
ದೊಡ್ಡಬಳ್ಳಾಪುರ: ತಾಲೂಕಿನ ಇತಿಹಾಸ ಪ್ರಸಿದ್ದ ಶ್ರೀ ಪ್ರಸನ್ನ ಲಕ್ಷ್ಮೀ ವೆಂಕಟರಮಣಸ್ವಾಮಿ ಬ್ರಹ್ಮರಥೋತ್ಸವವು ನಗರದ ತೇರಿನ ಬೀದಿಯಲ್ಲಿ ಶನಿವಾರ ವಿಜೃಂಭಣೆಯಿಂದ ನಡೆಯಿತು.
ಮದ್ಯಾಹ್ನ ಒಂದು ಗಂಟೆಗೆ ಆರಂಭವಾಗಬೇಕಿದ್ದ ರಥೋತ್ಸವ 2.30ಕ್ಕೆ ನಡೆಯಿತು.
ರಾಜ್ಯದ ವಿವಿಧೆಡೆಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತಾದಿಗಳು ಬಿರು ಬಿಸಿಲಿನಲ್ಲಿ ಕಾದು ನಿಂತು ಶ್ರದ್ಧಾ ಭಕ್ತಿಗಳಿಂದ ರಥಕ್ಕೆ ಹಣ್ಣು ದವನ ಅರ್ಪಿಸಿ ಧನ್ಯತೆ ಮೆರೆದರು.
ಬ್ರಹ್ಮರಥೋತ್ಸವದ ಅಂಗವಾಗಿ ದೇವಾಲಯದಲ್ಲಿ ವಿಶೇಷ ಅಲಂಕಾರ ಕಲ್ಯಾಣೋತ್ಸವ, ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.
ಇಲ್ಲಿನ ಶ್ರೀ ಪ್ರಸನ್ನ ಆಂಜನೇಯಸ್ವಾಮಿ ಅನ್ನಸಂತರ್ಪಣಾ ಸಮಿತಿ ವತಿಯಿಂದ ಪ್ರಸಾದ ವಿತರಣೆ, ಶ್ರೀ ಶ್ರೀಕಂಠೇಶ್ವರ ಸ್ವಾಮಿ ಭಕ್ತ ಮಂಡಲಿಯಿಂದ,ಲೋಕಸೇವಾನಿರತ ಡಿ.ಕೊಂಗಾಡಿಯಪ್ಪನವರ ಸ್ಮರಣಾರ್ಥ ನಗರದ ದೇವಾಂಗ ಮಂಡಲಿಯಲ್ಲಿ ಅರವಂಟಿಗೆ, ಬಿಸಿಲಹಳ್ಳಿ ಚಿಕ್ಕಚೌಡಪ್ಪನವರ ಭಜನಾ ಮಂಡಲಿ ಸೇರಿದಂತೆ ವಿವಿಧ ಮಂಡಲಿಗಳಿಂದ ಅರವಂಟಿಕೆ ಏರ್ಪಡಿಸಲಾಗಿತ್ತು.
ರಥೋತ್ಸವದಲ್ಲಿ ಶಾಸಕ ಟಿ.ವೆಂಕಟರಮಣಯ್ಯ, ಉಪವಿಭಾಗಾಧಿಕಾರಿ ಅರುಳ್ ಕುಮಾರ್, ತಹಸೀಲ್ದಾರ್ ಟಿ.ಎಸ್.ಶಿವರಾಜ್, ತಾಪಂ ಅಧ್ಯಕ್ಷ ನಾರಾಯಣಗೌಡ, ಡಿವೈಎಸ್ಪಿ ಟಿ.ರಂಗಪ್ಪ, ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಕುಮಾರ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.
ರಥೋತ್ಸವದ ವೇಳೆ ತೀವ್ರವಾದ ಜನಜಂಗುಳಿ ಏರ್ಪಟ್ಟಿದ್ದು. ಮನೆ, ಅಂಗಡಿ ಮುಂಗಟ್ಟುಗಳ ಮೇಲೆ ನಿಂತು ಭಕ್ತರು ರಥೋತ್ಸವವನ್ನು ಕಣ್ ತುಂಬಿಕೊಂಡರು. ಪೊಲೀಸ್ ಇಲಾಖೆಯಿಂದ ಬಿಗಿ ಬಂದೂಬಸ್ತ್ ಕೈಗೊಂಡಿತ್ತು.
ರಥೋತ್ಸವದ ಅಂಗವಾಗಿ ಫೆ.28 ರಂದು ಹಗಲು ಪರಿಷೆ ನಡೆಯಲಿದ್ದು, ಡಾ.ರಾಜ್ ಕುಮಾರ್ ಕಲಾ ಭವನದಲ್ಲಿ ಸಂಜಯನಗರದ ಶ್ರೀ ಅಭಯ ಆಂಜನೇಯ ಸ್ವಾಮಿ ಕೃಪಾ ಪೋಷಿತ ಯುವಕರ ನಾಟಕ ಮಂಡಲಿವತಿಯಿಂದ ಶ್ರೀ ಕೃಷ್ಣ ಸಂಧಾನ ಅಥವಾ ದುರ್ಯೋಧನ ಗರ್ವಭಂಗ ಎಂಬ ಪೌರಾಣಿಕ ನಾಟಕ ಆಯೋಜಿಸಲಾಗಿದೆ.
ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ ಫೇಸ್ಬುಕ್ ಪುಟ, ಕೂ ಹಾಗೂ ಟ್ವಿಟರ್ ಫಾಲೋ ಮಾಡಿ. ಟೆಲಿಗ್ರಾಂ ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ. ಮಾಹಿತಿ ಇಷ್ಟವಾಗಿದ್ದರೆ ಮತ್ತಷ್ಟು ಜನರಿಗೆ ತಲುಪಿಸಲು ಶೇರ್ ಮಾಡಿ….

