
ಬೆಂಗಳೂರು: ದೆಹಲಿ ರೈತ ಪ್ರತಿಭಟನೆ ವೇಳೆ ಮಾಡಲಾದ ಪ್ರಚೋದನಾಕಾರಿ ಟ್ವೀಟ್ ಅಳಿಸಿಹಾಕುವಂತೆ ಸೂಚಿಸಿದ ತನ್ನ ಆದೇಶ ಪಾಲಿಸದ ಅಮೆರಿಕ ಮೂಲದ ಟ್ವೀಟರ್ಗೆ ಬೆಂಗಳೂರು ಮೂಲದ ‘ಕೂ’ ಮೂಲಕ ಕೇಂದ್ರ ಸರ್ಕಾರ ಸೆಡ್ಡು ಒಡೆದಿದೆ.
ಇದರ ಅಂಗವಾಗಿ ಸರ್ಕಾರದ ನಿರ್ಧಾರ, ಆದೇಶ ಅಥವಾ ಇನ್ಯಾವುದೇ ವಿಷಯಗಳನ್ನು ಟ್ವೀಟರ್ಗಿಂತ ಮೊದಲು ‘ಕೂ’ ಆ್ಯಪ್ನಲ್ಲಿ ಹಂಚಿಕೊಳ್ಳುತ್ತಿದೆ ಅಂದರೆ ಟ್ವೀಟರ್ಗಿಂತ ಕನಿಷ್ಠ 3 ಗಂಟೆ ಮೊದಲು ಇಂಥ ಮಾಹಿತಿಯನ್ನು ‘ಕೂ’ನಲ್ಲಿ ಪ್ರಕಟಿಸಲಾಗುತ್ತಿದೆ. ಸಹಜವಾಗಿಯೇ ಹೆಚ್ಚಿನ ಜನರು ಟ್ವೀಟರ್ಗಿಂತ ಹೆಚ್ಚಾಗಿ ‘ಕೂ’ ಅನ್ನು ಫಾಲೋ ಮಾಡಲಿದ್ದಾರೆ. ಇದು ಕೇಂದ್ರದ ಕಾರ್ಯತಂತ್ರ ಎಂದು ಕೇಂದ್ರ ಸರ್ಕಾರದ ಉನ್ನತ ಮೂಲಗಳ ಮಾಹಿತಿಯನ್ನು ರಾಷ್ಟ್ರೀಯ ಮಾಧ್ಯಮ ವರದಿ ಮಾಡಿದೆ.
ಇದಕ್ಕೆ ಪೂರಕವಾಗಿ ಈಗಾಗಲೇ ಕೇಂದ್ರದ ಬಹುತೇಕ ಸಚಿವಾಲಯ, ಇಲಾಖೆ, ಸಚಿವರು ‘ಕೂ’ನಲ್ಲಿ ತಮ್ಮ ಖಾತೆ ತೆರೆದಿದ್ದಾರೆ. ಜೊತೆಗೆ ಹಲವು ರಾಜ್ಯಗಳಲ್ಲಿಯೂ ಬಿಜೆಪಿ ನಾಯಕರು ಇದೇ ಹಾದಿ ತುಳಿದಿದ್ದಾರೆ.
ಕೇಂದ್ರ ಸರ್ಕಾರ ಮತ್ತು ಅಮೆರಿಕ ಮೂಲದ ಟ್ವೀಟರ್ ನಡುವೆ ಮುಸುಕಿನ ಯುದ್ಧ ಆರಂಭವಾದ ಬೆನ್ನಲ್ಲೇ, ಟ್ವೀಟರ್ಗೆ ಪರ್ಯಾಯ ಎನಿಸಿಕೊಂಡಿರುವ ಬೆಂಗಳೂರು ಮೂಲದ ‘ಕೂ’ ಆ್ಯಪಿಗೆ ಸೇರಿದವ ಸಂಖ್ಯೆ 45 ಲಕ್ಷಕ್ಕೆ ಏರಿಕೆಯಾಗಿದೆ ಎನ್ನಲಾಗುತ್ತಿದೆ.
ಬೆಂಗಳೂರು ಮೂಲದ ಕೂ ಟ್ವೀಟರ್ ರೀತಿಯಲ್ಲೇ ಸೇವೆ ನೀಡುವ ಚುಟುಕು ಸಾಮಾಜಿಕ ಜಾಲತಾಣ. ಇದರಲ್ಲಿ 400 ಪದಗಳವರೆಗೆ ಬರೆಯಬಹುದು. ಜೊತೆಗೆ ಲಿಪ್ಯಂತರ ಸೇವೆ ಲಭ್ಯವಿದೆ. ಟ್ವೀಟರ್ಗೆ ಪರ್ಯಾಯವಾಗಿ ಇದನ್ನು ಬೆಂಗಳೂರಿನ ಇಬ್ಬರು ಸ್ಥಾಪಿಸಿದ್ದಾರೆ.
ಕನ್ನಡ, ತೆಲುಗು, ತಮಿಳು ಮತ್ತು ಇಂಗ್ಲಿಷ್ ಭಾಷೆಯಲ್ಲಿ ಬಳೆಕೆದಾರರು ಕೂ ಬಳಸಬಹುದಾಗಿದ್ದು, ಶೀಘ್ರವೇ ಇನ್ನಿತರ ಭಾರತೀಯ ಭಾಷೆಗಳಲ್ಲೂ ಕೂ ತನ್ನ ಸೇವೆ ನೀಡಲಿದೆ ಎಂದು ಸಂಸ್ಥೆ ತಿಳಿಸಿದೆ.
ಸ್ಥಳೀಯ ಭಾಷೆಗಳಲ್ಲಿ ತಮ್ಮ ಅನಿಸಿಕೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಇದು ಅವಕಾಶವನ್ನು ಕಲ್ಪಿಸುತ್ತದೆ. ಬಳಕೆದಾರರು 400 ಅಕ್ಷರಗಳಲ್ಲಿ ತಮ್ಮ ಸಂದೇಶಗಳನ್ನು ಬರೆಯಬಹುದು.
ಹೌದು ನೀವ್ ಕೂ ಅಲ್ಲಿದ್ದೀರಾ…ಇದ್ದರೆ ಹರಿತಲೇಖನಿ ಫಾಲೋ ಮಾಡೋದ್ ಮರಿಬೇಡಿ..

