ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಚಂಡಮಾರುತದ ಕಾರಣ ತಮಿಳುನಾಡು ಹಾಗೂ ಪುದುಚೇರಿಯಲ್ಲಿ ಧಾರಾಕಾರ ಮಳೆಯಾಗ್ತಿದೆ. ಈ ಸೈಕ್ಲೋನ್ (Cyclone) ಪರಿಣಾಮ ರಾಜ್ಯದ ಮೇಲೂ ಪರಿಣಾಮ ಬೀರಿದ್ದು ಬೆಳಗ್ಗಿನಿಂದ ಮೋಡ ಆವರಿಸಿದೆ.
ಈಗಾಗಲೇ ತಮಿಳುನಾಡು, ಕೇರಳ, ಶ್ರೀಲಂಕಾದಲ್ಲಿ ಭಾರೀ ಮಳೆಯಾಗುತ್ತಿದ್ದು ಕರ್ನಾಟಕದ 8 ಜಿಲ್ಲೆಗಳಲ್ಲಿ ಇಂದು ಹಾಗೂ ನಾಳೆ ಎರಡು ದಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ಮಂಡ್ಯ ಮೈಸೂರು, ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ವಿಜಯನಗರ, ಶಿವಮೊಗ್ಗ ರಾಮನಗರ, ಕೊಡಗು, ಹಾಸನ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಚಾಮರಾಜನಗರ, ಯಾದಗಿರಿ, ವಿಜಯಪುರ, ರಾಯಚೂರು, ಕೊಪ್ಪಳ, ಕಲಬುರಗಿ, ಹಾವೇರಿ, ಗದಗ, ಧಾರವಾಡ, ಬೀದರ್, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡದಲ್ಲಿ ಮಳೆಯಾಗಲಿದೆ.
ಇದು ಚಳಿಗಾಲದ ಮಳೆ. ಈಗಾಗಲೇ ಚಳಿಯ ಹೊಡೆತಕ್ಕೆ ಜನ ತತ್ತರಿಸಿದ್ದು ಮಳೆರಾಯ ಕೂಡ ವರಸೆ ತೋರಿಸ್ತಿದ್ದಾನೆ. ಮೋಡಕವಿದ ವಾತಾವರಣ, ತುಂತುರು ಮಳೆಯಿಂದ ಚಳಿ ಹೆಚ್ಚಿದೆ. ವಿಪರೀತ ಚಳಿಯಿಂದ ಜನ ಹೈರಾಣಾಗಿದ್ದಾರೆ.
ಅಲ್ಲದೇ ಬೆಂಗಳೂರು ಸೇರಿದಂತೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮೋಡ ಮುಸುಕಿದ ವಾತಾವರಣ ಉಂಟಾಗಿದ್ದು, ಮಧ್ಯಾಹ್ನದ ಹೊತ್ತಿಗೆ ರಾಜಧಾನಿ ಬೆಂಗಳೂರಿನಲ್ಲಿ ಶುರುವಾದ ತುಂತುರು ಮಳೆಯಾಗುವ ಸಾದ್ಯತೆಗಳಿವೆ ಎಂದು ಹವಾಮಾನ ಇಲಾಖೆ ತಿಳಿಸಿದೆ.