Harithalekhani; ಒಂದು ಕಾಡಿನಲ್ಲಿ ಒಂದು ನರಿ ಹಾಗೂ ಒಂದು ನಾಯಿ ಸ್ನೇಹ ಮಾಡಿಕೊಂಡಿದ್ದವು. ನರಿಯ ಮನೆಗೆ ನಾಯಿ, ನಾಯಿಯ ಮನೆಗೆ ನರಿ ಹೋಗಿ ಬರುತ್ತಿದ್ದವು.
ಒಮ್ಮೆ ನಾಯಿ ನರಿಯನ್ನು ತನ್ನ ಮನೆಗೆ ಊಟಕ್ಕೆ ಬರಹೇಳಿತು. ನರಿಗೋ ಖುಷಿ..!
ನಾಯಿ ತನಗೆ ಸಿಕ್ಕ ಪದಾರ್ಥಗಳಿಂದ ಅಡಿಗೆ ಮಾಡಿ ಮನೆಗೆ ಬಂದ ನರಿಗೆ ಊಟ ಹಾಕಿತು. ನರಿ ತಿಂದು ತೇಗಿ ನಾಯಿಯನ್ನು ತನ್ನ ಮನೆಗೆ ಊಟಕ್ಕೆ ಕರೆಯಿತು. ಸ್ನೇಹ ಎಂದರೆ ಹೀಗಿರಬೇಕೆಂದು ನಾಯಿಗೆ ಸಂತೋಷವಾಯಿತು.
ಆದರೆ ನರಿ ಬಲು ಚತುರ. ಎರಡು ನಿಬಂಧನೆಗಳನ್ನು ಹಾಕಿತು. ಒಂದು. ನಾಯಿ ನರಿಯ ಮನೆಗೆ ನಡೆಯುತ್ತಾ ಬರಬೇಕು, ಓಡಕೂಡದು ಎಂದು. ಇನ್ನೊಂದು, ನಾಯಿ ಸೂರ್ಯ ಮುಳುಗುವುದರೊಳಗೆ ನರಿಯ ಮನೆಗೆ ಬರಬೇಕು ಎಂದು. ಏನೂ ತಿಳಿಯದ ನಾಯಿ ಇದಕ್ಕೊಪ್ಪಿತು.
ಔತಣದ ದಿನ ಬಂದೇ ಬಂದಿತು. ನಾಯಿ ಭಾರೀ ಖುಷಿಯಿಂದ ನರಿಯ ಮನೆಗೆ ಹೊರಟಿತು. ಮೊದಲು ಓಡುತ್ತಾ ಬಂತು. ಅರ್ಧ ದಾರಿಗೆ ಬಂದ ಮೇಲೆ ನರಿ ಹೇಳಿದ್ದು ನೆನಪಿಗೆ ಬಂದು ಮತ್ತೆ ತನ್ನ ಮನೆಗೆ ಹಿಂತಿರುಗಿ ನರಿಯ ಮನೆಗೆಂದು ನಡೆಯುತ್ತಾ ಹೊರಟಿತು. ಆಗಲೇ ಮತ್ತೆ ಓಡುತ್ತಾ ಬಂದಿತು. ಇನ್ನೇನು ನರಿಯ ಮನೆ ಸಿಕ್ಕಿತೆನ್ನುವಾಗ ನರಿ ಹೇಳಿದ್ದು ನೆನಪಾಗಿ ಮನೆಗೆ ಹಿಂದಿರುಗಿ ಮತ್ತೆ ನಡೆಯುತ್ತಾ ಹೊರಟಿತು.
ಹೀಗೆ ಬಹಳ ಸಲ ಮಾಡಿ ನಾಯಿ ನರಿಯ ಮನೆಗೆ ಹೊಟಿತು. ನರಿಯ ಮನೆಗೆ ಬರುವುದರಲ್ಲಿ ಸೂರ್ಯ ಪಶ್ಚಿಮದಲ್ಲಿ ಮುಳುಗಿದ್ದ. ಕತ್ತಲೆ ಆವರಿಸಿತ್ತು. ಆ ವೇಳೆಗೆ ನರಿ ತಾನು ತಯಾರು ಮಾಡಿದ್ದ ಅಡಿಗೆಯನ್ನೆಲ್ಲಾ ತಿಂದು ಮುಗಿಸಿ ನಾಯಿಗಾಗಿ ಕಾಯುತ್ತಿತ್ತು.
ನಾಯಿ ನರಿಯ ನಿಬಂಧನೆ ಅನುಸರಿಸಿ ಅನುಸರಿಸಿ ನರಿಯ ಮನೆ ಸೇರಿತು. ಆದರೆ ಸಂಜೆಯಾಗಿ ಹೋಗಿತ್ತಲ್ಲ! ನರಿಯ ಮನೆಗೆ ಬಂದಾಗ ನಾಯಿಗೆ ಸಿಕ್ಕಿದ್ದು ಬರೀ ಮೂಳೆ ಮಾತ್ರ. ಅದನ್ನೇ ನಾಯಿ ಕಡಿಯತೊಡಗಿತು. ಅಂದಿನಿಂದ ನಾಯಿಗೆ ಮೂಳೆ ಕಡಿಯುತ್ತಿರುವುದು ಅಭ್ಯಾಸವಾಗಿ ಹೋಯಿತು. ನಿಧಾನವಾಗಿ ನಡೆಯಲು ಯತ್ನಿಸಿದರೂ ಅದು ಓಡುವುದು ತಪ್ಪಲಿಲ್ಲ.
ಕೃಪೆ: ಕೆ.ಮುರಳಿ, ಮಕ್ಕಳಿಗಾಗಿ ನೂರಾರು ಕಥೆಗಳು, ಕೃಷಿವಿಕಾಸ್ ಪಬ್ಲಿಕೇಷನ್ಸ್, ಬೆಂಗಳೂರು.