ದೊಡ್ಡಬಳ್ಳಾಪುರ: ರಾಜ್ಯ ಸರ್ಕಾರ ಮರಾಠ ಅಭಿವೃದ್ಧಿ ನಿಗಮವನ್ನು ಸ್ಥಾಪನೆ ಮಾಡುತ್ತಿರುವುದನ್ನು ವಿರೋಧಿಸಿ ಹಾಗೂ ಈ ನಿರ್ಧಾರವನ್ನು ಸರ್ಕಾರ ಹಿಂಪಡೆಯಬೇಕೆಂದು ಆಗ್ರಹಿಸಿ, ಕನ್ನಡ ಪರ ಸಂಘಟನೆಗಳಿಂದ ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಬೆಂಬಲಿಸಿ, ತಾಲೂಕಿನ ಕನ್ನಡ ಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಕರೆ ನೀಡಿದ್ದ ದೊಡ್ಡಬಳ್ಳಾಪುರ ಬಂದ್ ಶಾಂತಿಯುತವಾಗಿ ನಡೆದು, ಬಂದ್‍ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು.
ನಗರದ ವಾಣಿಜ್ಯ ಪ್ರದೇಶದಲ್ಲಿ ಬೆಳಗಿನಿಂದಲೇ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದವು. ಮಾರುಕಟ್ಟೆ ಪ್ರದೇಶ ಸಹ ಬಂದ್ ಆಗಿತ್ತು. ಎಪಿಎಂಸಿಯಲ್ಲಿ ಬಹಳಷ್ಟು ಅಂಗಡಿಗಳು ತೆರೆದಿದ್ದು, ತರಕಾರಿಗಳ ವ್ಯಾಪಾರ ನಡೆಯಿತು. ನೇಕಾರಿಕೆ ಉದ್ಯಮ ಎಂದಿನಂತಿತ್ತು.
ಸಾರಿಗೆ ಸಂಸ್ಥೆ ಹಾಗೂ ಬಿಎಂಟಿಸಿ ಬಸ್ ಸಂಚಾರ ಬೆಳಿಗ್ಗೆ ಎಂದಿನಂತೆ ಆರಂಭವಾಯಿತು. ಈ ವೇಳೆ ಬಸ್ ಸಂಚಾರ ಕೈಗೊಳ್ಳದಂತೆ ಬಂದ್‍ಗೆ ಬೆಂಬಲಿಸುವಂತೆ, ಸಾರಿಗೆ ಇಲಾಖೆಯ ಸಿಬ್ಬಂದಿಗೆ ಪ್ರತಿಭಟನಾಕಾರರು ಮನವಿ ಮಾಡಿದರು. ಆದರೆ ಪ್ರಯಾಣಿಕರ ಕೊರತೆಯಿದ್ದರೂ ಬಸ್ ಸಂಚಾರ ಎಂದಿನಂತೆ ಸಂಚರಿಸಿತು. ನಂತರ ಬೈಕ್ ರ್ಯಾಲಿಯಲ್ಲಿ ತೆರಳಿದ ವಿವಿಧ ಸಂಘಟನೆಗಳ ಮುಖಂಡರು ನಗರದಲ್ಲಿ ತೆರೆದಿದ್ದ ಹೋಟೆಲ್ ಹಾಗೂ ಕೆಲವು ಅಂಗಡಿಗಳನ್ನು ಮುಚ್ಚುವಂತೆ ಮನವಿ ಮಾಡಿದರು.
ತಾಲೂಕಿನ ಎಲ್ಲಾ ಬ್ಯಾಂಕ್‍ಗಳು ಹಾಗೂ ಸರ್ಕಾರಿ ಕಚೇರಿಗಳು ಎಂದಿನಂತೆ ಕಾರ್ಯ ನಿರ್ವಹಿಸಿತಾದರೂ ಗ್ರಾಹಕರ ಸಂಖ್ಯೆ ಕಡಿಮೆ ಇತ್ತು. ಕೈಗಾರಿಕಾ ಪ್ರದೇಶದಲ್ಲಿ ಕೆಲ ಕಾರ್ಖಾನೆಗಳು ರಜೆ ಘೋಷಿಸಿದ್ದರು. ಮಧ್ಯಾಹ್ನದ ನಂತರ ಜನಜೀವನ ಸಹಜ ಸ್ಥಿತಿಗೆ ಮರಳಿತು.
ಯಾವುದೇ ಅಹಿತಕರ ಘಟನೆ ನಡೆಯದಂತೆ ನಗರದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ಪ್ರತಿಭಟನಾ ಮೆರವಣಿಗೆ: ಕನ್ನಡಪರ ಸಂಘಟನೆಗಳ ಒಕ್ಕೂಟದಿಂದ ನಗರದ ನೆಲದಾಂಜನೇಯಸ್ವಾಮಿ ದೇವಾಲಯದ ಡಾ.ರಾಜ್‍ಕುಮಾರ್ ವೃತ್ತದ ಬಳಿಯಿಂದ ಪ್ರತಿಭಟನಾ ಮೆರವಣಿಗೆ ಹೊರಟ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಕಾರ್ಯಕರ್ತರು ತಾಲೂಕು ಕಚೇರಿ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿದರು.ನಂತರ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಆದೇಶ ಹಿಂಪಡೆಯಲು ಆಗ್ರಹ: ಪ್ರತಿಭಟನಾ ಮೆರವಣಿಗೆ ಮೆರವಣಿಯಲ್ಲಿ ರಾಜ್ಯ ಸರ್ಕಾರ, ಸಿಎಂ ಯಡಿಯೂರಪ್ಪ, ಬಸವಗೌಡ ಪಾಟೀಲ್ ಯತ್ನಾಳ ವಿರುದ್ದ ಘೋಷಣೆ ಕೂಗಿದ ಪ್ರತಿಭಟನಾಕಾರರು ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆ ಆದೇಶ ಹಿಂಪಡೆಯುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರು, ಮರಾಠ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶ ಹೊರಡಿಸಿ 50 ಕೋಟಿ ರೂ.ಮೀಸಲಿಟ್ಟಿರುವುದು ಇಡೀ ನಾಡಿನ ಕನ್ನಡಿಗರಿಗೆ ಮಾಡಿರುವ ದ್ರೋಹವಾಗಿದೆ. ಮುಂಬರುವ ಬೆಳೆಗಾವಿ ಲೋಕಸಭೆ ಹಾಗೂ ಬಸವಕಲ್ಯಾಣ ವಿಧಾನಸಭಾ ಚುನಾವಣೆಗಳಲ್ಲಿ ಮರಾಠಿಗರ ಮತಗಳನ್ನು ಪಡೆಯುವ ಹುನ್ನಾರ ಇದಾಗಿದೆ. ಇದು ರಾಜ್ಯದ ಆಡಳಿತ ದುರ್ಬಲತೆ ಹಾಗೂ ಸಾಮಾಜಿಕ ಅಶಾಂತಿಗೆ ಕಾರಣವಾಗುತ್ತದೆ. ಕನ್ನಡಕ್ಕೆ ಅಪಮಾನ ಮಾಡುತ್ತಿರುವ ಮರಾಠಿಗರಿಗೆ ಸರ್ಕಾರ ಮಣೆ ಹಾಕುತ್ತಿದೆ. ಕನ್ನಡಿಗರನ್ನು ಭಾಷೆ ಮತ್ತು ಧರ್ಮದ ಹೆಸರಿನಲ್ಲಿ ವಿಭಜನೆ ಮಾಡಲು ಬಿಡುವುದಿಲ್ಲ ಎಂದ ಮುಖಂಡರು, ಈ ಬಂದ್ ಯಾವುದೇ ಭಾಷೆ ಅಥವಾ ಧರ್ಮದವರ ವಿರುದ್ಧವಲ್ಲ. ಬದಲಿಗೆ ಬಿಜೆಪಿ ನೇತೃತ್ವದ ಸರ್ಕಾರಗಳು ಕರುನಾಡು ಮತ್ತು ಕನ್ನಡಿಗರಿಗೆ ಮಾಡುತ್ತಿರುವ ದ್ರೋಹಕ್ಕೆ ವಿರೋಧ ವ್ಯಕ್ತಪಡಿಸುವುದಾಗಿದೆ ಎಂದರು.
ಪ್ರತಿಭಟನೆಯಲ್ಲಿ ಕನ್ನಡ ಪಕ್ಷದ ಅಧ್ಯಕ್ಷ ಸಂಜೀವ್ ನಾಯಕ್, ಪ್ರಧಾನ ಕಾರ್ಯದರ್ಶಿ ಡಿ.ಪಿ.ಆಂಜನೇಯ, ಕನ್ನಡ ಜಾಗೃತ ಪರಿಷತ್ತಿನ ಕಾರ್ಯದರ್ಶಿ ಟಿ.ಎನ್.ಪ್ರಭುದೇವ್, ಕನ್ನಡಪರ ಹೋರಾಟಗಾರ ಜಿ.ಸತ್ಯನಾರಾಯಣ್, ತಾಲೂಕು ಡಾ.ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸು.ನರಸಿಂಹಮೂರ್ತಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷೆ ಪ್ರಮೀಳ ಮಹಾದೇವ್, ಶಿವರಾಜ್‍ಕುಮಾರ್ ಸೇನಾ ಸಮಿತಿಯ ಅಧ್ಯಕ್ಷ ರಮೇಶ್, ಜಿಲ್ಲಾ ಶಿವರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಚೌಡರಾಜ್, ಕನ್ನಡ ಜಾಗೃತ ವೇದಿಕೆ ತಾಲೂಕು ಅಧ್ಯಕ್ಷ ನಾಗರಾಜ್, ಕರವೇ ತಾಲೂಕು ಅಧ್ಯಕ್ಷ ಮರುಳಾರಾಧ್ಯ, ಕಾಂಗ್ರೆಸ್, ಜೆಡಿಎಸ್, ತಾಲೂಕು ಕನ್ನಡಪಕ್ಷ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ತಾಲೂಕು ಘಟಕ, ಕರ್ನಾಟಕ ರಕ್ಷಣಾ ವೇದಿಕೆಯ ವಿವಿಧ ಬಣಗಳು, ದಲಿತ ವಿಮೋಚನಾ ಸೇನೆ, ತಾಲೂಕು ಕನ್ನಡ ಜಾಗೃತ ಪರಿಷತ್ತು, ಜಯ ಕರ್ನಾಟಕ, ಸುವರ್ಣ ಕರ್ನಾಟಕ ಜನಶಕ್ತಿ ವೇದಿಕೆ, ಭುವನೇಶ್ವರಿ ಕನ್ನಡ ಸಂಘ, ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಭಾಗವಹಿಸಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿಯ ಫೇಸ್ಬುಕ್ ಪುಟ ಹಾಗೂ ಟ್ವಿಟರ್ನಲ್ಲಿ ಫಾಲೋ ಮಾಡಿ

