ದೊಡ್ಡಬಳ್ಳಾಪುರ: ಹುಲಿಕುಂಟೆಯಲ್ಲಿ ಆಗಸ್ಟ್ 16 ರಂದು ನಡೆದ ಮಂಜುನಾಥ್ ಹತ್ಯೆ ಆರೋಪಿಗಳನ್ನು ಬಂಧಿಸಲು ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಗಳ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ದೊಡ್ಡಬೆಳವಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಕೆಸ್ತೂರು ಗ್ರಾಮದ ಬಳಿ ನಡೆದಿದೆ.

ಸರ್ಕಲ್ ಇನ್ಸ್ಪೆಕ್ಟರ್ ರಾಘವ ಎಸ್.ಗೌಡ ಹಾಗೂ ದೊಡ್ಡಬೆಳವಂಗಲ ಸಬ್ ಇನ್ಸ್ಪೆಕ್ಟರ್ ಮಂಜೇಗೌಡ ನೇತೃತ್ವದ ಪೊಲೀಸರ ತಂಡ ಮಾಹಿತಿಯ ಮೇರೆಗೆ ಕೆಸ್ತೂರು ಬಳಿ ಆರೋಪಿಗಳನ್ನು ಬಂಧಿಸಲು ತೆರಳಿದ್ದರು. ರಾಜನಕುಂಟೆ ಸಬ್ ಇನ್ಸ್ಪೆಕ್ಟರ್ ಶಂಕರಪ್ಪ ಮತ್ತು ದೊಡ್ಡಬೆಳವಂಗಲ ಪೊಲೀಸ್ ಕಾನ್ಸ್ಟೇಬಲ್ ಹುಸೇನ್ ಅವರ ಮೇಲೆ ಆರೋಪಿಗಳು ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದರು. ಈ ವೇಳೆ ಸರ್ಕಲ್ ಇನ್ಸ್ಪೆಕ್ಟರ್ ರಾಘವ ಎಸ್.ಗೌಡ ಆರೋಪಿಗಳಾದ ಹೇಮಂತ್, ಸೋನು ಕಾಲಿಗೆ ಗುಂಡು ಹಾರಿಸಿದ್ದಾರೆ.

ಗಾಯಗೊಂಡ ಆರೋಪಿಗಳನ್ನು ಹಾಗೂ ಪೊಲೀಸ್ ಸಿಬ್ಬಂದಿಯನ್ನು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲು ಮಾಡಲಾಗಿದೆ.
