ಅದರ ಮುಖೇನ ಈ ದೇಶದ ಪ್ರತಿಯೊಬ್ಬ ಭಾರತೀಯನ ರಕ್ತದ ಕಣಕಣದಲ್ಲೂ ದೇಶಪ್ರೇಮ ಪ್ರಜ್ವಲಿಸಬೇಕು ಎಂದು ಈ ತಿರಂಗಾ ಯಾತ್ರೆಯನ್ನು ಮಾಡುತ್ತಿದ್ದೇವೆ ಎಂದು ವಿವರಿಸಿದರು.