
ದೊಡ್ಡಬಳ್ಳಾಪುರ: ತಾಲೂಕಿನ ಹುಲುಕುಡಿ ವೀರಭದ್ರಸ್ವಾಮಿ ಮತ್ತು ಪ್ರಸನ್ನ ಭದ್ರಕಾಳಮ್ಮ ಮಹಾ ರಥೋತ್ಸವವು ರಥ ಸಪ್ತಮಿ ದಿನವಾದ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವದ ಸಾನಿಧ್ಯವನ್ನು ಚಿಕ್ಕಬಳ್ಳಾಪುರದ ಅದಿಚುಂಚನಗಿರಿ ಶಾಖಾ ಮಠ ಶ್ರೀ ಮಂಗಳಾನಂದ ಮಹಾಸ್ವಾಮಿಗಳು ವಹಿಸಿದ್ದರು.ತಾಲೂಕಿನ ಭಕ್ತಾದಿಗಳಷ್ಟೇ ಅಲ್ಲದೇ ರಾಜ್ಯದ ವಿವಿಧೆಡೆಗಳಿಂದ ಸಾವಿರಾರು ಜನ ಭಾಗವಹಿಸಿ,ರಥಕ್ಕೆ ಹಣ್ಣು ದವನ ಅರ್ಪಿಸಿ ಧನ್ಯತೆ ಮೆರೆದರು.
ಮಹಾ ರಥೋತ್ಸವಕ್ಕೆ ವೀರಗಾಸೆ ಕುಣಿತ, ಹಾಗೂ ಡೊಳ್ಳು ಕುಣಿತ, ಅಕ್ಕಿ ಪೂಜೆ, ದೀಪಾರಾಧನೆ ಮೆರಗು ನೀಡಿದವು.
ಹುಲುಕುಡಿ ಬೆಟ್ಟದ ಮೇಲಿನ ವೀರಭದ್ರಸ್ವಾಮಿ ದೇಗುಲಕ್ಕೂ ಸಹಸ್ರಾರು ಭಕ್ತಾದಿಗಳು ಭೇಟಿ ನೀಡಿ ದರ್ಶನ ಪಡೆದರು.ಜಾತ್ರೆ ಹಾಗೂ ರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ರಥಾಂಗ ಹೋಮ ಹಾಗೂ ವಿಶೇಷ ಪೂಜಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಈ ವೇಳೆ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ಹುಲುಕುಡಿ ಕ್ಷೇತ್ರ ತನ್ನದೇ ಆದ ಪುರಾಣ ಇತಿಹಾಸ ಹೊಂದಿದ್ದು, ವಿಶಿಷ್ಟವಾಗಿದೆ. ಹುಲುಕುಡಿ ಕ್ಷೇತ್ರ ತಾಲೂಕಿನ ಘಾಟಿ ಹಾಗೂ ಕನಸವಾಡಿಯಂತೆ ಅಭಿವೃದ್ದಿ ಹೊಂದುತ್ತಿದೆ. ಭಕ್ತಾದಿಗಳು ಕ್ಷೇತ್ರದಲ್ಲಿ ನಡೆಯಬೇಕಾಗಿರುವ ಅಭಿವೃದ್ಧಿ ಕೆಲಸಗಳಲ್ಲಿ ಕೈಜೋಡಿಸುವ ಮೂಲಕ ಕ್ಷೇತ್ರದ ಪ್ರಗತಿಗೆ ಎಲ್ಲರೂ ಸಹಕರಿಸಬೇಕು ಎಂದು ಹೇಳಿದರು.
ರಥೋತ್ಸವದಲ್ಲಿ ಮಧುಗಿರಿ ಶಾಸಕ ವೀರಭದ್ರಯ್ಯ,ರಾಜಗೋಪುರ ದಾನಿ ಬಿಬಿಎಂಪಿ ಇಂಜಿನಿಯರ್ ವಿ.ನಟರಾಜ್, ಹುಲುಕುಡಿ ವೀರಭದ್ರಸ್ವಾಮಿ ಕ್ಷೇತ್ರಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಆರ್.ಡಿ.ನರಸಿಂಹಯ್ಯ, ಕಾರ್ಯದರ್ಶಿ ಸಿದ್ದಲಿಂಗಯ್ಯ, ಟ್ರಸ್ಟಿಗಳಾದ ಬಿ.ಎಸ್.ಚೆನ್ನೇಗೌಡ, ಆನಂದ್, ಸಿದ್ದಲಿಂಗಪ್ಪ ಮಾರೇಗೌಡ, ವಕ್ತಾರ ಕೀರ್ತಿ ಬೈರೇಗೌಡ ಮತ್ತಿತರರು ಭಾಗವಹಿಸಿದ್ದರು.
ಶಾಸಕ ಟಿ.ವೆಂಕಟರಮಣಯ್ಯ ಸಹೋದರು ಹಾಗೂ ಸೀಗೇಪಾಳ್ಯ ಬಸವರಾಜ್, ವೀರಣ್ಣ, ಕಾಂತರಾಜ್ ಅವರಿಂದ ಭಕ್ತಾಧಿಗಳಿಗೆ ಅನ್ನಸಂತರ್ಪಣೆ ನಡೆಯಿತು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

