ಬೆಂಗಳೂರು: ಡ್ರಗ್ಸ್ ಹಗರಣದ ತನಿಖೆಯ ಹಾದಿ ನೋಡಿದರೆ ರಾಜ್ಯ ಬಿಜೆಪಿ ಸರ್ಕಾರಕ್ಕೆ ಅಪರಾಧಿಗಳನ್ನು ಶಿಕ್ಷಿಸುವ ಉದ್ದೇಶಕ್ಕಿಂತಲೂ ಕರೊನಾ ಹಾವಳಿ ಮತ್ತು ಅತಿವೃಷ್ಟಿ ಪರಿಹಾರದ ತನ್ನ ವೈಫಲ್ಯಗಳಿಂದ ಜನಮನವನ್ನು ಬೇರೆ ಕಡೆ ಸೆಳೆಯುವ ದುರುದ್ದೇಶ ಮುಖ್ಯವಾಗಿರುವಂತೆ ಕಾಣುತ್ತಿದೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಶಾಸಕ ಜಮಿರ್ ಅಹಮದ್ ಭೇಟಿ ಬೆನ್ನಲ್ಲೆ ಈ ಕುರಿತು ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಡ್ರಗ್ಸ್ ಹಗರಣದಲ್ಲಿ ಭಾಗಿಯಾಗಿದ್ದಾರೆನ್ನಲಾದ ತಮ್ಮ ಪಕ್ಷದವರನ್ನು ರಕ್ಷಿಸುವ ಮತ್ತು ಈ ಹಗರಣವನ್ನು ಬಳಸಿಕೊಂಡು ವಿರೋಧ ಪಕ್ಷದ ನಾಯಕರ ಚಾರಿತ್ರ್ಯಹರಣ ಮಾಡುವ ಪ್ರಯತ್ನವನ್ನು ರಾಜ್ಯ ಬಿಜೆಪಿ ಮಾಡುತ್ತಿದೆ. ಇದನ್ನು ಕಾಂಗ್ರೆಸ್ ಪಕ್ಷ ತೀವ್ರವಾಗಿ ಖಂಡಿಸುತ್ತದೆ. ಮಾದಕ ವಸ್ತುಗಳ ಹಾವಳಿಯ ನಿರ್ಮೂಲನೆಯ ಪ್ರಾಮಾಣಿಕ ಉದ್ದೇಶ ಮುಖ್ಯಮಂತ್ರಿ ಅವರಿಗೆ ಇರುವುದಾದರೆ, ಬೀದಿಯಲ್ಲಿ ನಿಂತು ವಿರೋಧ ಪಕ್ಷದ ನಾಯಕರ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಿ ತನಿಖೆಯ ಹಾದಿ ತಪ್ಪಿಸುತ್ತಿರುವ ಸಂಪುಟದ ಸಚಿವರು ಮತ್ತು ಪಕ್ಷದ ನಾಯಕರ ಬಾಯಿ ಮುಚ್ಚಿಸಿ ಪೊಲೀಸರಿಗೆ ಮುಕ್ತ ಹಸ್ತ ನೀಡಬೇಕು.

ಮಾನ್ಯ ಮುಖ್ಯಮಂತ್ರಿ ಅವರೇ, ಡಿಜೆ ಹಳ್ಳಿ ಗಲಭೆ ಬಗ್ಗೆ ನಿಮ್ಮದೇ ತನಿಖೆಯ ಪ್ರಹಸನ ಮಾಡಿ ಪೊಲೀಸ್ ತನಿಖೆಯ ಮೇಲೆ ಪ್ರಭಾವ ಬೀರಿದ್ದೀರಿ, ಈಗ ಡ್ರಗ್ಸ್ ಹಗರಣದ ತನಿಖೆಯ ವಿವರಗಳನ್ನು ಸೋರಿ ಬಿಟ್ಟು ಪೊಲೀಸ್ ತನಿಖೆಯ ಹಾದಿ ತಪ್ಪಿಸುತ್ತಿದ್ದೀರಿ. ನಿಮಗೆ ವಿಶ್ವಾಸ ಇಲ್ಲದಿರುವುದು ಪೊಲೀಸರ ಮೇಲೋ? ಗೃಹ ಸಚಿವರ ಮೇಲೋ? ಪ್ರತಿಬಾರಿ ನಿಮ್ಮ ಆಡಳಿತದ ವೈಫಲ್ಯವನ್ನು ಮುಚ್ಚಿ ಹಾಕಲು ವಿರೋಧ ಪಕ್ಷಗಳ ನಾಯಕರ ಮೇಲೆ ಸುಳ್ಳು ಆರೋಪಗಳನ್ನು ಹೊರಿಸುವ ಕುತಂತ್ರ ಮಾಡುತ್ತಾ ಬಂದಿದ್ದೀರಿ. ಡ್ರಗ್ಸ್ ಹಗರಣದಲ್ಲಿ ಕೂಡಾ ಅದನ್ನೇ ಮಾಡುತ್ತಾ ಇದ್ದೀರಿ. ಸತ್ಯವನ್ನು ಮುಚ್ಚಿಡಬಹುದು, ನಾಶ ಮಾಡಲು ಆಗುವುದಿಲ್ಲ, ನೆನಪಿರಲಿ.
ಆರೋಪಿಗಳ ಜೊತೆಗಿನ ರಾಜಕಾರಣಿಗಳ ಪೋಟೊ ಹಾಕಿ ಅವರ ಹೆಸರನ್ನು ಹಗರಣದ ಜೊತೆ ಜೋಡಿಸುವುದು ಕೆಟ್ಟ ಚಾಳಿ. ಸಭೆ-ಸಮಾರಂಭಗಳಲ್ಲಿ ಜೊತೆಗೆ ನಿಂತವರೆಲ್ಲರ ಜಾತಕ ಬಿಡಿಸಿ ನೋಡಲಾಗುವುದಿಲ್ಲ. ಆದರೆ ಅಧಿಕೃತ ಸಮಾರಂಭಗಳಿಗೆ ಅಂತಹವರನ್ನು ಆಹ್ವಾನಿಸುವಾಗ, ಚುನಾವಣಾ ಪ್ರಚಾರಗಳಲ್ಲಿ ಬಳಸುವಾಗ ಎಚ್ಚರದಿಂದ ಇರಬೇಕಾಗುತ್ತೆ ಎಂದಿದ್ದಾರೆ.
