ದೊಡ್ಡಬಳ್ಳಾಪುರ: ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ದಾಸ ಶ್ರೇಷ್ಠ ಕನಕದಾಸರ 533ನೇ ಜಯಂತ್ಯುತ್ಸವ ಕಾರ್ಯಕ್ರಮ ನಗರದ ತಾಲೂಕು ಕಚೇರಿಯಲ್ಲಿ ನಡೆಯಿತು.
ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಉಪವಿಭಾಗಾಧಿಕಾರಿ ಅರುಳ್ ಕುಮಾರ್, ಕುಲ ಕುಲವೆಂದು ಹೊಡೆದಾಡದಿರಿ ಎಂದ ಕನಕದಾಸರು ಸಮಾಜದ ಮೇಲು ಕೀಳು ಭಾವನೆಗಳನ್ನು ತೊಡೆದುಹಾಕಲು ಶ್ರಮಿಸಿದರು.ಅಲೌಕಿಕ ಬದುಕು, ಭಕ್ತಿ ಹಾಗೂ ಬದುಕಿನ ಶ್ರದ್ಧೆಗಳ ಬಗ್ಗೆ ತಮ್ಮ ಕೃತಿಗಳಲ್ಲಿ ಸವಿಸ್ತಾರವಾಗಿ ವಿವರಿಸಿದ್ದಾರೆ. ಕನ್ನಡ ಸಾಹಿತ್ಯದ ನಾನಾ ಪ್ರಕಾರಗಳಲ್ಲಿ ದಾಸ ಸಾಹಿತ್ಯಕ್ಕೆ ಮಹತ್ವದ ಸ್ಥಾನವಿದೆ. ದಾಸ ಶ್ರೇಷ್ಠ ದಾಸರು ಎನ್ನುವ ಪದಕ್ಕೆ ಆನ್ವರ್ಥರಾಗಿದ್ದ ಕನಕದಾಸರು ಎಲ್ಲಾ ವರ್ಗಗಳ ಜನರಿಗೂ ಆದರ್ಶಪ್ರಾಯ. ಹದಿನಾರನೇ ಶತಮಾನದಲ್ಲಿ ಉದಯಿಸಿದ ತಿಮ್ಮಪ್ಪ ನಾಯಕ ತನ್ನ ಪಾಳೇಗಾರಿಕೆ, ವೈಭವ, ಶ್ರೀಮಂತಿಕೆಗಳನ್ನು ತೊರೆದು ದಾಸನಾಗಿದ್ದು ಇತಿಹಾಸ. ತಮ್ಮ ರಾಮಧಾನ್ಯ ಚರಿತೆಯ ಮೂಲಕ ರಾಗಿ ಭತ್ತಗಳ ವಿಚಾರ ಹೇಳುತ್ತಾ, ಸಮಾಜದ ಮೇಲ್ವರ್ಗ ಹಾಗೂ ತಳ ಸಮುದಾಯಗಳ ವೈರುದ್ಯಗಳನ್ನು ತಮ್ಮ ಕೃತಿಗಳಲ್ಲಿ ಪ್ರತಿಪಾದಿಸಿರುವ ಕನಕದಾಸರ ಚಿಂತನೆಗಳನ್ನು ನಾವು ಬದುಕಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ಹಾಗೂ ತಹಸೀಲ್ದಾರ್ ಟಿ.ಎಸ್.ಶಿವರಾಜ್ ಮಾತನಾಡಿ, ಕನಕದಾಸರು ಜಾತ್ಯಾತೀತ ಮನೋಭಾವ ಬಿತ್ತುವ ಮೂಲಕ ವಿಶ್ವಮಾನವತೆಯನ್ನು ಸಾರಿದ ಮಹನೀಯರಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸೋಮಶೇಖರ್, ಕಸಬಾ ರಾಜಸ್ವ ನಿರೀಕ್ಷಕ ಎನ್.ಲಕ್ಷ್ಮೀನರಸಿಂಹಯ್ಯ, ಗ್ರಾಮ ಲೆಕ್ಕಿಗ ರಾಜೇಂದ್ರ ಬಾಬು, ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಕೆ.ಎಂ.ಕೃಷ್ಣಮೂರ್ತಿ, ತಾಲೂಕು ಕುರುಬರ ಸಂಘದ ಸಹ ಕಾರ್ಯದರ್ಶಿ ವೇಣುಗೋಪಾಲ್, ಖಜಾಂಚಿ ಅರಣ್ ಕುಮಾರ್,ಸಂಚಾಲಕ ಸತೀಶ್, ನಗರಸಭೆ ಮಾಜಿ ಸದಸ್ಯ ಮಲ್ಲೇಶ್, ಮತ್ತಿತರರು ಭಾಗವಹಿಸಿದ್ದರು.
ಕ್ಷಣ ಕ್ಷಣದ ತಾಜಾ ಸುದ್ದಿ, ಮಾಹಿತಿಗಾಗಿ Harithalekhaniಯನ್ನು Facebook / Twitterಗಳಲ್ಲಿ ಫಾಲೋ ಮಾಡಿ

