ಹರಿತಲೇಖನಿ ನ್ಯೂಸ್ ದೊಡ್ಡಬಳ್ಳಾಪುರ: ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಇಲ್ಲೊಂದು ಗ್ರಾಮವನ್ನು ಸಂಪರ್ಕಿಸುವ ರಸ್ತೆ ಕಾಣೆಯಾಗಿದ್ದು, ರಸ್ತೆ ಹುಡುಕಿ ಕೊಡುವಂತೆ ಗ್ರಾಮಸ್ಥರು ಪೊಲೀಸ್ ಠಾಣೆಗೆ ದೂರು ನೀಡುವ ಸಿದ್ದತೆ ನಡೆಸುತ್ತಿದ್ದಾರೆ.


ತಾಲೂಕಿನ ಸಾಸಲು ಹೋಬಳಿ ವ್ಯಾಪ್ತಿಯ ತಮಗಾನಹಳ್ಳಿ ಗ್ರಾಮಸ್ಥರಿಗೆ ರಸ್ತೆ ಎನ್ನುವುದು ಸ್ವಾತಂತ್ರ್ಯ ಬಂದಾಗಿನಿಂದ ಕನಸಾಗಿದೆ.ಸುಮಾರು 400ಕ್ಕು ಹೆಚ್ಚು ಜನಸಂಖ್ಯೆ ಹೊಂದಿರುವ ಗ್ರಾಮಕ್ಕೆ ಮೂಲಭೂತ ಸೌಲಭ್ಯಗಳಲ್ಲಿ ಒಂದಾದ ರಸ್ತೆ ದೊರಕಿಸಬೇಕೆಂಬ ಕನಿಷ್ಠ ಕಾಳಜಿ ಈ ವ್ಯಾಪ್ತಿಯಲ್ಲಿ ಆಯ್ಕೆಯಾಗುವ ಜನ ಪ್ರತಿನಿಧಿಗಳಿಗೆ ಇಲ್ಲವಾಗಿರುವುದು ಶೋಚನೀಯ.
ಚಿಕ್ಕ ಗ್ರಾಮವಾದ ತಮಗಾನಹಳ್ಳಿಯ ಜನತೆ ಅಗತ್ಯ ವಸ್ತುಗಳಿಗೆ, ಶಾಲಾ ಕಲೇಜುಗಳಿಗೆ, ಉದ್ಯೋಗಕ್ಕೆ ತೆರಳಲು ಇರುವ ಮಣ್ಣು ದಾರಿಯನ್ನೆ ಆಶ್ರಯಿಸಬೇಕಿದೆ. ಮಳೆ ಬಂದರೆ ಕೆಸರು ಗದ್ದೆಯಂತಾಗುವ ರಸ್ತೆಯಲ್ಲಿ ಸಂಚರಿಸಬೇಕಾದ ಅನಿರ್ವಾರ್ಯತೆ ಇಲ್ಲಿನ ಜನರದ್ದಾಗಿದೆ.
ಚುನಾವಣೆ ಸಮಯದಲ್ಲಿ ಮತಯಾಚಿಸಲು ಇದೇ ರಸ್ತೆ ಮೂಲಕ ಬರುವಾಗ ಕಾಮಗಾರಿ ನಡೆಸಿ ಡಾಂಬರ್ ಮಾಡಿಸುತ್ತೇವೆ ಎಂದು ಭರವಸೆ ನೀಡುವವರು.ನಂತರ ಈ ರಸ್ತೆಯ ಕಾಮಗಾರಿ ನಡೆಸಬೇಕೆಂಬ ಕಿಂಚಿಂತ್ ಆಲೋಚನೆ ಮಾಡುತ್ತಿಲ್ಲ ಎಂಬುದು ಸ್ಥಳೀಯರ ಆಕ್ರೋಶ.
