ದೊಡ್ಡಬಳ್ಳಾಪುರ: ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದು ಅದನ್ನು ಮಾರಾಟ ಮಾಡಿ ಹಣ ಸಂಪಾದಿಸಬಹುದೆಂಬ ನಿರೀಕ್ಷೆಯಲ್ಲಿದ್ದ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿರುವ ಘಟನೆ ತಾಲೂಕಿನ ನಾಗಶೆಟ್ಟಹಳ್ಳಿ ತಾಂಡದಲ್ಲಿ ನಡೆದಿದೆ.

ಗ್ರಾಮದ ನಿವಾಸಿ ಸೋಮಲಾನಾಯ್ಕ್(65) ಎಂಬಾತನೇ ತನ್ನ ಮನೆಯ ಹಿತ್ತಲಲ್ಲಿ ಗಾಂಜಾ ಗಿಡಗಳನ್ನು ಬೆಳೆದು ಬಂಧಿತನಾದವನು.ಗಾಂಜಾವನ್ನು ಬೆಳೆಯ ಬಾರದು ಎಂದು ಗೊತ್ತಿದ್ದರೂ ಸೊಮಲಾನಾಯ್ಕ ತನ್ನ ಮನೆಯ ಹಿತ್ತಲಲ್ಲಿ ಗಾಂಜಾಗಿಡಗಳನ್ನು ಬೆಳೆಸಿದ್ದನು. ಈ ಗಿಡಗಳು ಹುಲುಸಾಗಿ ಬೆಳೆದಿದ್ದವು. ಇನ್ನು ಕೆಲವೇ ಸಮಯಗಳಲ್ಲಿ ಇವು ಕೊಯ್ಲಿಗೆ ಬರುತ್ತಿದ್ದವು.

ಸೋಮಲಾನಾಯ್ಕ ಗಾಂಜಾಗಿಡಗಳನ್ನು ಬೆಳೆದ ವಿಚಾರ ಗ್ರಾಮಸ್ಥರಿಗೆ ತಿಳಿಯದಂತೆ ಮುಚ್ಚಿಟ್ಟಿದ್ದನಾದರೂ ಇತ್ತೀಚೆಗೆ ಅದು ಬಯಲಾಗಿತ್ತು.ಈ ಬಗ್ಗೆ ಖಚಿತ ಮಾಹಿತಿ ಬಂದ ಹಿನ್ನಲೆಯಲ್ಲಿ ಡಿವೈಎಸ್ಪಿ ಟಿ.ರಂಗಪ್ಪ, ಸಬ್ ಇನ್ಸ್ಪೆಕ್ಟರ್ ಸೋಮೇಶೇಖರ್ ಅವರ ನೇತೃತ್ವದ ಸಿಬ್ಬಂದಿಗಳಾದ ಅರ್ಜುನ ಲಮಾಣಿ, ಉದಯರಾಜು, ಕುಮಾರ, ಸುನೀಲ್ ಭಾಸಣಿ ತಂಡ ದಾಳಿ ನಡೆಸಿದೆ.
ಈ ವೇಳೆ ಹಿತ್ತಲಲ್ಲಿ ಗಾಂಜಾ ಬೆಳೆದಿರುವುದು ಪತ್ತೆಯಾಗಿದ್ದು, ಸುಮಾರು 2ಕೆ.ಜಿ. ಗಾಂಜಾ ಬೆಳೆಯನ್ನು ವಶಪಡಿಸಿಕೊಂಡಿರುವ ಹೊಸಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
