ದೊಡ್ಡಬಳ್ಳಾಪುರ, (ಜ.12); ವಿದ್ಯುತ್ ಮಗ್ಗ ನೇಕಾರರಿಗೆ 10 ಎಚ್ಪಿವರೆಗೆ ಉಚಿತ ವಿದ್ಯುತ್ ನೀಡುವ ಕುರಿತು ಚುನಾವಣಾ ಪೂರ್ವದಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ್ದ ಭರವಸೆ ಈಡೇರಿದ್ದು, ರಾಜ್ಯದ 25 ಸಾವಿರ 10ಎಚ್ಪಿ ವರಗಿನ ವಿದ್ಯುತ್ ಮಗ್ಗದ ಘಟಕಗಳಿಗೆ ಇದರಿಂದ ಅನುಕೂಲವಾಗಿದೆ. ನೇಕಾರ ಸಮ್ಮಾನ್ ಮೊದಲಾದ ನೇಕಾರರ ಪರ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿರುವ ಸರ್ಕಾರಕ್ಕೆ ನೇಕಾರರ ಪರವಾಗಿ ಅಭಿನಂದನೆಗಳನ್ನು ಸಲ್ಲಿಸಲಾಗುತ್ತಿದೆ ಎಂದು ಕರ್ನಾಟಕ ರಾಜ್ಯ ನೇಕಾರರ ಮಹಾ ಮಂಡಳದ ಪ್ರಧಾನ ಕಾರ್ಯದರ್ಶಿ ಬಿ.ಜಿ.ಹೇಮಂತರಾಜು ಹೇಳಿದ್ದಾರೆ.
ನೇಕಾರರ ಹೋರಾಟ ಸಮಿತಿ ಕಚೇರಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಕಷ್ಟದಲ್ಲಿನ ನೇಕಾರರಿಗೆ ನೆರವಾಗುವ ದಿಸೆಯಲ್ಲಿ 20 ವರ್ಷಗಳ ಹಿಂದೆ ಅಂದಿನ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ 20 ಎಚ್ಪಿವರೆಗೆ ವಿದ್ಯುತ್ ಸಹಾಯಧನ ನೀಡಿ ಉದ್ಯಮದ ಉಳಿವಿಗೆ ಕಾರಣವಾಗಿದ್ದರು.
ಈಗ 10 ಎಚ್ಪಿವರೆಗೆ ಉಚಿತ ವಿದ್ಯುತ್ ನೀಡುವ ಯೋಜನೆ ಜಾರಿ ಆಗಿದ್ದು, ಡಿಸೆಂಬರ್ನಲ್ಲಿ ಬಂದಿರುವ ನವೆಂಬರ್ ತಿಂಗಳ ವಿದ್ಯುತ್ ಬಿಲ್ ಶೂನ್ಯವಾಗಿದೆ. ಆದರೆ ತಂತ್ರಾಂಶದ ಸಮಸ್ಯೆಯಿಂದಾಗಿ ಹಲವು ಬಿಲ್ಗಳಲ್ಲಿ ಬಾಕಿ ಮೊತ್ತ ಬರುತ್ತಿದ್ದು, ನೇಕಾರರು ಆತಂಕ ಪಡಬೇಕಿಲ್ಲ. ಈ ಬಗ್ಗೆ ಬೆಸ್ಕಾಂ ಸಹ ಸೂಚನೆ ನೀಡಿದೆ ಎಂದರು.
ಸರ್ಕಾರಕ್ಕೆ ಕೃತಜ್ಞತೆಗಳು: ಉಚಿತ ವಿದ್ಯುತ್ ನೀಡಿ, ನೇಕಾರ ಸಮ್ಮಾನ್ ಯೋಜನೆಯ ಮೂಲಕ 83 ಸಾವಿರ ಜನ ನೇಕಾರರು ಮತ್ತು ನೇಕಾರ ಕಾರ್ಮಿಕರಿಗೆ ತಲಾ 5 ಸಾವಿರ ರೂಪಾಯಿ ನೇಕಾರರ ಖಾತೆಗೆ ಜಮಾ ಮಾಡುವ ಮೂಲಕ ರಾಜ್ಯ ಸರ್ಕಾರ ನೇಕಾರರಿಗೆ ಅಸರೆಯಾಗಿದೆ. ಚುನಾವಣಾ ಪೂರ್ವದಲ್ಲಿ ನುಡಿದಂತೆ ನಡೆದ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಮಸ್ತ ನೇಕಾರರ ಪರವಾಗಿ ಧನ್ಯವಾದಗಳನ್ನು ಸಲ್ಲಿಸುತ್ತಿದ್ದೇವೆ ಎಂದರು.
ಹಿಂದಿನ ಬಿಜೆಪಿ ಸರ್ಕಾರದಲ್ಲಿ ನೇಕಾರರಿಗೆ ನೀಡಲಾಗುತ್ತಿರುವ ರಿಯಾಯಿತಿ ವಿದ್ಯುತ್ ಯೋಜನೆ ಸ್ಥಗಿತಗೊಳಿಸಲು ಚಿಂತನೆ ನಡೆದಿತ್ತು. ನೇಕಾರರ ಹಲವಾರು ಯೋಜನೆಗಳಿಗೆ ಅನುದಾನ ನೀಡುತ್ತಿರಲಿಲ್ಲ. ಆದರೆ ದೇಶದಲ್ಲಿ ಸ್ವಾತಂತ್ರ್ಯ ಬಂದ ನಂತರ ರಾಜ್ಯದಲ್ಲಿ ಮೊದಲ ಬಾರಿಗೆ ನೇಕಾರರ ಪರವಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದ ಕೀರ್ತಿ ಕಾಂಗ್ರೆಸ್ ಸರ್ಕಾರದಿಂದ ಸಾಧ್ಯವಾಗಿದೆ.
ನೇಕಾರರ ಸಾಲದ ಮೇಲಿನ ಬಡ್ಡಿ ಮನ್ನಾ, ವಸತಿ ಯೋಜನೆ ಗುಂಪು ವಿಮಾ ಯೋಜನೆಯಡಿ 9 ರಿಂದ 12 ನೇ ತರಗತಿ ಓದುವ ನೇಕಾರ ಮಕ್ಕಳಿಗೆ 1200 ರೂ ವಿದ್ಯಾರ್ಥಿವೇತನ, ಯಶಸ್ವಿನಿ ಆರೋಗ್ಯ ವಿಮಾ ಯೋಜನೆ ಎರಡು ಮಗ್ಗ ಯೋಜನೆ ಎಲೆಕ್ಟ್ರಾನಿಕ್ ಜಕಾರ್ಡ್ ಯೋಜನೆ ಶೇ.3ರ ಬಡ್ಡಿದರದಲ್ಲಿ ಸಾಲ ಸೌಲಭ್ಯ ಯೋಜನೆ ಜಾರಿಗೆ ತಂದು ನೇಯ್ಗೆ ಉದ್ಯಮಕ್ಕೆ ಆಸರೆ ಆಗಿದೆ. ಈ ನೇಕಾರರ ವಸತಿ ಯೋಜನೆಗಳು ಜಾರಿಯಾಗುತ್ತಿವೆ.
ನೇಕಾರರಿಗೆ ವರವಾಗಿರುವ ಉಚಿತ ವಿದ್ಯುತ್ ಜಾರಿಗೆ ತಂದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕರ್ನಾಟಕ ರಾಜ್ಯನೇಕಾರ ಮಹಾ ಮಂಡಳಿಯ ಜೊತೆ ನಿಂತು ಸಹಕರಿಸಿದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ, ದೊಡ್ಡಬಳ್ಳಾಪುರದ ಮಾಜಿ ಶಾಸಕ ಟಿ.ವೆಂಕಟರಮಣಯ್ಯ, ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹಾಗೂ ಇಲಾಖೆಯ ಅಕಾರಿಗಳಿಗೆ ಈ ಮೂಲಕ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇವೆ ಎಂದರು.
ಸುದ್ಧಿಗೋಷ್ಟಿಯಲ್ಲಿ ಕರ್ನಾಟಕ ರಾಜ್ಯ ನೇಕಾರರ ಮಹಾ ಮಂಡಳದ ನಿರ್ದೇಶಕರಾದ ಜೆ.ಎಸ್.ಮಂಜುನಾಥ್, ಕೆ.ಜಿ.ಗೋಪಾಲ್, ರಂಗಸ್ವಾಮಿ ನೇಕಾರರ ಹೋರಾಟ ಸಮಿತಿಯ ಉಪಾಧ್ಯಕ್ಷ ಸಂಜೀವಪ್ಪ, ಶಿವರಾಂ ಮೊದಲಾದವರು ಹಾಜರಿದ್ದರು.
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….