
ದೊಡ್ಡಬಳ್ಳಾಪುರ: ಮೇ 8 ರಂದು ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಜೆಡಿಎಸ್ (JDS) ಪಕ್ಷದ 25 ನೇ ವರ್ಷದ ರಜತ ಮಹೋತ್ಸವ ಸಮಾರಂಭವನ್ನು ಅದ್ಧೂರಿಯಾಗಿ ನಡೆಸಲಾಗುತ್ತಿದೆ.
ಈ ಹಿನ್ನೆಲೆಯಲ್ಲಿ ಇಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಲಾಗಿದೆ.

ಬೆಂಗಳೂರಿನ ನಿಖಿಲ್ ಕುಮಾರಸ್ವಾಮಿ ಅವರ ಸ್ವಗೃಹಕ್ಕೆ ಭೇಟಿ ನೀಡಿದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಮಂಜುನಾಥ್, ದೊಡ್ಡಬಳ್ಳಾಪುರ ತಾಲೂಕು ಜೆಡಿಎಸ್ ಅಧ್ಯಕ್ಷ ಹರೀಶ್ ಗೌಡ ಸೇರಿದಂತೆ ಅನೇಕ ಹಿರಿಯ ಮುಖಂಡರು ನಿಖಿಲ್ ಕುಮಾರಸ್ವಾಮಿ ಅವರಿಗೆ ಆಹ್ವಾನ ನೀಡಿದರು.
ಈ ವೇಳೆ ಕಾರ್ಯಕ್ರಮದ ಆಯೋಜನೆ, ಬೈಕ್ ರ್ಯಾಲಿಯಲ್ಲಿ ವಿಳಂಬ ಮಾಡದೆ, ವೇದಿಕೆಗೆ ಹೆಚ್ಚಿನ ಸಮಯ ಮೀಸಲಿಡುವಂತೆ ನಿಖಿಲ್ ಕುಮಾರಸ್ವಾಮಿ ಸೂಚನೆ ನೀಡಿದರು.
20 ಸಾವಿರ ಮಂದಿ ಸೇರುವ ನಿರೀಕ್ಷೆ
ಮೇ 8 ರಂದು ಭಗತ್ ಸಿಂಗ್ ಕ್ರೀಡಾಂಣದಲ್ಲಿ ನಿಖಿಲ್ ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭಕ್ಕೆ ಸುಮಾರು 20 ಸಾವಿರ ಜನ ಸೇರುವ ನಿರೀಕ್ಷೆ ಇದ್ದು, ಇದಕ್ಕಾಗಿ ಮಂಗಳವಾರ ವೇದಿಕೆ ಸಿದ್ದತೆಗೆ ಭೂಮಿ ಪೂಜೆ ಮಾಡಲಾಗಿದೆ.
ದೊಡ್ಡಬಳ್ಳಾಪುರ ತಾಲ್ಲೂಕಿನ ಪಕ್ಷದ ಎಲ್ಲಾ ಹಿರಿಯ ಹಾಗೂ ಯುವ ಮುಖಂಡರನ್ನು ಆಹ್ವಾನಿಸಲಾಗಿದೆ. ಈ ಸಮಾವೇಶ ಸದ್ಯದಲ್ಲೇ ಬರುವ ಗ್ರಾಮ ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆಗೆ ಈ ಸಮಾವೇಶ ಪಕ್ಷದ ಕಾರ್ಯಕರ್ತರಿಗೆ ಶಕ್ತಿ ತುಂಬಲಿದೆ ಎಂಬ ಉದ್ದೇಶ ಜೆಡಿಎಸ್ ಮುಖಂಡರದ್ದಾಗಿದೆ.
ಭಿನ್ನಮತ ಶಮನ

ಮತ್ತೊಂದೆಡೆ ಜೆಡಿಎಸ್ನ (JDS) ಹಿರಿಯ ಮುಖಂಡ ಹುಸ್ಕೂರು ಆನಂದ್ ನೇತೃತ್ವದಲ್ಲಿ ಇಂದು ಜೆಡಿಎಸ್ ಮುಖಂಡರು ನಿಖಿಲ್ ಕುಮಾರಸ್ವಾಮಿ ಅವರನ್ನು ಭೇಟಿಯಾಗಿದ್ದು, ಈ ವೇಳೆ ಜಿಲ್ಲಾಧ್ಯಕ್ಷ ಮಂಜುನಾಥ್ ಸಹ ಇದ್ದು, ದೊಡ್ಡಬಳ್ಳಾಪುರ ಜೆಡಿಎಸ್ ಪಕ್ಷದಲ್ಲಿನ ಭಿನಮತ ಶಮನವಾಗಿದೆ ಎನ್ನಲಾಗಿದೆ.
ಹುಸ್ಕೂರು ಆನಂದ್ ಅವರ ನೇತೃತ್ವದಲ್ಲಿ ಪುಟ್ಟರಾಜು, ಶ್ರೀನಿವಾಸ್, ನಾಗರಾಜ್, ಅಶ್ವಥ್ ನಾರಾಯಣ್, ರಾಜಕುಮಾರ್, ಚನ್ನೇಗೌಡ್ರು, ವೆಂಕಟೇಶ್, ಸತೀಶ್ ಮತ್ತಿತರ ಮುಖಂಡರ ನಿಯೋಗ ನಿಖಿಲ್ ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
ಈ ವೇಳೆ ದೊಡ್ಡಬಳ್ಳಾಪುರ ನಗರದ ಭಗತ್ ಸಿಂಗ್ ಕ್ರೀಡಾಂಗಣದಲ್ಲಿ ಇದೇ ಮೇ 8 ರಂದು ಆಯೋಜಿಸಲಾಗಿರುವ “ಜನರೊಂದಿಗೆ ಜನತಾದಳ” ಬೃಹತ್ ಸಮಾವೇಶ ನಿಖಿಲ್ ಕುಮಾರಸ್ವಾಮಿ ಅವರ ಸಾರಥ್ಯದಲ್ಲಿ ನಡೆಯುತ್ತಿದ್ದು, ಈ ಕಾರ್ಯಕ್ರಮವು ಎಲ್ಲರೂ ಕಾರ್ಯಕರ್ತರು ಜೆಡಿಎಸ್ ಮುಖಂಡರು, ನಿಷ್ಠಾವಂತ ಕಾರ್ಯಕರ್ತರು ಜನಸಾಮಾನ್ಯರ ಧ್ವನಿಯಾಗಿರುವ ಜೆಡಿಎಸ್ ಪಕ್ಷದ ಈ ಬೃಹತ್ ಸಮಾವೇಶವನ್ನು ಯಶಸ್ವಿ ಮಾಡಬೇಕೆಂದು ಹುಸ್ಕೂರು ಆನಂದ್ ಅವರು ಮನವಿ ಮಾಡಿದ್ದಾರೆ.
ಇದೇ ವೇಳೆ ಬಿ.ಮುನೇಗೌಡ ಅವರನ್ನು ಕಡೆಗಣಿಸದೆ, ಅವರ ನೇತೃತ್ವದಲ್ಲಿ ಕಾರ್ಯಕ್ರಮ ಮಾಡಬೇಕೆಂಬ ಸಲಹೆ ನೀಡಲಾಗಿದೆ ಮಾಹಿತಿ ತಿಳಿದುಬಂದಿದ್ದು, ನಾಳೆ ಸುದ್ದಿಗೋಷ್ಠಿ ನಡೆಸಲಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ.

