ದೊಡ್ಡಬಳ್ಳಾಪುರ: ಕೊರೊನಾ ಸೋಕಿತರ ಸಾವುಗಳ ಪ್ರಮಾಣ ತಾಲ್ಲೂಕಿನಲ್ಲಿ ಶೇ6ಕ್ಕೆ ಏರಿಕೆಯಾಗಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಹಾಗೂ ಸಿಬ್ಬಂದಿ ಕೊರತೆಯಿಂದಾಗಿ ಸೋಕಿತರಿಗೆ ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೆ ಪರದಾಡುವಂತಾಗಿದೆ. ಜಿಲ್ಲಾಡಳಿತ ಆಸ್ಪತ್ರೆಗೆ ಅಗತ್ಯ ಮೂಲಭೂತ ಸೌಲಭ್ಯ ಕಲ್ಪಿಸದೇ ಇದ್ದರೆ ಹೋರಾಟ ನಡೆಸಲಾಗುವುದು ಎಂದು ಜೆಡಿಎಸ್ ನಗರ ಘಟಕದ ಅಧ್ಯಕ್ಷ ವಡ್ಡರಹಳ್ಳಿರವಿ ಹೇಳಿದ್ದಾರೆ.
ಅವರು ನಗರದ ಜೆಡಿಎಸ್ ಕಾರ್ಯಾಲಯದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅನ್ಲಾಕ್ ಪ್ರಕ್ರಿಯೆ ಆರಂಭವಾದ ನಂತರ ಕೊರೊನಾ ಸಂಬಂಧಿಸಿದ ಯಾವುದೆ ಜವಾಬ್ದಾರಿಯನ್ನು ಜಿಲ್ಲಾ ಆಡಳಿತ ಸೂಕ್ತ ರೀತಿಯಲ್ಲಿ ನಿರ್ವಹಿಸುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಕ್ಷೇತ್ರದ ಶಾಸಕರು ಅಧಿಕಾರಿಗಳ ಸಭೆ ನಡೆಸುವುದಕ್ಕಷ್ಟೇ ಸೀಮಿತವಾಗಿದ್ದಾರೆ ವಿನಹ ವಾಸ್ತವ ಸ್ಥಿತಿಯ ಬಗ್ಗೆ ಒಂದು ದಿನವು ಸಹ ಆಸ್ಪತ್ರೆಗೆ ಭೇಟಿ ನೀಡಿಲ್ಲ. ಕೋವಿಡ್-19 ಪರೀಕ್ಷಾ ವರದಿ ಬರಲು 3 ರಿಂದ 4 ದಿನಗಳ ಕಾಲ ಕಾಯುವಂತಾಗಿದೆ. ಪರೀಕ್ಷಾ ವರದಿ ಬರದೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡುತ್ತಿಲ್ಲ. ಸೂಕ್ತ ಸಮಯಕ್ಕೆ ಚಿಕಿತ್ಸೆ ದೊರೆಯದೆಯೇ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವಾಗಿದೆ ಎಂದರು.
ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರತಿ ದಿನ ಸುಮಾರು 100ಕ್ಕೂ ಹೆಚ್ಚು ಜನ ಕೋವಿಡ್ ಪರೀಕ್ಷೆಗೆ ಬರುತ್ತಾರೆ. ಆದರೆ ಸಿಬ್ಬಂದಿ ಕೊರತೆಯಿಂದಾಗಿ ಜ್ವರದಿಂದ ಬಳಲುತ್ತಿರುವವರು ಪರೀಕ್ಷೆ ಮಾಡಿಸಿಕೊಳ್ಳಲು ಇಡೀ ದಿನ ಕಾದು ಕುಳಿತುಕೊಳ್ಳಬೇಕು. ಪರೀಕ್ಷೆ ಮಾಡಿಸಿಕೊಳ್ಳುವ ಸ್ಥಳದಲ್ಲಿ ಸ್ವಚ್ಛತೆ, ಸಾಲಾಗಿ ನಿಂತುಕೊಳ್ಳಲು ಸೂಕ್ತ ವ್ಯವಸ್ಥೆ ಇಲ್ಲದೆ ಒಬ್ಬರ ಮೇಲೆ ಒಬ್ಬರು ಮುತ್ತಿಗೆ ಹಾಕಿ ನಿಲ್ಲುವಂತಾಗಿದೆ. ಪರೀಕ್ಷೆ ಮಾಡಿಸಿಕೊಳ್ಳಲು ಹೋಗುವ ಸ್ಥಳದಲ್ಲಿಯೇ ಸೋಂಕು ಇಲ್ಲದವರಿಗೂ ಸೋಂಕು ಹರಡುವ ತಾಣವಾಗಿ ಪರಿಣಮಿಸಿದೆ ಎಂದರು
ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಮುನೇಗೌಡ ಮಾತನಾಡಿ, ಕೊರೊನಾ ಸಂದರ್ಭದಲ್ಲಿ ತಾಲ್ಲೂಕಿನ ಶಾಸಕ ಟಿ.ವೆಂಕಟರಮಣಯ್ಯ ಕಾಣೆಯಾಗಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ಕುರಿತು ಕಾಳಜಿ ಇಲ್ಲವಾಗಿದ್ದು, ಸ್ವಾತಂತ್ರ ದಿನಾಚರಣೆಯಂದು ಧ್ವಜಾರೋಹಣಕಷ್ಟೇ ಉಸ್ತುವಾರಿ ಸಚಿವರು ಸೀಮಿತವಾಗಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಿಬ್ಬಂದಿ ಹಾಗೂ ಸೌಲಭ್ಯಗಳ ಕೊರತೆಯಿಂದ ವೈದ್ಯಕೀಯ ಸಿಬ್ಬಂದಿ ತೀವ್ರ ಸಂಕಷ್ಟದಲ್ಲಿದ್ದಾರೆ ಎಂದರು.
2013ಕ್ಕೂ ಹಿಂದೆ ಇದ್ದ ಶಾಸಕ ಜೆ.ನರಸಿಂಹಸ್ವಾಮಿ ಅವರು ತಾಲ್ಲೂಕಿಗೆ ಎರಡು ಬಿಬಿಎಂಪಿ ಕಸವಿಲೇವಾರಿ ಘಟಕಗಳನ್ನು ತಂದು ತಾಲ್ಲೂಕನ್ನು ಕಸದ ತೊಟ್ಟಿಯಾಗಿಸಲು ಶ್ರಮಿಸಿದ್ದರು. ಈಗಿನ ಶಾಸಕ ಟಿ.ವೆಂಕಟರಮಣಯ್ಯ ಅವರು ಬಿಬಿಎಂಪಿ ಕಸ ಘಟಕಗಳನ್ನು ಇಲ್ಲಿಯೇ ಉಳಿಸಿಕೊಳ್ಳಲು ಶ್ರಮಿಸುತ್ತಿದ್ದಾರೆ ವಿನಹ ತಾಲ್ಲೂಕಿನ ಜನತೆಗೆ ಬಿಬಿಎಂಪಿ ಕಸದಿಂದ ಮುಕ್ತಿ ಮಾತ್ರ ದೊರೆತಿಲ್ಲ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ವಕೀಲರ ಘಟಕದ ಜಿಲ್ಲಾ ಅಧ್ಯಕ್ಷ ಅಂಜನಗೌಡ, ಜೆಡಿಎಸ್ ತಾಲ್ಲೂಕು ಕಾರ್ಯಾಧ್ಯಕ್ಷ ಆರ್.ಕೆಂಪರಾಜ್, ಕಾರ್ಯದರ್ಶಿ ನಾಗರಾಜ್, ನಗರ ಕಾರ್ಯದರ್ಶಿ ಅಖಿಲೇಶ್ ಇದ್ದರು.

