ದೊಡ್ಡಬಳ್ಳಾಪುರ, (ಆಗಸ್ಟ್ 28); ನಗರದ ಪ್ರತಿಷ್ಠಿತ ಎಂ.ಎಸ್.ವಿ. ಪಬ್ಲಿಕ್ ಸ್ಕೂಲ್‌ನಲ್ಲಿ, ಬುಧವಾರ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾಭಕ್ತಿ, ವಿಜೃಂಭಣೆಯಿಂದ ಆಚರಿಸಲಾಯಿತು.
ಶಾಲಾ ಮಕ್ಕಳು ಕೃಷ್ಣ ಹಾಗೂ ರಾಧೆಯ ವೇಷ ಧರಿಸಿ ನಾನಾ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದರು.
ಪುಟ್ಟ ಪುಟ್ಟ ಮಕ್ಕಳು ಪ್ರದರ್ಶಿಸಿದ ಶ್ರೀ ವಿಷ್ಣುವಿನ ದಶಾವತಾರ ಕಾರ್ಯಕ್ರಮಕ್ಕೆ ಕಳಶವಿಟ್ಟಂತ್ತಿತ್ತು.
ಕೃಷ್ಣನ ಹಾಗೂ ಅವನ ತುಂಟಾಟದ ಕುರಿತಾದ ಹಾಡು, ನೃತ್ಯಗಳು ನೆರೆದಿದ್ದ ಪೋಷಕರ ಮನಸೂರೆಗೊಂಡವು.
ಕೃಷ್ಣ ಹಾಗೂ ರಾಧೆಯ ವೇಷಧಾರಿಗಳಿಂದ, ಕೃಷ್ಣನ ಮಂಟಪ, ಉಯ್ಯಾಲೆ, ಬಣ್ಣಬಣ್ಣದ ರಂಗೋಲಿ ಹಾಗೂ ಕೃಷ್ಣನ ಹೆಜ್ಜೆಗುರುತುಗಳಿಂದ ಶಾಲಾ ಆವರಣ ಬೃಂದಾವನದಂತೆ ಕಂಗೊಳಿಸುತ್ತಿತ್ತು.
ಬೆಣ್ಣೆ ಕದ್ದ ಕೃಷ್ಣನ ರೀತಿ ಶಾಲೆಯ ಮುದ್ದು ಮಕ್ಕಳು ಎಲ್ಲರ ಮನ ಗೆದ್ದರು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರಾದ ಡಾ.ಗೀತಾ ಎಂ.ಎಸ್., ಡಾ.ಮೃದುಲಾ.ಎಸ್ ಭಾಗವಹಿಸಿದ್ದರು.
ಈ ವೇಳೆ ಡಾ.ಗೀತಾ ಮಾತನಾಡಿ, ಚಂದ್ರಮಾನ ಕೃಷ್ಣ ಪಕ್ಷದಂದು ರಾಕ್ಷಸನ ಸಂಹಾರಕ್ಕೆ ಜನ್ಮ ತಾಳಿ, ಭಗವದ್ಗೀತೆಯ ಮೂಲಕ ಮಾನವನ ಬದುಕನ್ನು ಸಾರ್ಥಕ ಪಡಿಸುವ ಬಗ್ಗೆ ತಿಳಿಸಿಕೊಟ್ಟ ಮಹಾನ್ ವ್ಯಕ್ತಿ ಶ್ರೀ ಕೃಷ್ಣ. ಬಾಲ್ಯದಿಂದಲೂ ತುಂಟಾಟಗಳ ಮೂಲಕ ಮನುಷ್ಯನಿಗೆ ಮುಕ್ತಿಯನ್ನು ಪಡೆಯುವ ದಾರಿ ತೋರಿದ ಪುಣ್ಯಾತ್ಮ ಎಂದರು.
ಡಾ.ಮೃದುಲಾ.ಎಸ್ ಮಾತನಾಡಿ, ತಾನೂ ಸಹ ಎಂ.ಎಸ್.ವಿ. ಶಾಲೆಯ ವಿದ್ಯಾರ್ಥಿನಿಯಾಗಿದ್ದು, ಇಂದು ವೈದ್ಯೆಯಾಗಿದ್ದೇನೆ. ಹಾಗೆಯೇ ಈ ವರ್ಣ ರಂಜಿತ ಕೃಷ್ಣ ಜನ್ಮಾಷ್ಟಮಿ ಎಲ್ಲರ ಜೀವನದಲ್ಲಿ ರಂಗು ತುಂಬಲಿ. ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉತ್ತಮ ನಾಗರೀಕರಾಗಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಲಾ ಸಂಸ್ಥಾಪಕರಾದ ಎ.ಸುಬ್ರಮಣ್ಯ, ಕಾರ್ಯದರ್ಶಿ ಮಂಜುಳಾ ಸುಬ್ರಮಣ್ಯ, ಉಪಾಧ್ಯಕ್ಷ ಎಸ್. ಸ್ವರೂಪ್, ಆಡಳಿತಾಧಿಕಾರಿ ನಯನಾ ಸ್ವರೂಪ್, ಪ್ರಾಂಶುಪಾಲರಾದ ರೆಮ್ಯ.ಬಿ.ವಿ., ಉಪ ಪ್ರಾಂಶುಪಾಲರಾದ ಪ್ರತಿಮಾ ಪೈ ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….