ದೊಡ್ಡಬಳ್ಳಾಪುರ: ತಾಲೂಕಿನಲ್ಲಿ ಕರೊನಾ ಸೋಂಕಿತರ ಸಾವಿನ ಪ್ರಕರಣಗಳು ಹೆಚ್ಚಾಗಲು ತ್ವರಿತವಾಗಿ ಚಿಕಿತ್ಸೆ ಪಡೆಯದಿರುವುದೇ ಕಾರಣ ಎಂದು ಶಾಸಕ ಟಿ.ವೆಂಕಟರಮಣಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಹರಿತಲೇಖನಿಯೊಂದಿಗೆ ಮಾತನಾಡಿರುವ ಅವರು, ಪ್ರಸ್ತುತ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಸೋಂಕಿನಿಂದ 1310 ಮಂದಿ ಗುಣಮುಖರಾಗಿ ಮರಳಿದ್ದರು, 67 ಮಂದಿ ಸಾವಿಗೀಡಾಗಿರುವುದು ಆತಂಕದ ಸಂಗತಿಯಾಗಿದೆ. ಸೋಂಕಿನ ಲಕ್ಷಣಗಳು ಕಂಡ ಕೂಡಲೇ ಸರ್ಕಾರಿ ವೈದ್ಯರಿಂದ ಅಥವಾ ತಜ್ಞ ವೈದ್ಯರಿಂದ ಚಿಕಿತ್ಸೆ ಪಡೆದಲ್ಲಿ ಸಾವಿನ ಪ್ರಕರಣಗಳನ್ನು ತಡೆಗಟ್ಟಬಹುದಾಗಿದೆ ಎಂದ ಅವರು, ಕರೊನಾ ಸೋಂಕಿನ ಕುರಿತು ನಿರ್ಲಕ್ಷ್ಯ ಮಾಡಬಾರದೆಂದು ಮನವಿ ಮಾಡಿದ್ದಾರೆ.
ನಕಲಿ ವೈದ್ಯರ ಕುರಿತು ಎಚ್ಚರಿಕೆ ವಹಿಸಲು ಸೂಚನೆ
ತಾಲೂಕಿನಲ್ಲಿ ಕರೊನಾ ಸೋಂಕಿತರ ಸಾವಿನ ಪ್ರಕರಣ ಹೆಚ್ಚಾಗಲು ನಿರ್ಲಕ್ಷ್ಯದ ಜೊತೆಗೆ,ಸಾರ್ವಜನಿಕರು ನಕಲಿ ವೈದ್ಯರಿಂದ ಚಿಕಿತ್ಸೆ ಪಡೆಯುವುದು ಕಾರಣವಾಗುತ್ತಿದೆ ಎಂಬ ಆರೋಪ ಸಹ ಕೇಳಿಬಂದಿದೆ ಎಂದು ಬೇಸರ ವ್ಯಕ್ತ ಪಡಿಸಿದ ಶಾಸಕರು. ಆಯುರ್ವೇದ, ಅಲೋಪತಿ ಮತ್ತಿತರ ಹೆಸರುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಕಲಿ ವೈದ್ಯರಿಂದ ಸಾರ್ವಜನಿಕರು ಕರೊನಾ ಸೊಂಕಿಗೆ ಔಷಧ ಪಡೆಯುತ್ತಿರುವುದರಿಂದ ರೋಗ ಉಲ್ಬಣವಾಗಿ ಸಾವಿಗೆ ಕಾರಣವಾಗುತ್ತಿದೆ. ಈ ಕುರಿತು ಸಾರ್ವಜನಿಕರು ಜಾಗೃತರಾಗಿ ಕರೊನಾ ಮುಕ್ತ ತಾಲೂಕನ್ನಾಗಿಸಲು ತಾಲೂಕು ಆಡಳಿತಕ್ಕೆ ಸಹಕಾರ ನೀಡಬೇಕಿದೆ ಎಂದು ಮನವಿ ಮಾಡಿದ್ದಾರೆ.
ನಕಲಿ ವೈದ್ಯರ ವಿರುದ್ಧ ಕ್ರಮ
ಕರೊನಾ ಸೋಂಕಿಗೆ ಚಿಕಿತ್ಸೆ ಹೆಸರಲ್ಲಿ ಸಾರ್ವಜನಿಕರಿಗೆ ವಂಚಿಸುತ್ತಿರುವ ನಕಲಿ ವೈದ್ಯರ ವಿರುದ್ದ ಕ್ರಮಕೈಗೊಳ್ಳುವಂತೆ ತಾಲೂಕು ಆಡಳಿತಕ್ಕೆ ಸೂಚನೆ ನೀಡಲಾಗಿದೆ. ಕರೊನಾ ಸೋಂಕಿನ ಚಿಕಿತ್ಸೆಗೆ ವಿಳಂಬ ಅಥವಾ ನಕಲಿ ವೈದ್ಯರ ಹಾವಳಿ ಕಂಡುಬಂದಲ್ಲಿ ಶಾಸಕರ ಮೊಬೈಲ್ ಸಂಖ್ಯೆ 9611241188ಗೆ ಕರೆ ಮಾಡುವಂತೆ ಅವರು ಮನವಿ ಮಾಡಿದ್ದಾರೆ.

