ದೊಡ್ಡಬಳ್ಳಾಪುರ: ದೇಶಾದ್ಯಂತ ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತುರ್ತು ಆರೋಗ್ಯ ಸಮಸ್ಯೆಗಳಿಗೆ ರೋಗಿಗಳು ಆಸ್ಪತ್ರೆ ಮತ್ತು ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡುವುದು ಕಷ್ಟವಾಗಿದ್ದು, ಸಾರ್ವಜನಿಕರಿಗೆ ಅಗತ್ಯ ಆರೋಗ್ಯ ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಸರ್ಕಾರವು ಜಾರಿಗೆ ತಂದಿರುವ ಇ-ಸಂಜೀವಿನಿ ಯೋಜನೆಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನತೆ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಂಜುಳಾದೇವಿ.ಕೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸಾಮಾನ್ಯ ಕೆಮ್ಮು, ನೆಗಡಿ, ಜ್ವರ ಮತ್ತು ಇತರೆ ಆರೋಗ್ಯ ಸಮಸ್ಯೆಗಳಿಗೆ ಮನೆಯಲ್ಲಿಯೇ ಕುಳಿತು ವ್ಯೆದ್ಯರಿಂದ ಚಿಕಿತ್ಸೆ ಪಡೆಯಲು ಇ-ಸಂಜೀವಿನಿ ಆ್ಯಪ್ ಬಳಸಬಹುದಾಗಿದ್ದು, ವೈದ್ಯರನ್ನು ಮೊಬೈಲ್‌ನಲ್ಲಿ ಸಂಪರ್ಕಿಸಲು ಗೂಗಲ್‌ನಲ್ಲಿ ಇ-ಸಂಜೀವಿನಿ ಒಪಿಡಿ ಎಂದು ನಮೂದಿಸಿ, ರಿಜಿಸ್ಟರ್ ಆಗಬೇಕು. ನಂತರ ವೆಬ್‌ವಿಡಿಯೋ ಮೂಲಕ ಸಂಪರ್ಕಕ್ಕೆ ಬರುವ ವೈದ್ಯರು ನಿಮ್ಮ ಕಾಯಿಲೆ ಕುರಿತು ವಿವರವಾಗಿ ವಿಚಾರಣೆ ನಡೆಸಿ, ಕಾಯಿಲೆಗೆ ಚಿಕಿತ್ಸೆ ತಿಳಿಯುವ ಮೂಲಕ ಆಸ್ಪತ್ರೆಯ ಕದ ತಟ್ಟದೇ, ಇರುವಲ್ಲಿಂದಲೇ ರೋಗಕ್ಕೆ ಚಿಕಿತ್ಸೆ ಪಡೆಯಬಹುದಾಗಿದೆ.

ಇ-ಸಂಜೀವಿನಿ ಲಿಂಕ್‌ನ್ನು ದೇಶಾದ್ಯಂತ ಕೇಂದ್ರ ಆರೋಗ್ಯ ಇಲಾಖೆ ಲೋಕಾರ್ಪಣೆ ಮಾಡಿದ್ದು, ಇದರ ಕಾರ್ಯಾಚರಣೆ ಕುರಿತ ಮಾಹಿತಿ ಇಲ್ಲದ ಕಾರಣ, ಆರಂಭದಲ್ಲೆ ತೆವಳುತ್ತಾ ಸಾಗುತ್ತಿದೆ. ಇ-ಸಂಜೀವಿನಿ ಕುರಿತು ಜನತೆಗೆ ಮಾಹಿತಿ ನೀಡಿದರೇ, ಪ್ರಚಲಿತಕ್ಕೆ ಬರಲಿದೆ ಎಂಬುದು ವೈದ್ಯರ ಆಭಿಪ್ರಾಯವಾಗಿದೆ.
ಕರೊನಾ ತಡೆಗಟ್ಟುವ ಸಲುವಾಗಿ ಕೇಂದ್ರ ಸರಕಾರ ಸಾರ್ವಜನಿಕರಿಗೆ ಮನೆಯಲ್ಲಿರುವ ಮೂಲಕ ಸುರಕ್ಷಿತವಾಗಿರಿ ಎಂದು ಜನತೆಯಲ್ಲಿ ಮನವಿ ಮಾಡಿಕೊಳ್ಳಲಾಗುತ್ತಿದ್ದು, ಇಂತಹ ಸಂದರ್ಭದಲ್ಲಿ ಆರೋಗ್ಯದ ತೋಂದರೆಗಳಿಗೆ ಮನೆಯಲ್ಲಿ ಕುಳಿತು ಚಿಕಿತ್ಸೆ ಪಡೆಯಬಹುದಾಗಿದೆ. ಕೇಂದ್ರ ಆರೋಗ್ಯ ಮಂತ್ರಾಲಯ, ರಾಷ್ಟ್ರೀಯ ಟೆಲಿ ಸಮಾಲೋಚನಾ ಸೇವೆ (ನ್ಯಾಷನಲ್ ಟೆಲಿಕನ್ಸಲ್‌ಟೇಷನ್ ಸರ್ವಿಸ್) ಎಂಬ ಹೆಸರಿನಲ್ಲಿ ಲಿಂಕ್‌ನ ಆ್ಯಪ್ ಸಿದ್ಧಪಡಿಸಲಾಗಿದೆ.
ಟೆಲಿ ಸಮಾಲೋಚನಾ ಸೇವೆ ಪಡೆಯಲು, ಮೊಬೈಲ್ ಅಥವಾ ಕಂಪ್ಯೂಟರ್‌ನ ಗೂಗಲ್‌ನಲ್ಲಿ ಇ-ಸಂಜೀವಿನಿ ಒಪಿಡಿ ಎಂಬುದಾಗಿ ಟೈಪಿಸಬೇಕು. ಆಗ ಕೇಂದ್ರ ಆರೋಗ್ಯ ಸಚಿವಾಲಯದ ಮುಖಪುಟ ತೆರೆದುಕೊಳ್ಳಲಿದೆ. ಇದರಲ್ಲಿ ಪೇಷೇಂಟ್ ರಿಜಿಸ್ಟ್ರೇಷನ್ನಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿದರೆ, ನಿಮಗೊಂದು ಒಟಿಪಿ ನಂಬರ್ ಬರಲಿದೆ. ಆ ಒಟಿಪಿ ನಂಬರ್ ಅನ್ನು ಬರೆದರೆ, ರಿಜಿಸ್ಟ್ರೇಷನ್ ಅಪ್ಲೀಕೇಷನ್ ಒಂದು ತೆರೆದುಕೊಳ್ಳುತ್ತದೆ.
ವಿಡಿಯೋಕಾಲ್‌ನಲ್ಲಿ ಸಂಪರ್ಕದಲ್ಲಿ ರೋಗಿಯ ಹೆಸರು ಲಿಂಗ, ವಯಸ್ಸು, ಮೊಬೈಲ್ ನಂಬರ್, ವಿಳಾಸವನ್ನು ನಮೂದಿಸಿ ಲಾಗಿನ್ ಆಗಬೇಕು, ಈ ವೇಳೆ ನಿಮಗೊಂದು ಟೋಕನ್ ನಂಬರ್ ಬರಲಿದೆ. ಆ ನಂಬರ್‌ನ್ನು ನೀಡಿ ವಿಡಿಯೋಕಾಲ್ ಮೂಲಕ ವೈದ್ಯರನ್ನು ಸಂಪರ್ಕಿಸಬಹುದು. ಈ ಸೇವೆಯು ಪ್ರತಿದಿನ ಬೆಳಿಗ್ಗೆ 10.00 ರಿಂದ 04.00 ರವರೆಗೆ ಲಭ್ಯವಿರುತ್ತದೆ. ವಿಡಿಯೋಕಾಲ್ ಮೂಲಕವೇ ವೈದ್ಯರು ರೋಗಿಗಳೊಂದಿಗೆ ಸಮಾಲೋಚಿಸಿ, ಚಿಕಿತ್ಸೆಗೆ ಔಷಧ ಬರೆದುಕೊಡಲಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸಾರ್ವಜನಿಕರು ಇ-ಸಂಜೀವಿನಿ ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಮಂಜುಳಾದೇವಿ.ಕೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
