
ಬೆಂ.ಗ್ರಾ.ಜಿಲ್ಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖ ದೇವಸ್ಥಾನಗಳ ಅವರಣಗಳಲ್ಲಿ ಮತ್ತು ಜಾತ್ರೆಗಳಲ್ಲಿ ಹೆಚ್ಐವಿ ಕುರಿತು ಬೀದಿ ನಾಟಕ ಪ್ರದರ್ಶಿಸುವ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲು ಕ್ರಮವಹಿಸಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಜಗದೀಶ್.ಕೆ.ನಾಯಕ ಹೇಳಿದರು.
ಗ್ರಾಮದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ತಡೆಗಟ್ಟುವ 2ನೇ ಮತ್ತು 3ನೇ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸರ್ಕಾರಿ ಇಲಾಖೆಗಳಲ್ಲಿ ಹೆಚ್ಐವಿ ಸೋಕಿಂತರಿಗೆ ಇರುವ ಸೌಲಭ್ಯಗಳ ಕುರಿತು ಉಚಿತ ಸಮಾಲೋಚನ ಸಭೆಗಳನ್ನು ಕೈಗೊಳ್ಳುವ ಮೂಲಕ ಸೋಂಕಿತರಿಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಹೆಚ್ಐವಿ ಸೋಂಕು ಇರುವವರ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ಪಡೆದು ಅವರಿಗೆ ಚಿಕಿತ್ಸೆ ನೀಡಲು ವೈದ್ಯರು ಮುಂದಾಗಬೇಕು. ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರು ಎಷ್ಟು ಪ್ರಮಾಣದಲ್ಲಿದ್ದಾರೆ ಎಂಬ ಮಾಹಿತಿ ಇರಬೇಕು. ಹೆಚ್ಐವಿ ಸೋಂಕಿತರ ದೂರವಾಣಿ ಸಂಖ್ಯೆಯನ್ನು ಪಡೆದು ಅವರ ಸಂಪೂರ್ಣ ಮಾಹಿತಿ ಕಲೆಹಾಕಬೇಕು ಎಂದು ತಿಳಿಸಿದರು.
ಜಿಲ್ಲೆಯಲ್ಲಿ 3,695 ಮಂದಿಯಲ್ಲಿ. ಹೆಚ್ಐವಿ ಸೋಂಕು ಇರುವುದು ದೃಢಪಟ್ಟಿದ್ದು, ಇವರಲ್ಲಿ 1830 ಸೋಂಕಿತರು ಪಕ್ಕದ ಜಿಲ್ಲೆಗಳಲ್ಲಿರುವ ಎ.ಆರ್.ಟಿ. ಕೇಂದ್ರಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎ.ಆರ್.ಟಿ , ಮತ್ತು ಲಿಂಕ್ ಎ.ಆರ್.ಟಿ. ಕೇಂದ್ರಗಳಲ್ಲಿ ಒಟ್ಟು 1249 ಜನ ಚಿಕಿತ್ಸೆಗೆ ನೋಂದಾಯಿಕೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಂಜುಳಾದೇವಿ.ಕೆ ಅವರು ಮಾತನಾಡಿ ಹೆಚ್ಐವಿ ಸೋಂಕು ಪರೀಕ್ಷೆಗಳು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆ ನೆಡಸಲಾಗುತ್ತಿದ್ದು, ತಾಲ್ಲೂಕು ಆರೋಗ್ಯ ಅಧಿಕಾರಿಗಳಿಂದ ತರಬೇತಿ ಪಡೆದ ಕೌನ್ಸಿಲರ್ ಗಳು ಹೆಚ್ಐವಿ ಪೀಡಿತರಿಗೆ ಅರಿವು ಮೂಡಿಸಬೇಕು ಎಂದು ಹೇಳಿದರು.
ಕೋವಿಡ್ ಹಿನ್ನೆಲೆ, ಹೆಚ್ಐವಿ ಪರೀಕ್ಷೆ ನಿಲ್ಲಿಸಬಾರದು. ಹೆಚ್ಐವಿ ಸೋಂಕಿತರನ್ನು ಹುಡುಕಿ ಅವರಿಗೆ ಸವಲತ್ತುಗಳನ್ನು ನೀಡಬೇಕು ಎಂದು ತಿಳಿಸಿದ ಅವರು ಪ್ರತಿ ತಾಲ್ಲೂಕಿನಲ್ಲಿ ರಕ್ತದಾನ ಶಿಬಿರ ಮತ್ತು ಆರೋಗ್ಯ ತಪಾಸಣಾ ಕ್ಯಾಂಪ್ ಗಳನ್ನು ಮಾಡಬೇಕು ಎಂದು ಹೇಳಿದರು.
ಜಿಲ್ಲಾ ಕ್ಷಯರೋಗ ನಿಯಂತ್ರಣ ಘಟಕದ ಸಂಚಾಲಕಿ ಡಾ.ಶಕೀಲಾ.ಅವರು ಮಾತನಾಡಿ, ರಕ್ತದಾನ ಶಿಬಿರಗಳನ್ನು ಮಾಡುವಾಗ ಸ್ಥಳೀಯ ಜನಪ್ರತಿನಿಧಿಗಳು, ಸರ್ಕಾರೇತರ ಸಂಸ್ಥೆಗಳ ಸಹಾಯ ಪಡೆಯಬೇಕು ಎಂದರು.
ಸಭೆಯಲ್ಲಿ ಆರ್.ಎಮ್.ಡಾಪ್ಕೊ ಜಿಲ್ಲಾ ಮೇಲ್ವಿಚಾರಕಾರದ ಸರಿತಾ, ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರಮೇಶ್ ಹಾಗೂ ಇತರೆ ಅಧಿಕಾರಿಗಳು ಭಾಗವಹಿಸಿದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

