
ದೊಡ್ಡಬಳ್ಳಾಪುರ: ತಾಲೂಕಿನ ಎಲ್ಲಾ ಹೋಬಳಿಗಳಲ್ಲಿ ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಬಹು ಕೋಟಿಗಳ ಅನುದಾನದ ಮೂಲಕ ಸುಸಜ್ಜಿತವಾದ ವಿದ್ಯಾರ್ಥಿ ನಿಲಯಗಳು ನಿರ್ಮಾಣವಾಗಿವೆ. ಉಳಿದ ಸಾಸಲು ಮತ್ತು ಕಸಬ ಹೋಬಳಿಯಲ್ಲಿ ಸುಸಜ್ಜಿತವಾದ ವಿದ್ಯಾರ್ಥಿ ನಿಯಲಯಗಳ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದೇನೆ ಎಂದು ಶಾಸಕ ಟಿ.ವೆಂಕಟರಮಣಯ್ಯ ತಿಳಿಸಿದರು.
ಅವರು ಇಲ್ಲಿನ ಮಾದಗೊಂಡನಹಳ್ಳಿ ರಸ್ತೆಯಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಪ್ರಥಮ ಪದವಿ ವಿದ್ಯಾರ್ಥಿಗಳಿಗೆ ಮತ್ತು ಪ್ರಥಮ ಸ್ನಾತಕೋತರ ಪದವಿ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಹಾಗು 2020-21ನೇ ಸಾಲಿನ ಸಾಂಸ್ಕೃತಿಕ, ಎನ್.ಸಿ.ಸಿ, ಎನ್ಎಸ್ಎಸ್, ರೆಡ್ ಕ್ರಾಸ್ ಸೇರಿದಂತೆ ವಿವಿಧ ಸಮಿತಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತುಮಕೂರು ರಸ್ತೆಯಿಂದ ಕಾಲೇಜಿನ ವರೆಗಿನ ಸುಮಾರು 2 ಕಿಮಿ ರಸ್ತೆಗೆ ಡಾಂಬಾರು ಹಾಕುವ ಕಾಮಗಾರಿ ಪ್ರಗತಿ ಹಂತದಲ್ಲಿದೆ. ಆದರೆ ರಸ್ತೆ ಭಾಗ ಒತ್ತುವರಿಯಾಗಿರುವುದರಿಂದ ವಿಳಂಬವಾಗಿದ್ದು, ಈ ಸಮಸ್ಯೆಗಳನ್ನು ಬಗೆ ಹರಿಸಿ ರಸ್ತೆಗೆ ಡಾಂಬಾರು ಹಾಕಲಾಗುವುದು ಎಂದು ಅವರು ಭರವಸೆ ನೀಡಿದರು.
ಕಳೆದ ಸರ್ಕಾರದ ಅವಧಿಯಲ್ಲಿ ತಾಲೂಕಿಗೆ ವಿಶೇಷ ಅನುದಾನಗಳನ್ನು ತಂದಿದ್ದು, ದೊಡ್ಡಬಳ್ಳಾಪುರದಲ್ಲಿ ಹೈಟೆಕ್ ವಿದ್ಯಾರ್ಥಿ ನಿಲಯಗಳು ನಿರ್ಮಾಣವಾಗಿವೆ. ಅಲ್ಲದೆ ಇವು ರಾಜ್ಯದಲ್ಲಿ ಮಾದರಿಯಾಗಿದ್ದು, ರಾಜ್ಯದ ವಿವಿಧೆಡೆ ಇದೆ ಮಾದರಿಯಲ್ಲಿ ವಿದ್ಯಾರ್ಥಿ ನಿಲಯ ನಿರ್ಮಾಣ ಮಾಡುತ್ತಿರುವುದು ಇಲ್ಲಿನ ಸೃಜನಾತ್ಮಕ ಅಭಿವೃದ್ಧಿಗೆ ಹಿಡಿದ ಕನ್ನಡಿಯಾಗಿದೆ.
ವಿದ್ಯಾರ್ಥಿಗಳು ಬಡವರ ಶೈಕ್ಷಣಿಕ ಪ್ರಗತಿಯಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಸುಸಜ್ಜಿತ ವಿದ್ಯಾರ್ಥಿ ನಿಲಯಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಿದ್ದೇನೆ ಎಂದರು.
ಸರ್ಕಾರದ ವಿರುದ್ಧ ಅಸಮಾದಾನ: 90 ಕೋಟಿ ಅನುದಾನದಲ್ಲಿ 250 ಹಾಸಿಗೆಗಳ ಜಿಲ್ಲಾಸ್ಪತ್ರೆಗೆ ಕಳೆದ ಸರ್ಕಾರದಲ್ಲಿ ಅಮನುಮತಿ ದೊರೆತಿದ್ದರು. ಪ್ರಸ್ತುತ ಬಿಜೆಪಿ ಸರ್ಕಾರ ಅನುಮೋದನೆ ನೀಡುತ್ತಿಲ್ಲ ಎಂದು ಅವರು ಆರೋಪಿಸಿದರು.
ಡಿವೈಎಸ್ಪಿ ಟಿ.ರಂಗಪ್ಪ ಮಾತನಾಡಿ, ವಿದ್ಯಾರ್ಥಿಗಳು ಸಂಸ್ಕಾರಯುತ ಹವ್ಯಾಸಗಳನ್ನು ಕೌಟುಂಬಿಕ ನೆಲೆಯಲ್ಲಿ ಗಟ್ಟಿಗೊಳಿಸಿಕೊಳ್ಳುವ ಮೂಲಕ ಸಾಧನೆಯ ಶಿಖರ ಏರಬಹುದು. ಇಲ್ಲವಾದಲ್ಲಿ ಸಾಧನೆ ಹಾದಿಯಲ್ಲಿ ವಿದ್ಯಾರ್ಥಿಗಳು ಎಡುವಬಹುದಾದ ಆತಂಕಗಳ ಜೊತೆ ಬದುಕ ಬೇಕಾಗುತ್ತದೆ. ದೇಶ ರಾಜ್ಯ ಕಂಡ ಎಲ್ಲಾ ಸಾಧಕರೂ ನಿಮ್ಮಂತೆ ಇಂತಹ ಕಾಲೇಜುಗಳಿಂದಲೆ ಹೋಗಿದ್ದು. ಹೀಗಾಗಿ ಅವರ ಹಿಂದಿನ ಪರಿಶ್ರಮವನ್ನು ನಿಮ್ಮ ಒಳಗಣ್ಣಿನಿಂದ ಗ್ರಹಿಸಬೇಕಾದ ಪ್ರಜ್ಞೆಯೊಂದಿಗೆ ನಿಮ್ಮ ನಿಮ್ಮ ಶೈಕ್ಷಣಿಕ ಬದುಕು ಸಾಗಿದರೆ ಸಾಕು ನೀವು ನಿಮ್ಮ ದೂರ ದೃಷ್ಠಿಯಲ್ಲಿರುವ ಸಾಧನೆಯ ಶಿಖರ ಏರುವುದು ಕಷ್ಟವೇನು ಆಗುವುದಿಲ್ಲ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ವರ್ಷದಿಂದ ವರ್ಷಕ್ಕೆ ಅಪಘಾತದಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ಸೂಕ್ಷ್ಮ ಹರಿವುಗಳನ್ನು ನಿಮ್ಮ ಕುಟುಂಬಗಳ ಸದಸ್ಯರಿಗೆ ನೀಡುವ ಕರ್ತವ್ಯ ವಿದ್ಯಾರ್ಥಿಗಳಿಗೆ ಬರಬೇಕು. ಈ ಸಂಬಂಧ ಅಗತ್ಯವಾದ ದಾಖಲೆಗಳನ್ನು ಸಿದ್ದ ಮಾಡಿಸಿಕೊಳ್ಳುವುದು ನಿಮ್ಮ ಶಿಸ್ತಿನ ಭಾಗವಾಗಲಿ ಎಂದು ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾಧನಾ ಅಕಾಡೆಮಿಯ ಬಿ.ಮಂಜುನಾಥ್, ಭಾರತೀಯ ವಾಯುಸೇನೆ ಟ್ರೈನರ್ ಬಸವರಾಜು ಕಾಳೆ ಮಾತನಾಡಿದರು. ತಾಲೂಕು ಪಂಚಾಯಿತಿ ಅಧ್ಯಕ್ಷ ನಾರಾಯಣಗೌಡ, ಸದಸ್ಯ ಹಸನ್ ಘಟ್ಟ ರವಿ ಸೇರಿದಂತೆ ಹಲವರು ಹಾಜರಿದ್ದರು.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

