
ದೊಡ್ಡಬಳ್ಳಾಪುರ: ಕೈಗಾರಿಕೆಗಳ ಮಾಲೀಕರು ತಮ್ಮ ಸಾಮಾಜಿಕ ಕಳಕಳಿಯ ಕೆಲಸಗಳನ್ನು ಸಮಾಜಮುಖಿಯಾಗಿ ಮಾಡಬೇಕು ಎನ್ನುವುದನ್ನು ನಮಗೆ ತೋರಿಸಿಕೊಟ್ಟವರಲ್ಲಿ ಪ್ರಮುಖರು ಈ ಹಿಂದಿನ ಜಿಲ್ಲಾಧಿಕಾರಿ ಕರೀಗೌಡರು ಎಂದು ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಕೈಗಾರಿಕೆಗಳ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಂಜಿನೇಯಲು ಹೇಳಿದರು.
ಅವರು ನಗರದ ನಾಗರಕೆರೆ ಏರಿಯ ಅಂಚಿನಲ್ಲಿ ಏಸಿಲಾರ್ ಕಂಪನಿ ವತಿಯಿಂದ ಸಸಿಗಳನ್ನು ನೆಟ್ಟು ಬೆಳೆಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
2018-19ರಲ್ಲಿ ಕೈಗಾರಿಕೆಗಳವರು ಸಹ ಕೆರೆಗಳ ಅಭಿವೃದ್ಧಿ,ಸಸಿಗಳನ್ನು ನೆಟ್ಟು ಬೆಳೆಸಲು ನಮ್ಮನ್ನು ಪ್ರೋತ್ಸಾಹಿಸುತ್ತ ಮಲಗಿದ್ದವರನ್ನು ಎಬ್ಬಿಸಿಕೊಂಡು ಬಂದು ಕೆಲಸ ಮಾಡಿಸಿದ್ದು ಕರೀಗೌಡರು. ಇವರ ಪರಿಸರದ ಕಾಳಜಿಯ ಫಲವನ್ನು ಎರಡೇ ವರ್ಷಗಳಲ್ಲಿಯೇ ನಾವು ಕಾಣುತ್ತಿದ್ದೇವೆ. ಸಸಿಗಳನ್ನು ನೆಟ್ಟರಷ್ಟೇ ಸಾಲದು ಅವುಗಳನ್ನು ಒಂದೆರಡು ವರ್ಷಗಳಾದರು ಪೋಷಣೆ ಮಾಡಬೇಕು ಎಂದು ಹೇಳುತ್ತಿದ್ದರು. ಇದರಂತೆ ಏಸಿಲಾರ್ ಕಂಪನಿಯು ನಾಗರಕೆರೆ ಏರಿಯ ಅಂಚಿನಲ್ಲಿ ಮೊದಲ ಹಂತದಲ್ಲಿ 500 ಸಸಿಗಳನ್ನು ನೆಟ್ಟು ಬೆಳೆಸಿರುವ ಸಸಿಗಳು ಎರಡೇ ವರ್ಷಗಳಲ್ಲಿ ನೆರಳು ನೀಡುವಷ್ಟು ದೊಡ್ಡದಾಗಿ ಬೆಳೆದು ನಿಂತಿರುವುದನ್ನು ನೋಡಿದಾಗ ಸಾರ್ಥಕವೆನಿಸುತ್ತದೆ ಎಂದು ಹೇಳುವ ಮೂಲಕ ಭಾವುಕರಾದರು.
ಬಾಶೆಟ್ಟಿಹಳ್ಳಿ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಕ್ಲೋ ಕೈಗಾರಿಕೆಯ ವ್ಯವಸ್ಥಾಪಕ ಪ್ರೇಮ್ಚಂದ್ ಮಾತನಾಡಿ, ಹತ್ತಾರು ಜನ ಅಧಿಕಾರಿಗಳು ಬಂದು ಹೋಗುತ್ತಾರೆ. ಆದರೆ ಕೆಲವರು ಮಾತ್ರ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತಹ ಕೆಲಸ ಮಾಡುತ್ತಾರೆ. ಇಂತಹ ಕೆಲಸ ಮಾಡಲು ಸ್ಪೋರ್ತಿಯಾಗಿದ್ದಷ್ಟೇ ಅಲ್ಲದೆ ಇವರ ಮಾರ್ಗದರ್ಶನದಂತೆ ನಮ್ಮ ಕಾರ್ಖಾನೆಯಲ್ಲಿ ಮೇಲ್ಛಾವಣಿ ಮಳೆ ನೀರು ಸಂಗ್ರಹ ಮಾಡಲು ಆರಂಭಿಸಿದ ನಂತರ ಮಳೆಗಾದಲ್ಲಿ ಆರು ತಿಂಗಳ ಕಾಲ ನಮ್ಮ ಕೈಗಾರಿಕೆಗೆ ಅಗತ್ಯವಾಗುಷ್ಟು ಮಳೆ ನೀರನ್ನೇ ಬಳಸಲಾಗಿದೆ. ಇದರಿಂದ ಸಾಕಷ್ಟು ಅಂತರ್ಜಲ, ವಿದ್ಯುತ್ ಬಿಲ್ ಸಹ ಉಳಿತಾಯವಾಗಿದೆ ಎಂದರು.
ಬೆಂಗಳೂರು ರೋಟರ್ ಕ್ಲಬ್ ಗರ್ವನರ್ ನಾಗೇಂದ್ರ ಪ್ರಸಾದ್ ಮಾತನಾಡಿ, ದೇವನಹಳ್ಳಿ ತಾಲ್ಲೂಕಿನ ಕೊಯಿರ ಗ್ರಾಮದ ಕೆರೆಯನ್ನು ಅಂದಿನ ಜಿಲ್ಲಾಧಿಕಾರಿಗಳಾಗಿದ್ದ ಕರೀಗೌಡ ಅವರ ಸಹಕಾರದೊಂದಿಗೆ ರೋಟರಿ ಕ್ಲಬ್ ಅಭಿವೃದ್ಧಿ ಮಾಡಿತ್ತು. ದಶಕಗಳ ಕಾಲ ಕೆರೆಗೆ ನೀರು ಬಂದು ತುಂಬದೇ ಬರಿದಾಗಿದ್ದ ಕೆರೆ ಹೂಳು ತೆಗೆದ ನಂತರ ತುಂಬಿಕೊಂಡಿತು. ಇದರಿಂದ ಈ ಪ್ರದೇಶದಲ್ಲಿನ ರೈತರು ಮತ್ತೆ ಭತ್ತ ಬೆಳೆದರು, ಕೊಳವೆ ಬಾವಿಗಳಲ್ಲಿನ ಅಂತರ್ಜಲ ವೃದ್ಧಿಯಾಗಿದೆ. ರೋಟರಿ ಕ್ಲಬ್ಗೆ ಇದೊಂದು ಸಾರ್ಥಕ ಕೆಲಸ. ಇದರಿಂದ ಸ್ಪೂರ್ತಿಗೊಂಡು ಈಗ ಮತ್ತಷ್ಟು ಕೆರೆಗಳ ಅಭಿವೃದ್ಧಿ ಕೆಲಸ ಆರಂಭಿಸಲಾಗಿದೆ. ಹಾಗೆಯೆ ರೋಟರಿ ವನಗಳನ್ನು ಬೆಳೆಸಲಾಗುತ್ತಿದೆ ಎಂದರು.
ಏಸ್ಸಿಲಾರ್ ಕಂಪನಿಯ ಸೈಟ್ ಹೆಡ್ ಕುಲದೀಪ್ಸಿಂಗ್ ಮಾತನಾಡಿ, ನಾಗರಕೆರೆ ಏರಿಯ ಅಂಚಿನಲ್ಲಿ ಕಂಪನಿಯ ಸಿಎಸ್ಆರ್ ಯೋಜನೆಯಲ್ಲಿ 500 ಸಸಿಗಳನ್ನು ನೆಡಲಾಗಿದೆ. ಈಗ ಎರಡನೇ ಹಂತದಲ್ಲಿ 550 ಸಸಿಗಳನ್ನು ನೆಟ್ಟು ಎರಡು ವರ್ಷಗಳ ಕಾಲ ಪೋಷಣೆ ಮಾಡುವ ಕೆಲಸವನ್ನು ವಹಿಸಿಕೊಳ್ಳಲಾಗಿದೆ ಎಂದರು.
ಸಸಿ ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಕೃಷಿ ಮಾರುಕಟ್ಟೆ ನಿರ್ದೇಶಕ ಸಿ.ಎಸ್. ಕರೀಗೌಡ, ಜಮ್ಮು ಕಾಶ್ಮೀರದ ಲಡಾಖ್ ಪ್ರದೇಶದಲ್ಲಿ ₹150 ಕೋಟಿ ಸಿಎಸ್ಆರ್ ನೆರವಿನಿಂದಲೇ ಶಾಲಾ, ಕಾಲೇಜು ಈಗ ವಿಶ್ವ ವಿದ್ಯಾಲಯವನ್ನು ಸ್ಥಾಪಿಸಿ ಮುನ್ನಡೆಸಲಾಗುತ್ತಿದೆ. ಒಳ್ಳೆಯ ಕೆಲಸಕ್ಕೆ ಜನರಿಂದ ಸದಾ ಸಹಕಾರ ಇದ್ದೇ ಇರುತ್ತದೆ. ಆದರೆ ನಾವು ನೀಡುವ ಹಣ ಒಳ್ಳೆಯ ಕೆಲಸಕ್ಕೆ ಉಪಯೋಗಿಸುವುದು ಪಾರದರ್ಶಕವಾಗಿರಬೇಕು ಎಂದರು.
ಕಾರ್ಯಕ್ರಮದಲ್ಲಿ ಏಸಿಲಾರ್ ಸಿಎಸ್ಆರ್ ವಿಭಕರೀಗೌಡರನ್ ಮಲ್ಪೆ,ರಶ್ಮಿ, ತಿರುಮಲ ನರ್ಸರಿಯ ಹನುಮಂತರೆಡ್ಡಿ ಇದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್, ಕೂ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ.

