
ದೊಡ್ಡಬಳ್ಳಾಪುರ: ಖಾಸಗಿ ಶಾಲೆಗಳ ಶುಲ್ಕ ಕಡಿತ ಆದೇಶ ಪರಿಷ್ಕರಣೆ, ನೂತನ ನಿಯಮಗಳ ಕಿರಿಕಿರಿ, 1 ರಿಂದ 5ರ ವರೆಗೆ ಶಾಲೆಗಳ ಆರಂಭ, ಖಾಸಗಿ ಶಿಕ್ಷಕರಿಗೆ ಆರ್ಥಿಕ ನೆರವು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಖಾಸಗಿ ಶಾಲಾ ಸಂಘಟನೆಗಳು ಇಂದು ಬೆಂಗಳೂರಿನಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಲಿದ್ದು, ತಾಲೂಕಿನ 54 ಖಾಸಗಿ ಶಾಲೆಗಳು ಸಂಪೂರ್ಣ ಬಂದ್ ಆಗಿವೆ.
ಖಾಸಗಿ ಶಾಲೆಗಳ ಮುಖ್ಯಸ್ಥರು, ಆಡಳಿತ ಮಂಡಳಿ ಸದಸ್ಯರು, ಶಿಕ್ಷಕರು, ಸಿಬ್ಬಂದಿ ಎಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸುವುದರಿಂದ ಶಾಲೆಗಳಲ್ಲಿ ಯಾವುದೇ ತರಗತಿ ಮಕ್ಕಳಿಗೆ ಭೌತಿಕ ತರಗತಿಗಳಾಗಲಿ, ಆನ್‌ಲೈನ್ ತರಗತಿಗಳಾಗಲಿ ನಡೆಯುವುದಿಲ್ಲ ಎಂದು ಶಾಲೆಗಳು ಈಗಾಗಲೆ ಪೋಷಕರಿಗೆ ಸಂದೇಶ ರವಾನಿಸಿವೆ.
ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಬೆಳಿಗ್ಗೆ 10ಕ್ಕೆ ಸ್ವಾತಂತ್ರ್ಯ ಉದ್ಯಾನದವರೆಗೆ ರ‍್ಯಾಲಿ ಸಾಗಲಿದ್ದು, ಬೃಹತ್ ಪ್ರತಿಭಟನೆಯನ್ನೂ ಹಮ್ಮಿಕೊಳ್ಳಲಾಗಿದೆ. ಸುಮಾರು 30 ಸಾವಿರ ಜನ ಪಾಲ್ಗೊಳ್ಳುವ ನಿರೀಕ್ಷೆ ಇದೆ.
ಈ ಪ್ರತಿಭಟನೆಯಲ್ಲಿ ರಾಜ್ಯದ ಕರ್ನಾಟಕ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಕ್ಯಾಮ್ಸ್), ಮ್ಯಾನೇಜ್‌ಮೆಂಟ್ಸ್ ಆಫ್ ಇಂಡಿಪೆಂಡೆಂಟ್ ಸಿಬಿಎಸ್‌ಇ ಸ್ಕೂಲ್ಸ್ ಅಸೋಸಿಯೇಷನ್(ಮಿಸ್ಕಾ), ಕರ್ನಾಟಕ ರಾಜ್ಯ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘ (ಕುಸ್ಮಾ), ಕರ್ನಾಟಕ ಅನುದಾನ ರಹಿತ ಅಲ್ಪಸಂಖ್ಯಾತ ಶಾಲೆಗಳ ಸಂಘ ಸೇರಿದಂತೆ 11 ಸಂಘಟನೆಗಳ ಸಾವಿರಾರು ಶಾಲಾ ಆಡಳಿತ ಮಂಡಳಿಗಳ ಪ್ರತಿನಿಧಿಗಳು, ಶಿಕ್ಷಕರು ಹಾಗೂ ಇತರೆ ಸಿಬ್ಬಂದಿ ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ರಾಜ್ಯ ಅನುದಾನರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಸಂಘದ ತಾಲೂಕು ಅಧ್ಯಕ್ಷ ಎ.ಸುಬ್ರಮಣ್ಯ ಹರಿತಲೇಖನಿಗೆ ತಿಳಿಸಿದ್ದಾರೆ. (ಸಾಂದರ್ಭಿಕ ಚಿತ್ರ ಬಳಸಲಾಗಿದೆ)
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಮೂಲಕ ಫಾಲೋ ಮಾಡಿ. ನಮ್ಮೋಂದಿಗೆ ಟೆಲಿಗ್ರಾಂ ಗುಂಪಿಗೆ ಸೇರಿರಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ…

