ಹರಿತಲೇಖನಿ ನ್ಯೂಸ್ ದೊಡ್ಡಬಳ್ಳಾಪುರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬೆಳೆ ಸಮೀಕ್ಷೆ ಕಾರ್ಯ ಪ್ರಗತಿಯಲ್ಲಿದ್ದು, ಜಿಲ್ಲೆಯ ರೈತರು, ಬೆಳೆ ಸಮೀಕ್ಷೆ ಆ್ಯಪ್ ಬಳಸುವ ಮೂಲಕ ಜಮೀನಿನ ಸರ್ವೇ ನಂಬರ್ ಹಾಗೂ ಬೆಳೆಯ ವಿವರವನ್ನು ದಾಖಲಿಸಬೇಕೆಂದು ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅವರು ಕರೆ ನೀಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿಯಲ್ಲಿಂದು ನಡೆದ “ರೈತರ ಬೆಳೆ ಸಮೀಕ್ಷೆ-2020” ಕುರಿತ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಒಟ್ಟಾರೆ 447664 ಪ್ಲಾಟ್‌ಗಳನ್ನು ಸಮೀಕ್ಷೆ ಮಾಡಬೇಕಿದ್ದು, ಇದುವರೆಗೂ 98613 ಪ್ಲಾಟ್‌ಗಳ 94393(ಶೇ.18 ರಷ್ಟು) ರೈತರು ಬೆಳೆ ಸಮೀಕ್ಷೆ ಆ್ಯಪ್ ಬಳಸಿ ಬೆಳೆ ವಿವರವನ್ನು ನೋಂದಾಯಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದ ಜಿಲ್ಲಾಧಿಕಾರಿಯವರು, ರೈತರು ತಮ್ಮ ಜಮೀನಿನಲ್ಲಿ ಬೆಳೆದ ಬೆಳೆಯ ಕುರಿತು ತಮ್ಮ ಮೊಬೈಲ್ ಮೂಲಕ ಅಪ್‌ಲೋಡ್ ಮಾಡಲು ಸೆಪ್ಟೆಂಬರ್ 23 ರವರೆಗೆ ಅವಕಾಶ ಕಲ್ಪಿಸಲಾಗಿದ್ದು, ಜಮೀನಿನ ಸರ್ವೇ ನಂಬರ್, ಬೆಳೆಯ ವಿವರವನ್ನು ಸರ್ಕಾರಕ್ಕೆ ತಿಳಿಸಲು ಅಪ್ಲೋಡ್ ಮಾಡಬೇಕೆಂದು ರೈತರಲ್ಲಿ ಮನವಿ ಮಾಡಿದರು.
ಪ್ರಸಕ್ತ ವರ್ಷ ರಾಗಿ ಬೆಳೆಗೆ 3295 ರೂ. ಗಳ ಬೆಂಬಲ ಬೆಲೆ ಘೋಷಣೆ ಮಾಡಲಾಗಿದ್ದು, ರಾಗಿ ಬೆಳೆದು, ಕಟಾವಿನ ನಂತರ ರಾಗಿ ಖರೀದಿ ಕೇಂದ್ರಕ್ಕೆ ರಾಗಿಯನ್ನು ತರುವ ಸಂದರ್ಭದಲ್ಲಿ ರಾಗಿ ಬೆಳೆದಿರುವ ಕುರಿತು ದಾಖಲೆ ನೀಡುವುದು ಅಗತ್ಯವಾಗಿದ್ದು, ಬೆಳೆ ವಿವರವನ್ನು ದಾಖಲಿಸುವುದು ಮುಖ್ಯವಾಗಿದೆ ಎಂದರು.
ಬೆಳೆ ಸಮೀಕ್ಷೆಗೆ ರೈತರ ಸಹಭಾಗಿತ್ವ ಮುಖ್ಯವಾಗಿದ್ದು, ಬೆಂಗಳೂರು ನಗರಕ್ಕೆ ಹೊಂದಿಕೊಂಡಿರುವ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಬಹಳಷ್ಟು ಜನ ಭೂ ಮಾಲೀಕರಿದ್ದು(ಲ್ಯಾಂಡ್ ಲಾರ್ಡ್ಸ್) ಅವರುಗಳು ತಮ್ಮ ಜಮೀನು ಹಾಗೂ ಬೆಳೆ ವಿವರ ದಾಖಲಿಸುವುದು ಕಡ್ಡಾಯ ಎಂದರಲ್ಲದೆ, ಖಾಲಿ ಪ್ರದೇಶವಿದ್ದರೆ ಯಾವುದೇ ಬೆಳೆ ಬೆಳೆದಿಲ್ಲ ಎಂದು ನಮೂದಿಸಬೇಕು. ಒಟ್ಟಿನಲ್ಲಿ ಬೆಳೆ ವಿವರದ ಕುರಿತು ಸರ್ಕಾರದ ಗಮನಕ್ಕೆ ತರದಿದ್ದಲ್ಲಿ, ಕರ್ನಾಟಕ ಭೂ ಕಂದಾಯ ಕಾಯ್ದೆ ಅಡಿಯಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲೆಯಲ್ಲಿರುವ ಒಟ್ಟಾರೆ ಪ್ಲಾಟ್‌ಗಳನ್ನು ಸಮೀಕ್ಷೆಗೆ ಒಳಪಡಿಸುವ ಗುರಿಗಳನ್ನಿಟ್ಟುಕೊಂಡಿರುವುದರಿಂದ ಗೈರು ರೈತರು (ಅಬ್ಸೆಂಟಿ ಫಾರ್ಮರ್) ಬೆಳೆ ವಿವರ ದಾಖಲಿಸದಿದ್ದಲ್ಲಿ ಶೇಕಡಾವಾರು ಪ್ರಗತಿ ಕುಂಠಿತವಾಗಲಿದೆ. ಜಿಲ್ಲೆಯ ಎಲ್ಲಾ ರೈತರು ಬೆಳೆ ಸಮೀಕ್ಷೆಯ ಪ್ರಗತಿಗೆ ಕೈಜೋಡಿಸಿ ಎಂದು ಹೇಳಿದರು.
ಕೃಷಿ ಇಲಾಖೆ ಉಪ ನಿರ್ದೇಶಕಿ ವಿನುತಾ ಉಪಸ್ಥಿತರಿದ್ದರು.
