
ದೊಡ್ಡಬಳ್ಳಾಪುರ: ಹಿಂದಿ ಹಾಗೂ ಇಂಗ್ಲಿಷ್ ಹೇರಿಕೆಯಿಂದಾಗಿ ಕನ್ನಡಕ್ಕೆ ಆಪತ್ತು ಬಂದಿರುವುದಂತೂ ನಿಜವೆಂದು ಸಾಹಿತಿ ಡಾ.ಸಿದ್ದಲಿಂಗಯ್ಯ ಆತಂಕ ವ್ಯಕ್ತಪಡಿಸಿದರು.
ನಗರದ ಬಸವ ಭವನದಲ್ಲಿ ನಡೆದ 22ನೇ ಬೆಂ.ಗ್ರಾ.ಜಿಲ್ಲಾ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕದಲ್ಲಿನ ಕೇಂದ್ರ ಸರ್ಕಾರದ ಕಚೇರಿಗಳಲ್ಲಿ ಕನ್ನಡವನ್ನು ಬಳಸಬೇಕು ಎಂದು ಆಗ್ರಹಿಸಿದರು. ತ್ರೀಭಾಷಾ ನೀತಿ ಅನುಸರಿಸಲಾಗುತ್ತಿದೆ. ಕೇಂದ್ರ ಸರ್ಕಾರದ ರೈಲ್ವೆ, ಬ್ಯಾಂಕಿಂಗ್ ನೇಮಕಾತಿ ಪರೀಕ್ಷೆಗಳಲ್ಲಿ ಹಿಂದಿ ಹಾಗೂ ಇಂಗ್ಲಿಷ್ ಕೈ ಬಿಟ್ಟು ಕನ್ನಡದ ಬಳಕೆ ಮಾಡಬೇಕು. ಬ್ಯಾಂಕಿಂಗ್ ಪರೀಕ್ಷೆಗಳು ಕನ್ನಡದಲ್ಲೇ ನಡೆಸಲು ಒತ್ತಡ ತೀವ್ರಗೊಳ್ಳಬೇಕಿದೆ.
ನಮ್ಮ ಸರ್ಕಾರಗಳು ಕನ್ನಡ ಮತ್ತು ಕರ್ನಾಟಕವನ್ನು ಕಡೆಗಣಿಸುವಂತಿಲ್ಲ.ಅತಿ ಹೆಚ್ಚು ಜ್ಞಾನ ಪೀಠ ಪ್ರಶಸ್ತಿ ಪಡೆದ ಭಾಷೆ ನಮ್ಮ ಕನ್ನಡ ಭಾಷೆ. ರಾಷ್ಟಕವಿ ಕುವೆಂಪುರವರ ರಾಮಾಯಣ ದರ್ಶನಂ ಓದಿಸಿ ಕೇಳಿ ಆಚಾರ್ಯ ವಿನೋಭಾ ಬಾವೇ ಕನ್ನಡವು ಪ್ರಪಂಚದ ಎಲ್ಲಾ ಲಿಪಿಗಳ ರಾಣಿ ಎಂಬ ಮಾತನ್ನು ಹೇಳಿದ್ದಾರೆ. ಕನ್ನಡದ ಸತ್ವ, ಪ್ರಾಬಲ್ಯ, ಇತಿಹಾಸ ತನ್ನದೇ ಆದ ಭವ್ಯ ಮೆರುಗನ್ನು ಹೊಂದಿದೆ. ಇಂದು ಯಾವುದೇ ಲಗ್ನ ಪತ್ರಿಕೆಗಳಲ್ಲೂ ಸಹ ಇಂಗ್ಲಿಷ್ ಭಾಷೆಯನ್ನು ಅನುಸರಿಸುತ್ತಿರವುದು ಶೋಚನೀಯ. ನಾಮಫಲಕಗಳಲ್ಲಿ ಕನ್ನಡ ಕಡ್ಡಾಯವಾಗಬೇಕು, ಗ್ರಾಮಗಳಲ್ಲಿನ ಗ್ರಾಮದೇವತೆಗಳು ಸಹ ಇಂಗ್ಲಿಷ್ ಮಾತನಾಡುವ ಹಂತಕ್ಕೆ ತಲುಪಿರುವುದು ವಿಪರ್ಯಾಸ.
ಕನ್ನಡೇತರರಿಗೆ ಕನ್ನಡ ಕಲಿಸುವುದು ಪ್ರತಿಯೊಬ್ಬ ಕನ್ನಡಿಗನ ಕರ್ತವ್ಯ: ಯಾವುದೇ ಅನ್ಯ ಭಾಷಿಕನಿಗೂ ಕನ್ನಡದಲ್ಲೇ ಉತ್ತರ ನೀಡ ಬೇಕೇ ಹೊರತು ಕನ್ನಡ ಬರುವ ವ್ಯಕ್ತಿಗಳ ಜೊತೆ ಕನ್ನಡದಲ್ಲೇ ಸಂವಹನ ಮಾಡುವ ಮೂಲಕ ಕನ್ನಡದ ಸ್ವಾಭಿಮಾನವನ್ನ ಉಳಿಸಬೇಕಿದೆ, ಪ್ರತಿಯೊಬ್ಬ ಕನ್ನಡಿಗನೂ ಸ್ವಾಭಿಮಾನಿ ಕನ್ನಡಿಗನಾಗ ಬೇಕು,ಮೊದಲು ಕನ್ನಡಿಗರು ಕನ್ನಡವನ್ನು ಸ್ವಚ್ಛವಾಗಿ ಮಾತನಾಡುವುದನ್ನು ಕಲಿಯಬೇಕಿದೆ. ಕನ್ನಡದ ಬರವಣಿಗೆಯಲ್ಲಿ ವ್ಯಾಕರಣವನ್ನು ತಪ್ಪಿಲ್ಲದೆ ಬರೆಯಬೇಕು, ರಾಜಕಾರಣಿಗಳು , ಸಚಿವರು, ಎಲ್ಲರೂ ಸಹ ಕನ್ನಡಕ್ಕೆ ಒತ್ತು ನೀಡಬೇಕಿದೆ ಸರ್ಕಾರ ಕನ್ನಡದಲ್ಲಿ ಇಲ್ಲದ ಅರ್ಜಿಗಳನ್ನು ತಿರಸ್ಕರಿಸಬೇಕು.
ಮಹಾರಾಷ್ಟ್ರ ಪ್ರದೇಶಗಳಲ್ಲೂ ಸಹ ಕನ್ನಡಿಗರು: ಇತ್ತೀಚಿನ ಮಹಾರಾಷ್ಟ್ರದ ಮುಖ್ಯಮಂತ್ರಿ ಕರ್ನಾಟಕದ ಕಾರವಾರ, ಬೀದರ್, ಬೆಳಗಾವಿ ಭಾಗಗಳು ಮಹಾರಾಷ್ಟ್ರಕ್ಕೆ ಸೇರಬೇಕು ಎಂಬ ಹೇಳಿಕೆ ಖಂಡಿನೀಯ. ಬಾಂಬೆ ಹಾಗೂ ಇನ್ನಿತರ ಮಹಾರಾಷ್ಟ್ರ ಪ್ರದೇಶಗಳಲ್ಲೂ ಕನ್ನಡಿಗರಿದ್ದಾರೆ ಎಂಬುದು ಮಹಾ ಮುಖ್ಯಮಂತ್ರಿ ಮರೆತಿದ್ದಾರೆ. 1762 ರಲ್ಲಿ ಪೋರ್ಚಿಗೀಸ್ ರಾಣಿಯು ಸಹ ಕನ್ನಡ ಮತ್ತು ಪೋರ್ಚಿಗೀಸ್ ಭಾಷೆಗೆ ಮಾನ್ಯತೆ ನೀಡಿದ್ದರು. ಕರ್ನಾಟಕದ ಬಗ್ಗೆ, ಕನ್ನಡ ಭಾಷೆಯ ಬಗ್ಗೆ ಎಲ್ಲರೂ ವಿಶೇಷ ಗೌರವ ಸಲ್ಲಿಸಬೇಕು ಎಂದರು.
ಹಿರಿಯ ಕನ್ನಡ ಹೋರಾಟಗಾರ ತ.ನ.ಪ್ರಭುದೇವ್ ರವರು ಸಮ್ಮೇಳನಾಧ್ಯಕ್ಷ ಅರ್ಹವ್ಯಕ್ತಿ, ಸರಳ ವ್ಯಕ್ತಿತ್ವ, ನಿರ್ಮಲ ಮನಸ್ಸು, ಕನ್ನಡದ ಉಳಿವು ಇಂತಹ ಕನ್ನಡ ಹೋರಾಟಗಾರರಿದ್ದರೆ ಮಾತ್ರ ಸಾಧ್ಯವೆಂದರು. ದೊಡ್ಡಬಳ್ಳಾಪುರದ ಮತ್ತೊಬ್ಬ ವ್ಯಕ್ತಿಯನ್ನ ನಾನು ಎಂದಿಗೂ ಮರೆಯುವುದಿಲ್ಲ ಅವರೇ ನಮ್ಮ ಡಾ. ವೆಂಕಟರೆಡ್ಡಿ. ಹಲವಾರು ಗಣ್ಯರು ದೊಡ್ಡಬಳ್ಳಾಪುರದಲ್ಲಿ ಜನಿಸಿ ಉತ್ತಮ ಸೇವೆ, ಹೋರಾಟಗಳನ್ನು ಮಾಡಿದ್ದಾರೆ. ಕೊಂಗಾಡಿಯಪ್ಪ, ಅನುಮಪನನಿರಂಜನ, ಡಾ.ಡಿ.ಆರ್.ನಾಗರಾಜ್ ಹಾಗೂ ಹಲವಾರು ಗಣ್ಯರು ದೊಡ್ಡಬಳ್ಳಾಪುರಕ್ಕೆ ಹಿರಿಮೆ ತಂದಿದ್ದಾರೆ.ವಕೀಲರಾದ C.H.ಹನುಮಂತರಾಯ, ರೈತ ನಾಯಕ ಮುಗವಾಳಪ್ಪ ಅವರಂತ ಅನೇಕರು ದೊಡ್ಡಬಳ್ಳಾಪುರದ ಕೀರ್ತಿ ಸಾರಿದ್ದಾರೆ ಎಂದರು.
ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಚಿತ್ರ ನಟಿ ಭವ್ಯ ಮಾತನಾಡಿ, ಕನ್ನಡದ 200ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ನನಗೆ ಕನ್ನಡದ ಬಗ್ಗೆ ನನಗೆ ತುಂಬಾ ಹೆಮ್ಮೆ ಇದೆ. ಕನ್ನಡ ನನಗೆ ಎಲ್ಲವನ್ನೂ ಕೊಟ್ಟಿದೆ ಆದರೆ ವರನಟ ಡಾ.ರಾಜ್ ಕುಮಾರ್ ಅವರ ಜೊತೆ ನಟಿಸದೆ ಇರುವುದೊಂದೆ ನನಗೆ ಬೇಸರ. ಕನ್ನಡದ ಅಭಿಮಾನಿಗಳು ನನಗೆ ವಿಶೇಷ ಗೌರವ ನೀಡಿ ಮುನ್ನಡೆಸಿದ್ದಾರೆ. ಇದೇ ರೀತಿ ಕನ್ನಡದ ಬೆಳವಣಿಗೆಗೆ ಮೊದಲು ಪ್ರೋತ್ಸಾಹ ನೀಡಿ ನಾಡು ನುಡಿ ಜಲ ಉಳಿಸಿ ಬೆಳೆಸ ಬೇಕು ಎಂದರು.
ಸಮ್ಮೆಳನಾಧ್ಯಕ್ಷ ತ.ನ.ಪ್ರಭುದೇವ ಮಾತನಾಡಿ, ದೊಡ್ಡಬಳ್ಳಾಪುರದಲ್ಲಿ ನಡೆಯುತ್ತಿರುವ 22ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಗೊಳಿಸಿ ಗೊಳಿಸುವ ಜವಾಬ್ದಾರಿ ತಾಲೂಕಿನ ಎಲ್ಲರ ಮೇಲಿದೆ.ಇಂದು ಅಡಪದ ಅಪ್ಪಣ್ಣ, ಚಿ. ಉದಯ್ ಶಂಕರ್ ಅವರ ಜನ್ಮದಿನವಾಗಿದ್ದು ಬಹಳ ಪ್ರಾಮುಖ್ಯತೆ ಪಡೆದ ದಿನವಾಗಿದೆ. ಕನ್ನಡ, ಕರ್ನಾಟಕ, ಕನ್ನಡಿಗ ಎಂಬ ಸಂಸ್ಕೃತಿಯ ರಕ್ಷಣೆ ಕನ್ನಡವೇ ಸತ್ಯ ಕನ್ನಡವೇ ನಿತ್ಯ ಎಂಬ ಘೋಷವಾಖ್ಯಾದೊಂದಿಗೆ ಇಂದು ಮೆರವಣಿಗೆಯಲ್ಲಿ ಗೌರವ ಪೂರ್ವಕವಾಗಿ ಸಭಾಧ್ಯಕ್ಷನಾಗಿದ್ದು ಇದು ಕನ್ನಡ ಹೋರಾಟಗಳಿಗೆ ಸಲ್ಲಬೇಕು, ಕನ್ನಡಕ್ಕೆ ಸಲ್ಲಬೇಕು, ಎಲ್ಲಾ ಕನ್ನಡ ಭಾಷಾಭಿಮಾನಿಗಳು, ಸಾಹಿತ್ಯಾಭಿಮಾನಿಗಳು, ಕನ್ನಡದ ಕಟ್ಟಾಳುಗಳು ನನ್ನ ಹೋರಾಟಗಳಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು ಎಂದರು.
ಕನ್ನಡ ಸಾಹಿತ್ಯ, ಸಂಸ್ಕೃತಿಗೆ ಪ್ರತಿಯೊಬ್ಬರೂ ಶ್ರಮಿಸಬೇಕಿದೆ.ಕನ್ನಡಿಗರಿಗೆ ಕನ್ನಡವೇ ಸರ್ವಸ್ವ, ದೊಡ್ಡಬಳ್ಳಾಪುರದ ಅನೇಕ ಗಣ್ಯರು ಕ್ರೀಡೆ, ನಾಟಕ, ವೈದ್ಯಕೀಯ, ಗಾಳಿಪಟ, ಹಾಗೂ ಸಾಹಿತ್ಯ ಇನ್ನಿತರ ಕ್ಷೇತ್ರದಲ್ಲೂ ನಮ್ಮ ತಾಲೂಕಿನ ಗೌರವ ಹೆಚ್ಚಿಸಿದ್ದಾರೆ ಹಾಗೂ ನಮ್ಮ ಜಿಲ್ಲೆಯ ಎಲ್ಲಾ ತಾಲೂಕಿನ ಹಲವಾರು ಪ್ರತಿಭೆಗಳು ಬೆಂಗಳೂರು ಗ್ರಾಮಾಂತರ ದ ಕೀರ್ತಿಯನ್ನು ಹೆಚ್ಚಿಸಿದೆ.
1969 ರಿಂದ ಭುವನೇಶ್ವರಿ ಕನ್ನಡ ಸಂಘ ಕನ್ನಡ ಪ್ರೇಮ ಮೆರೆದಿದೆ. ಇದರೊಟ್ಟಿಗೆ ಕನ್ನಡ ಜಾಗೃತ ಪರಿಷತ್, ಕನ್ನಡಪಕ್ಷ ಹಾಗೂ ಹಲವಾರು ಸಂಘಟನೆ ಗಳು ಕೈಜೋಡಿಸಿ ಕಾರ್ಯನಿರ್ವಹಿಸಿವೆ.
ನಿರುದ್ಯೋಗ ಸಮಸ್ಯೆ: ನಮ್ಮ ತಾಲೂಕಿನಲ್ಲಿ ಪ್ರಸಿದ್ಧ ರೇಷ್ಮೆ ನೇಯ್ಗೆ ಹಾಗೂ ಕೈಗಾರಿಕಾ ಪ್ರದೇಶಗಳಿದ್ದರೂ ಸಹ ನಮ್ಮ ತಾಲೂಕಿನಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಬಯಲು ಸೀಮೆಯ ಪ್ರಾಂತ್ಯದಲ್ಲಿರುವ ನಮಗೆ ಶಾಶ್ವತ ನೀರಾವರಿಯ ಕೊರತೆ ಇದ್ದು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳಲು ಕಷ್ಟಕರವಾಗಿದೆ. ಇದೇ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿ ಕಾನೂನು ಗಳು ಹಾಗೂ ಕೃಷಿ ಕಾಯ್ದೆಗಳನ್ನು ಕೈಬಿಡಬೇಕು ಎಂದು ಅಗ್ರಹಿಸಿದರು.
ಸರ್ಕಾರಿ ನೌಕರ ಮಕ್ಕಳು ಸರ್ಕಾರಿ ಶಾಲೆಗೆ ದಾಖಲು ಖಡ್ಡಾಯವಾಗಲಿ: ಸರ್ಕಾರಿ ಶಾಲೆಗಳಗಲ್ಲಿ ಉತ್ತಮ ಶಿಕ್ಷಣ, ಹಾಗೂ ಶಾಲಾ ಕೊಠಡಿಗಳು ಹಾಗೂ ಸರ್ಕಾರಿ ನೌಕರರು ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ದಾಖಲು ಮಾಡುವ ಕಾನೂನು ಜಾರಿಯಾದರೆ ಮಾತ್ರ ಕನ್ನಡ ಉಳಿವಿಗೆ ಉತ್ತೇಜನವಾಗುತ್ತದೆ ಎಂದರು.
ಗಡಿ ಭಾಗದ ಜನತೆಗೆ ಉದ್ಯೋಗಾವಕಾಶ: ಅಖಂಡ ಕರ್ನಾಟಕದ ಪರಿಕಲ್ಪನೆ ಹಾಗೂ ಗಡಿ ಭಾಗದ ಜನತೆಗೆ ಉದ್ಯೋಗಾವಕಾಶ ಗಳನ್ನು ಕಲ್ಪಿಸುವ ಮೂಲಕ ಗಡಿ ಭಾಗದ ಜನರು ವಲಸೆ ತೆರಳುವುದನ್ನು ತಪ್ಪಿಸಬೇಕು.
ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಿ: ನಾಡಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕನ್ನಡ ಭಾಷೆಯನ್ನು ಮೇಲ್ದರ್ಜೆಗೆ ತರಲು ನಾಡಿನ ಕನ್ನಡ ಪರ ಸಂಘಟನೆಗಳು ಶ್ರಮಿಸಬೇಕಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಬೇಕಿದೆ. ನೆರೆ ಪ್ರವಾಹಗಳಂತಹ ಪ್ರಕೃತಿ ವಿಕೋಪದಿಂದ ನಾಡಿಗೆ ಆಗಿರುವ ಅನ್ಯಾಯ ಅಷ್ಟಿಷ್ಟಲ್ಲ ಎಂದು ಸಮ್ಮೇಳನಾಧ್ಯಕ್ಷರು ಬೇಸರ ವ್ಯಕ್ತಪಡಿಸಿದರು
ಡಾ.ರಾಜ್ ಕುಮಾರ್ ಕೊಡುಗೆ ಅಪಾರ: ಭಾಷಾ ನೀತಿಯಲ್ಲಿ ಕರ್ನಾಟಕದಲ್ಲಿ ಕನ್ನಡಕ್ಕೆ ಮೊದಲ ಆದ್ಯತೆಯಸಲ್ಲಿಸಬೇಕು. ಗೋಕಾಕ್ ಚಳವಳಿಯನ್ನು ಇಡೀ ರಾಜ್ಯಕ್ಕೆ ವಿಸ್ತರಿಸಿದ ಮೇರು ನಟ ಡಾ.ರಾಜ್ ಕುಮಾರ್ ಹೋರಾಟದಲ್ಲಿ ಭಾಗಿಯಾಗಿದ್ದು ನನ್ನ ಪುಣ್ಯ.
ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕು: ಎರಡು ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ಸಿಗಬೇಕು. ರಾಜ್ಯದ ಮತ್ತು ಕೇಂದ್ರದ ಸರ್ಕಾರಿ ಮತ್ತು ಅರೆ ಸರ್ಕಾರಿ ಉದ್ಯೋಗವಾಕಾಶಗಳಲ್ಲಿ ಗ್ರಾಮೀಣ ಅಭ್ಯರ್ಥಿಗಳಿಗೆ ಅವಕಾಶ ದೊರೆಯುವಂತಾಗಬೇಕೆಂದ ತ.ನ.ಪ್ರಭುದೇವ, ತಾಲೂಕಿಗೆ ಬೆಂಗಳೂರಿನಿಂದ ಬರುತ್ತಿರುವ ಕಸವನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ದೂರಕ್ಕೆ ಸಾಗಿಸಬೇಕು. ಭಾಷೆ, ಶಿಕ್ಷಣ ಆಡಳಿತ, ಗಡಿ, ಸಾಹಿತ್ಯ, ನಾಡು ನುಡಿ,ಗುಡಿ ಗೋಪುರಗಳಿಗೆ ಪ್ರತಿಯೊಬ್ಬ ಕನ್ನಡಿಗನೂ ಗೌರವ ಸಲ್ಲಿಸಬೇಕು. ಜಾತಿ ಮತಗಳೆಂಬ ಭಿನ್ನತೆಗಳನ್ನು ಮರೆತು ಕನ್ನಡಿಗರ ಸ್ವಾಭಿಮಾನ ಮೆರೆಯಬೇಕು, ಕನ್ನಡ ಬಾಷೆ ಕಲ್ಪವೃಕ್ಷವಾಗಿ ಬೆಳೆಯಬೇಕೆಂದರು.
ಈ ವೇಳೆ ತಾಲೂಕು ಕಸಪಾ ಅಧ್ಯಕ್ಷೆ ಪ್ರಮೀಳಾ ಮಹದೇವ್, ಡಾ.ಹುಲಿಕಲ್ ನಟರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಭೈಯಪ್ಪರೆಡ್ಡಿ, ದೇವನಹಳ್ಳಿ ತಾಲೂಕು ಕಸಾಪ ಅಧ್ಯಕ್ಷ ನಂಜೇಗೌಡ,ನೆಲಮಂಗಲ ತಾಲೂಕು ಕಸಾಪ ಅಧ್ಯಕ್ಷ ಕೇಶವ ಮೂರ್ತಿ, ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಸಾಹಿತ್ಯ ಪ್ರೇಮಿಗಳು ಅಕ್ಷರ ಜಾತ್ರೆಗೆ ಸಾಕ್ಷಿಯಾದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

