
ದೊಡ್ಡಬಳ್ಳಾಪುರ: ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ತಾಲೂಕು ಕಚೇರಿಯಲ್ಲಿ ಸಂತ ಸೇವಾಲಾಲರ ಜಯಂತಿಯನ್ನು ಆಚರಿಸಲಾಯಿತು.
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿ, ಜನರ ಒಳಿತಿಗಾಗಿ ಪವಾಡ ಪುರುಷರಾಗಿ ಅವತರಿಸಿದ ಸಂತ ಸೇವಾಲಾಲರಂತಹ ಮಹನೀಯರು ಆದರ್ಶವಾಗಬೇಕು. ಇಂದು ಬಂಜಾರರು ಸಾಂಸ್ಕೃತಿಕ ನೆಲೆಯಲ್ಲಿ ತನ್ನ ಅಸ್ಮಿತೆಯನ್ನು ಗುರುತಿಸಿಕೊಳ್ಳಲು ಮಹಾನುಭಾವರ ಸತ್ಕಾರ್ಯಗಳೇ ಕಾರಣವಾಗಿವೆ. ಸರ್ಕಾರದ ಸೌಲಭ್ಯಗಳನ್ನು ಬಳಸಿಕೊಂಡು ಹಿಂದುಳಿದ ಸಮುದಾಯಗಳು ಮುಖ್ಯವಾಹಿನಿಗೆ ಬರಬೇಕಿದೆ. ಬಂಜಾರ ಸಮುದಾಯದಲ್ಲಿ ಸೇವಾಲಾಲರು ವೀರನಾಗಿ, ವಿರಾಗಿಯಾಗಿ, ಶ್ರೇಷ್ಠ ದಾರ್ಶನಿಕನಾಗಿ ಮತ್ತು ಸಾಂಸ್ಕೃತಿಕ ನಾಯಕನಾಗಿ ಹೊರಹೊಮ್ಮಿದ್ದಾರೆ. ತಾವು ಶಾಸಕರದ ಮೇಲೆ ಹಿಂದುಳಿದ ವರ್ಗಗಳಿಗೆ ಹಲವಾರು ಜನಪರ ಕಾರ್ಯಗಳನ್ನು ಮಾಡಲಾಗಿದೆ. ಹಿಂದುಳಿದ ಸಮುದಾಯಗಳಿಗೆ ವಿಶೇಷ ಅನುದಾನಗಳನ್ನು ನೀಡಲಾಗಿದೆ ಎಂದರು.
ಬಂಜಾರ ಸೇವಾ ಸಂಘದ ರಾಜ್ಯ ಉಪಾಧ್ಯಕ್ಷ ಹಾಗೂ ಜಿಲ್ಲಾಧ್ಯಕ್ಷ ರಾಮಾ ನಾಯಕ್ ಮಾತನಾಡಿ, ಲಂಬಾಣಿಗರಲ್ಲಿ ಸೇವಾಲಾಲ್ ಬಹುದೊಡ್ಡ ಸಾಧುಪುರುಷ. ಬಾಲಬ್ರಹ್ಮಚಾರಿಯಾಗಿ ತಪಸ್ಸು, ಧ್ಯಾನ ಮತ್ತು ಭಕ್ತಿ ಮೂಲಕ ಅಧ್ಯಾತ್ಮವನ್ನು ಅಪ್ಪಿಕೊಂಡು, ತನ್ನ ಜನಾಂಗದ ಸೇವೆಯನ್ನು ಮಾಡಿದ ಮಹಾನ್ ಹಿತಚಿಂತಕ. ಸರ್ಕಾರ ಜಯಂತಿಗಳನ್ನು ಆಚರಿಸುವುದರೊಂದಿಗೆ ಈ ಸಮುದಾಯಕ್ಕೆ ಸಲ್ಲಬೇಕಾದ ಸಾಮಾಜಿಕ ನ್ಯಾಯ ನೀಡಬೇಕು ಎಂದರು.
ತಾಲೂಕಿನಲ್ಲಿ ಲಂಬಾಣಿ ತಾಂಡಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಬೇಕು. ನಮ್ಮ ಮೀಸಲಾತಿಗೆ ದಕ್ಕೆ ತಾರದಂತೆ, ಸಮುದಾಯ ಸಮಗ್ರ ಅಭಿವೃದ್ಧಿಗೆ ಸರ್ಕಾರ ನೆರವು ನೀಡಬೇಕು ಎಂದು ಮುಖಂಡರು ಮನವಿ ಮಾಡಿದರು.
ತಹಶಿಲ್ದಾರ್ ಟಿ.ಎಸ್.ಶಿವರಾಜ್, ಉಪ ತಹಸೀಲ್ದಾರ್ ಸುರೇಶ್, ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಸೋಮಶೇಖರ್, ಗ್ರಾಮ ಲೆಕ್ಕಿಗ ರಾಜೇಂದ್ರ ಬಾಬು, ಬಂಜಾರ ಸೇವಾ ಸಂಘದ ಮುಖಂಡರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್, ಕೂ ಫಾಲೋ ಮಾಡಿ.ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್..

