
ಬೆಂ.ಗ್ರಾ.ಜಿಲ್ಲೆ: ತಂತ್ರಜ್ಞಾನದ ಯುಗದಲ್ಲಿ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ತಂತ್ರಜ್ಞಾನದ ಬಳಕೆಯ ಬಗ್ಗೆ ಅರಿವು ಅಗತ್ಯ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಕೆ.ಶ್ರೀನಿವಾಸ್ ಹೇಳಿದರು.
ಜಿಲ್ಲಾಡಳಿತ ಭವನದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಇಂದು NeGD ಸಾಮಾರ್ಥ್ಯಾಭಿವೃದ್ಧಿ ಯೋಜನೆಯಡಿಯಲ್ಲಿ ಇ-ಆಡಳಿತ ಮತ್ತು ದತ್ತಾಂಶ ವಿಶ್ಲೇಷಣಾ ಕೇಂದ್ರ ಆಡಳಿತ ತರಬೇತಿ ಸಂಸ್ಥೆ, ಮೈಸೂರು ಇ-ಆಡಳಿತ ಕೇಂದ್ರ, ಬೆಂಗಳೂರು ಇವರ ಸಹಯೋಗದೊಂದಿಗೆ ನಡೆದ ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತ ವಿಷಯಗಳ ಕುರಿತು ಒಂದು ದಿನದ ಕಾರ್ಯಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಆನ್ ಲೈನ್ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಸೋರಿಕೆ ಹೆಚ್ಚಾಗುತ್ತಿದ್ದು, ಇದು ಒಂದು ಒಳ್ಳೆಯ ಬೆಳವಣಿಗೆ ಅಲ್ಲ. ಇಂತಹ ಬೆಳವಣಿಗೆ ತಪ್ಪಬೆಕಂದರೆ, ತಂತ್ರಜ್ಞಾನದ ಬಗ್ಗೆ ಅರಿವು ಅಗತ್ಯ. ವೈಯಕ್ತಿಕ ಮಾಹಿತಿ ನೀಡುವಾಗ ಕೆಲವೊಂದು ಆಪ್ ಗಳಲ್ಲಿ ಪಾಸ್ ವಾರ್ಡ್, ಒಟಿಪಿಗಳನ್ನು ಬಳಸಿ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ನಾವು ತಂತ್ರಜ್ಞಾನದ ಬಗ್ಗೆ ಅರಿತುಕೊಂಡರೆ, ತಂತ್ರಜ್ಞಾನ ಬಳಕೆ ಹಾಗೂ ಆದರಿಂದ ಉಂಟಾಗುವ ತೊಂದರೆಗಳಿಂದ ರಕ್ಷಿಸಿಕೊಳ್ಳಬಹುದು ಎಂದು ಹೇಳಿದರು.
ಸರ್ಕಾರಿ ಕಚೇರಿಗಳಲ್ಲಿ ಸಾಫ್ಟ್ವೇರ್ ಬಳಕೆ ಮಾಡುವ ವೇಳೆ ಬಹಳ ಎಚ್ಚರಿಕೆಯಿಂದ ಇರಬೇಕು. ಕಚೇರಿ ಮಾಹಿತಿ ಸೋರಿಕೆಯಾದಾಗ ಸೈಬರ್ ಆಕ್ಟ್ ಅಡಿ ಸೈಬರ್ ಸೆಲ್ ಗೆ ದೂರು ನೀಡಬೇಕು ಎಂದು ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ. ಜಗದೀಶ್ ಕೆ ನಾಯಕ ಮಾತನಾಡಿ, ಜಮೀನುಗಳ ದಾಖಲೆಗಳನ್ನು ತಿದ್ದುಪಡಿ ಮಾಡಿ ಮಾರಾಟ ಮಾಡಿರುವ ಉದಾಹರಣೆ ಸಾಕಷ್ಟು ಇವೆ. ಇತ್ತೀಚೆಗೆ ಕೆ.ಸಿ.ಎಸ್.ಆರ್ ನಿಯಮಗಳನ್ನು ತಿದ್ದುಪಡಿ ಮಾಡಲಾಗಿದ್ದು, ಇದರಲ್ಲಿ ಸೈಬರ್ ಕ್ರೈಮ್ ಬಗ್ಗೆ ವಿವರವಾಗಿ ತಿಳಿಸಲಾಗಿದೆ ಎಂದರು.
ಜಿಲ್ಲಾ ಮಟ್ಟದ ಅಧಿಕಾರಿಗಳು ಹೆಚ್ಚಿನದಾಗಿ ಐಟಿ ಹಿನ್ನೆಲೆಯಿಂದ ಬಂದಿರುವುದಿಲ್ಲ. ಹೆಚ್ಚಾಗಿ ಅವರು ಡಾಟಾ ಎಂಟ್ರಿ ಆಪರೇಟರ್ ಗಳನ್ನು ಅವಲಂಬಿಸಿರುತ್ತಾರೆ. ಆದ್ದರಿಂದ ಮುಂದಿನ ದಿನಗಳಲ್ಲಿ ಅಧಿಕಾರಿಗಳಿಗೆ ಸೈಬರ್ ಕ್ರೈಮ್ ಕುರಿತಾಗಿ ವಿಶೇಷ ಕಾರ್ಯಾಗಾರ ನಡೆಸಲಾಗುವುದು ಎಂದರು.
ಕಾರ್ಯಗಾರದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ಕರಿಯಪ್ಪ , ಐಟಿ ಪ್ರೊಜೆಕ್ಟ್ ಮ್ಯಾನೇಜರ್ ಕಾರ್ತಿಕ್, ಸೈಬರ್ ಕೆ-ಟೆಕ್ ಎಕ್ಸಲೆನ್ಸ್ ಸೆಂಟರ್ ಫಾರ್ ಸೆಫ್ಟಿ ಬೆಂಗಳೂರಿನ ಡಾ.ಗುರುರಾಜ್ ಕೆ.ಎಸ್, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಚಾರ್ಯರಾದ ಹೆಚ್.ಕೆ.ಬಾಲಮಣಿ ಹಾಗೂ ಜಿಲ್ಲಾ ಮಟ್ಟದ ವಿವಿಧ ಇಲಾಖಾ ಅಧಿಕಾರಿಗಳು ಭಾಗವಹಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಮೂಲಕ ಫಾಲೋ ಮಾಡಿ. ನಮ್ಮೋಂದಿಗೆ ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

