ಬೆಟ್ಟದ ಬುಡದ ಗವಿಯಲ್ಲಿ ವಾಸವಾಗಿದ್ದ ಒಂದು ನರಿಗೆ ಏನೂ ಆಹಾರ ಸಿಕ್ಕಿರಲಿಲ್ಲ. ಅದೊಂದು ನದಿಯ ದಡಕ್ಕೆ ಬಂತು. ನದಿಯ ಇನ್ನೊಂದು ದಡದಲ್ಲಿ ಕೆಂಪುಕೆಂಪಾದ ಹಣ್ಣುಗಳ ಮರವೊಂದು ಗೋಚರಿಸಿತು. ಅಲ್ಲಿಗೆ ಹೋದರೆ ಬೇಕಾದಷ್ಟು ತಿನ್ನಬಹುದೆನಿಸಿತು. ಆದರೆ ನದಿಯಲ್ಲಿ ತುಂಬ ನೀರಿದ್ದುದರಿಂದ ನದಿಗಿಳಿಯಲು ಸಾಧ್ಯವಿರಲಿಲ್ಲ. ಆಗ ಅದನ್ನೇ ನೋಡುತ್ತಿದ್ದ ಒಂದು ಮೊಸಳೆಗೆ ಇದು ತನಗೆ ಹೊಟ್ಟೆ ತುಂಬ ಆಹಾರವಾಗಬಹುದು ಎಂಬ ಯೋಚನೆ ಬಂತು.
ಆದರೂ ಉಪಾಯದಲ್ಲಿ ಅದನ್ನು ಹಿಡಿಯಬೇಕಲ್ಲದೆ ಸುಲಭವಾಗಿ ಬಾಯಿಗೆ ಸಿಗುವಂತಹದ್ದಲ್ಲ. ಮೊಸಳೆ ನರಿಯನ್ನು ಮಾತನಾಡಿಸುತ್ತ, ‘ಏನು ಯೋಚನೆ ಮಾಡುತ್ತಿದ್ದೀಯಾ? ಏನಾಗಬೇಕು?’ ಎಂದು ಕೇಳಿತು. ‘ನದಿಯ ಆಚೆ ದಡದಲ್ಲಿರುವ ಪ್ರಾಣಿಗಳಿಂದ ಇನ್ನೂ ಸುಂಕ ಬಂದಿಲ್ಲವಂತೆ. ಹುಲಿರಾಯರು ವಸೂಲಿ ಮಾಡಿಕೊಂಡು ಬಾ ಎಂದಿದ್ದಾರೆ. ನದಿ ದಾಟಲು ಆಗುವುದಿಲ್ಲ’ ಎಂದಿತು ನರಿ.
‘ಅದಕ್ಕೇನಂತೆ, ನಾನು ದಾಟಿಸುತ್ತೇನೆ. ಆದರೆ ನನಗೆ ಅದರ ಸಂಬಳ ಕೊಡಬೇಕು’ ಎಂದಿತು ಮೊಸಳೆ. ನರಿ, ‘ಆಗಲಿ’ ಎಂದು ಒಪ್ಪಿಕೊಂಡ ಮೇಲೆ ಅದನ್ನು ಬೆನ್ನಿನ ಮೇಲೆ ಕೂಡಿಸಿಕೊಂಡು ಆಚೆ ದಡಕ್ಕೆ ಹೋಯಿತು. ದಡದಲ್ಲಿ ಕೆಳಗಿಳಿದ ಕೂಡಲೇ ನರಿಯನ್ನು ನುಂಗಬೇಕೆಂದು ಅದು ಎಣಿಸಿಕೊಂಡಿತ್ತು. ಆದರೆ ದಡ ತಲಪುವ ಮೊದಲೇ ನರಿ ಚಂಗನೆ ದಡಕ್ಕೆ ಹಾರಿತು. ‘ಸಂಬಳ ಎಲ್ಲಿ?’ ಕೇಳಿತು ಮೊಸಳೆ. ‘ಮರಳಿ ಬರುವಾಗ ಎರಡನ್ನೂ ಸೇರಿಸಿ ಕೊಡ್ತೇನೆ’ ಎಂದು ಓಡುತ್ತಲೇ ಹೇಳಿದ ನರಿ, ಹಣ್ಣಿನ ಮರಗಳ ಬಳಿಗೆ ಹೋಗಿ ಉದುರಿದ್ದ ಹಣ್ಣುಗಳನ್ನು ಹೊಟ್ಟೆ ತುಂಬ ತಿಂದಿತು.
ಸಂಜೆಯವರೆಗೆ ಕಾದಿದ್ದ ಮೊಸಳೆ ಮತ್ತೆ ನರಿಯನ್ನು ಬೆನ್ನಮೇಲೆ ಹೊತ್ತುಕೊಂಡು ಹಿಂತಿರುಗಿತು. ಅದರ ಬುದ್ಧಿವಂತಿಕೆ ಗೊತ್ತಿದ್ದ ಕಾರಣ ಅದು ದಡಕ್ಕೆ ಹಾರುವ ಮೊದಲೇ ಅದರ ಒಂದು ಕಾಲನ್ನು ಹಲ್ಲುಗಳಿಂದ ಗಟ್ಟಿಯಾಗಿ ಹಿಡಿದುಕೊಂಡಿತು. ಚಾಲಾಕಿ ನರಿ ಜೋರಾಗಿ ನಗುತ್ತ, ‘ಅಯ್ಯೋ ಮೊಸಳೆಯಣ್ಣ, ಇದೆಂಥದ್ದು ನಿನ್ನ ಅವಸ್ಥೆ? ನನ್ನ ಕಾಲು ಹಿಡಿದು ನಮಸ್ಕರಿಸಬೇಕು ಅನ್ನುವ ಆಸೆಯಲ್ಲಿ ಕಾಲಿನ ಬದಲು ತೇಲುತ್ತಿರುವ ಒಂದು ಬೇರನ್ನು ಯಾಕೆ ಕಚ್ಚಿಕೊಂಡಿದ್ದೀ? ನನ್ನ ಕಾಲು ಇಲ್ಲಿದೆ ನೋಡು‘ ಎಂದಿತು. ಆ ಮಾತನ್ನು ನಂಬಿ ಮೊಸಳೆ ಕಾಲನ್ನು ಬಿಟ್ಟ ಕೂಡಲೇ ದಡಕ್ಕೆ ನೆಗೆದು ನರಿ ತಪ್ಪಿಸಿಕೊಂಡಿತು.
ಹೇಗಾದರೂ ಮಾಡಿ ನರಿಯನ್ನು ತಿನ್ನದೆ ಬಿಡುವುದಿಲ್ಲ ಎಂದು ಮೊಸಳೆ ಶಪಥ ಮಾಡಿತು. ನದಿಯ ದಡದಲ್ಲಿ ಒಂದು ಮರದಿಂದ ತುಂಬ ಹಣ್ಣುಗಳು ಬೀಳುತ್ತಿದ್ದವು. ಅದನ್ನು ತಿನ್ನಲು ನರಿ ಬರುವುದು ಅದಕ್ಕೆ ಗೊತ್ತಿತ್ತು. ಆ ಸಮಯದಲ್ಲಿ ಮರದ ಕೆಳಗೆ ಹಣ್ಣುಗಳನ್ನು ರಾಶಿ ಹಾಕಿತು. ಅದರೊಳಗೆ ಹುದುಗಿಕೊಂಡಿತು.
ನರಿಗೆ ಹಣ್ಣುಗಳ ರಾಶಿ ಕಂಡು ಅನುಮಾನವಾಯಿತು. ‘ಹಣ್ಣುಗಳೇ, ಯಾವಾಗಲೂ ನಾನು ಬರುವಾಗ ಮೇಲಕ್ಕೆ ಹಾರುತ್ತಿದ್ದಿರಿ. ಆದರೆ ಇಂದೇನಾಗಿದೆ ನಿಮಗೆ? ಸುಮ್ಮಗೆ ಯಾಕೆ ಮಲಗಿದ್ದೀರಿ?’ ಎಂದು ಕೇಳಿತು. ಇದನ್ನು ಸತ್ಯವೆಂದೇ ನಂಬಿದ ಮೊಸಳೆ ಬಾಲದಲ್ಲಿ ಹಣ್ಣುಗಳನ್ನು ರಪರಪನೆ ಮೇಲಕ್ಕೆ ಚಿಮ್ಮಿತು. ಅಲ್ಲಿ ಮೊಸಳೆಯಿರುವುದು ಅರ್ಥವಾದ ಕೂಡಲೇ ನರಿ, ‘ಏನು ಮೊಸಳೆಯಣ್ಣ, ಹಣ್ಣುಗಳು ಹಾರುವುದಿಲ್ಲವೆಂದು ನಿನಗೆ ಗೊತ್ತಿಲ್ಲವೆ?’ ಎನ್ನುತ್ತ ಓಡಿಹೋಯಿತು.
ಕೆಲಸ ಕೆಟ್ಟಿತು ಎಂದುಕೊಂಡ ಮೊಸಳೆ ಹೊಸ ಉಪಾಯ ಹುಡುಕಿತು. ಸಂಜೆ ನರಿಯ ಗವಿಯನ್ನು ಪತ್ತೆ ಮಾಡಿ ಅದರೊಳಗೆ ಹೋಗಿ ಮಲಗಿಕೊಂಡಿತು. ಬೇಟೆಗೆ ಹೋದ ನರಿ ಮರಳಿದಾಗ ಗವಿಯೊಳಗೆ ಹೋಗಿರುವ ಮೊಸಳೆಯ ಹೆಜ್ಜೆಯ ಗುರುತುಗಳನ್ನು ಕಂಡು ನಿಜ ವಿಷಯ ತಿಳಿದುಕೊಂಡಿತು. ಗಟ್ಟಿ ದನಿಯಿಂದ, ‘ಗುಹೆಯಣ್ಣ, ಯಾವಾಗಲೂ ನಾನು ಬರುವಾಗ ಶಂಖ ಊದಿ ಸ್ವಾಗತಿಸುತ್ತಿದ್ದ ನೀನು ಇಂದೇಕೆ ಮೌನವಾಗಿರುವೆ? ಏನಾಗಿದೆ ನಿನಗೆ?’ ಎಂದು ಕೇಳಿತು.
ಯಾವಾಗಲೂ ನರಿಯನ್ನು ಗುಹೆ ಹೀಗೆ ಸ್ವಾಗತಿಸುವುದು ನಿಜವೆಂದು ಭಾವಿಸಿದ ಮೊಸಳೆ ಶಂಖದಂತೆ ಕೂಗಿಕೊಂಡಿತು. ಮೊಸಳೆಯ ಮೋಸ ತಿಳಿದ ಕೂಡಲೇ ನರಿ, ‘ಅಯ್ಯೋ ಬೆಪ್ಪು ಮೊಸಳೆಯಣ್ಣ, ಗವಿ ಎಂದಿಗಾದರೂ ಕೂಗುವುದುಂಟೆ? ನಿನಗಷ್ಟೂ ಗೊತ್ತಿಲ್ಲವೆ?’ ಎಂದು ನಗುತ್ತ ಅಲ್ಲಿಂದ ದೂರ ಓಡಿಹೋಯಿತು.
ಮೊಸಳೆ ಇನ್ನೂ ಒಂದು ಉಪಾಯ ಹುಡುಕಿತು. ತನ್ನ ಹೆಂಡತಿಯನ್ನು ನರಿಯ ಬಳಿಗೆ ಕಳುಹಿಸಿತು. ಹೆಣ್ಣು ಮೊಸಳೆ ಕಣ್ಣೀರಿಳಿಸುತ್ತ, ‘ನನ್ನ ಗಂಡ ಮೊಸಳೆ ಸತ್ತುಹೋಗಿದೆ. ನನಗೆ ಕೊಡಬೇಕಾದ ಸಂಬಳವನ್ನಂತೂ ನರಿ ಕೊಡಲಿಲ್ಲ. ಅಂತ್ಯ ಸಂಸ್ಕಾರವನ್ನಾದರೂ ಮಾಡಿ ಸದ್ಗತಿ ಸಿಗುವಂತೆ ಮಾಡಲಿ ಎಂದು ಕೊನೆಯಾಸೆಯನ್ನು ಹೇಳಿಕೊಂಡಿತ್ತು. ಆದ್ದರಿಂದ ನೀನು ಬಂದು ಅದರ ಬಯಕೆಯನ್ನು ನೆರವೇರಿಸಬೇಕು’ ಎಂದು ಕೇಳಿಕೊಂಡಿತು.
ನರಿ ಅದರ ಜೊತೆಗೆ ಹೋಯಿತು. ಒಂದು ಮರದ ಕೆಳಗೆ ನಿಶ್ಚಲವಾಗಿ ಮಲಗಿದ್ದ ಮೊಸಳೆಯನ್ನು ನೋಡಿ, ‘ಇದು ಸತ್ತ ಹಾಗೆ ಕಾಣಿಸುವುದಿಲ್ಲವಲ್ಲ. ಸತ್ತವರು ಕಣ್ಣಿನ ರೆಪ್ಪೆ ಪಟಪಟ ಬಡಿಯುತ್ತಾರೆ, ನಾಲಿಗೆ ಹೊರಗೆ ಚಾಚುತ್ತಾರೆ. ಇದಕ್ಕೆ ಅಂತಹ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ’ ಎಂದಿತು. ತಾನು ಸತ್ತಿದ್ದೇನೆಂದು ತೋರಿಸಿಕೊಳ್ಳಲು ಮೊಸಳೆ ಕಣ್ಣರೆಪ್ಪೆಗಳನ್ನು ಪಟಪಟ ಬಡಿಯುತ್ತ ನಾಲಿಗೆಯನ್ನು ಹೊರಗೆ ಹಾಕಿತು.
ನರಿ ಜೋರಾಗಿ ನಕ್ಕಿತು. ‘ಹೆಡ್ಡ ದೂಮ, ಸತ್ತವರು ರೆಪ್ಪೆ ಬಡಿಯುವುದು ಎಲ್ಲಾದರೂ ಉಂಟೆ? ನಿನ್ನ ಮೋಸದ ಬಲೆಗೆ ನಾನು ಎಂದಿಗೂ ಸಿಲುಕುವುದಿಲ್ಲ’ ಎಂದು ಹೇಳಿ ದೂರ ಓಡಿತು. ಮೊಸಳೆಗೆ ನಾಚಿಕೆಯಾಯಿತು. ಹೆಂಡತಿಯೊಂದಿಗೆ ಆ ಪ್ರದೇಶದಿಂದಲೇ ಹೋಗಿಬಿಟ್ಟಿತು.
ಕೃಪೆ: ಪ.ರಾಮಕೃಷ್ಣ ಶಾಸ್ತ್ರಿ (ಸಾಮಾಜಿಕ ಜಾಲತಾಣ)
ಮಾಹಿತಿ ಇಷ್ಟವಾಗಿದ್ದರೆ ಶೇರ್ ಮಾಡಿ: ಕ್ಷಣ ಕ್ಷಣದ ಮಾಹಿತಿಗಾಗಿ ಹರಿತಲೇಖನಿ Facebook, Koo, Dailyhunt ಮೂಲಕ ಫಾಲೋ ಮಾಡಿ. Whatsup, Telegram ಗುಂಪಿಗೆ ಸೇರಿ ನಮ್ಮೊಂದಿಗೆ ಜೊತೆಯಾಗಿ….