
ಬೆಂಗಳೂರು: ಪಡಿತರ ಚೀಟಿ ಕುರಿತು ಆಹಾರ ಮತ್ತು ನಾಗರೀಕ ಸರಬರಾಜು ಸಚಿವ ಉಮೇಶ್ ಕತ್ತಿ ಹೇಳಿಕೆ ವಿವಾದವಾಗಿತ್ತು. ತದನಂತರ ಹಳೆಯ ನಿಯಮವೇ ಮುಂದುವರೆಯುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟನೆ ನೀಡಿದ್ದರೂ ಸಹ ಸದ್ದಿಲ್ಲದೆ ಪಡಿತರ ಚೀಟಿ ಹಿಂಪಡೆಯುವಲ್ಲಿ ರಾಜ್ಯ ಸರ್ಕಾರ ಕಾರ್ಯ ಮಗ್ನವಾಗಿದೆ.
ರಾಜ್ಯದ ಆಯಾ ಜಿಲ್ಲಾಧಿಕಾರಿಗಳ ಮೂಲಕ ಪಡಿತರ ಚೀಟಿ ಹಿಂಪಡೆಯುವ ಕಾರ್ಯಕ್ಕೆ ರಾಜ್ಯ ಸರ್ಕಾರ ಮುಂದಾಗಿದ್ದು, ಬಿಪಿಎಲ್ ಪಡಿತರ ಚೀಟಿಗಳನ್ನು ಪಡೆಯಲು ಅರ್ಹತೆ ಇಲ್ಲದ ಸರ್ಕಾರಿ, ಅರೇ ಸರ್ಕಾರಿ ಹಾಗೂ ನಿಗಮ ಮಂಡಳಿ ಸೇರಿದಂತೆ ವಿವಿಧ ಶೈಕ್ಷಣಿಕ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವವರು ಬಿ.ಪಿ.ಎಲ್. ಕಾರ್ಡ್ ಹೊಂದಿದ್ದರೆ ತಕ್ಷಣ ಹಿಂತಿರುಗಿಸಲು ಸೂಚಿಸಲಾಗುತ್ತಿದೆ.
ಒಂದೊಮ್ಮೆ ಕಾರ್ಡ್ ಹಿಂದಿರುಗಿಸದೇ ಅದನ್ನು ಬಳಸಿದ್ದೇ ಆದರೆ ಅಂತಹ ಅಧಿಕಾರಿ ನೌಕರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಬಡತನ ರೇಖೆಗಿಂತ ಕೆಳಗಿರುವ ಬಡವರಿಗೆ ನೀಡುವ ಸೌಲಭ್ಯವಾಗಿದ್ದು, ಇದನ್ನು ಒಬ್ಬ ಸರ್ಕಾರಿ ನೌಕರನಾಗಿ ಉಪಯೋಗಿಸಿಕೊಳ್ಳುವುದು ಅಕ್ಷಮ್ಯ ಅಪರಾಧ. ಒಬ್ಬ ಸರ್ಕಾರಿ ಅಧಿಕಾರಿ/ನೌಕರ ಸರ್ಕಾರದಿಂದ ವೇತನ ಭತ್ಯೆಗಳನ್ನು ಪಡೆಯುತ್ತಿರುವುದರಿಂದ ಯಾವ ರೀತಿಯಲ್ಲೂ ಬಡತನ ರೇಖೆಗಿಂತ ಕೆಳಗೆ ಬರುವುದಿಲ್ಲ. ಆದ್ದರಿಂದ ಇಂತಹ ಅಧಿಕಾರಿ/ನೌಕರರು ಮತ್ತು ನೌಕರರ ಅವಲಂಬಿತ ಕುಟುಂಬ ಸದಸ್ಯರು ಈಗಾಗಲೇ ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿರುವುದು ಮಾನ್ಯ ಆಹಾರ ಸಚಿವರ ಗಮನಕ್ಕೆ ಬಂದಿದ್ದು, ಅವುಗಳನ್ನು ಕೂಡಲೇ ಹಿಂದಿರುಗಿಸುವಂತೆ ಸೂಚನೆ ನೀಡಲು ನಿರ್ದೇಶನವನ್ನು ನೀಡಿರುತ್ತಾರೆ. ಈ ಹಿನ್ನೆಲೆಯಲ್ಲಿ ಬಿ.ಪಿ.ಎಲ್. ಕಾರ್ಡ್‍ನ್ನು ಹೊಂದಿರುವ ನೌಕರರು ತಕ್ಷಣವೇ ಆಯಾ ತಾಲೂಕಾ ತಹಶೀಲ್ದಾರ ಕಚೇರಿಗಳಿಗೆ ಹಿಂದಿರುಗಿಸಲು ಜಿಲ್ಲಾಧಿಕಾರಿಗಳು ಖಡಕ್ ಸೂಚನೆ ನೀಡುತ್ತಿದ್ದಾರೆ.
ಈ ಎಚ್ಚರಿಕೆ ನೀಡಿದ್ದಾಗ್ಯೂ ಜಿಲ್ಲೆಯ ಸರ್ಕಾರಿ/ಸರ್ಕಾರದ ನಿಗಮ/ಮಂಡಳಿ/ಪ್ರಾಧಿಕಾರ/ವಿಶ್ವ ವಿದ್ಯಾಲಯ/ಸಂಸ್ಥೆಯ ಅಧಿಕಾರಿ/ನೌಕರರು ಮತ್ತು ನೌಕರರ ಅವಲಂಬಿತ ಕುಟುಂಬ ಸದಸ್ಯರು ಈಗಾಗಲೇ ಬಿಪಿಎಲ್ ಪಡಿತರ ಚೀಟಿಯನ್ನು ಹೊಂದಿದ್ದರೆ ಅವುಗಳನ್ನು ಸ್ವಯಂ ಪ್ರೇರಣೆಯಿಂದ 10 ಮಾರ್ಚ 2021 ರೊಳಗಾಗಿ ಜಿಲ್ಲೆಯ ಆಯಾ ತಹಸೀಲ್ದಾರ್ ಕಛೇರಿಯ ಆಹಾರ ಶಾಖೆಗೆ ಅಧ್ಯರ್ಪಿಸಿದರೆ ಯಾವುದೇ ರೀತಿ ಕ್ರಮವಹಿಸಲಾಗುವುದಿಲ್ಲ ಎಂದು ಸಲಹೆ ನೀಡಿದ್ದಾರೆ.
ಒಂದೊಮ್ಮೆ ಕಾರ್ಡ್‍ಗಳನ್ನು ಹಿಂತಿರುಗಿಸದೇ ಉಳಿಸಿಕೊಂಡಲ್ಲಿ ಊಖಒS ತಂತ್ರಾಂಶದಿಂದ ಮಾಹಿತಿ ಪಡೆದು, ಶೋಧ ನಡೆಸಿ ಪತ್ತೆ ಹಚ್ಚಿದ್ದಲ್ಲಿ, ಅಂತಹ ಅಧಿಕಾರಿ/ನೌಕರರ ವಿರುದ್ಧ Illigal Possession of Unauthorized Ration card Act-1977ರಡಿ ಕಾನೂನಿನ್ವಯ ಕ್ರಮವಹಿಸಿ, ಸಂಬಂಧಿಸಿದ ಅಧಿಕಾರಿ/ನೌಕರರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಶಿಸ್ತಿನ ಕ್ರಮವನ್ನು ಕೈಕೊಳ್ಳಲಾಗುವುದೆಂದು ಮತ್ತು ಪಡಿತರ ಚೀಟಿ ಪಡೆದ ದಿನಾಂಕದಿಂದ ಇಲ್ಲಿಯವರೆಗೆ ದಂಡವನ್ನು ವಸೂಲಿ ಮಾಡಲಾಗುವುದೆಂದು ಪತ್ರಿಕಾ ಪ್ರಕಟಣೆ ಮೂಲಕ ಜಿಲ್ಲಾಧಿಕಾರಿಗಳು ಎಚ್ಚರಿಕೆ ನೀಡಲಾರಂಭಿಸಿದ್ದಾರೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

