ದೊಡ್ಡಬಳ್ಳಾಪುರ: ಕೃಷಿ ಇಲಾಖೆ ವತಿಯಿಂದ ರಾಷ್ಟ್ರೀಯ ಸುಸ್ಥಿರ ಕೃಷಿ ಅಭಿಯಾನ-ಮಣ್ಣು ಆರೋಗ್ಯ ನಿರ್ವಹಣೆ ಯೋಜನೆಯಡಿ ಕೇಂದ್ರ ಸರ್ಕಾರದ ನಿರ್ದೇಶನದ ಮೇರೆಗೆ 2020-21 ನೇ ಸಾಲಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಎರಡು ಮಣ್ಣು ಪರೀಕ್ಷೆ ಘಟಕಗಳನ್ನು ಸ್ಥಾಪಿಸಲು ಅವಕಾಶವಿದ್ದು, ಗ್ರಾಮ ಮಟ್ಟದಲ್ಲಿ ಮಣ್ಣು ಪರೀಕ್ಷಾ ಪ್ರಯೋಗಾಲಯವನ್ನು ಸ್ಥಾಪಿಸಲು ಆಸಕ್ತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಮಣ್ಣು ಸಸ್ಯಗಳಿಗೆ ಪೋಷಕಾಂಶಗಳನ್ನು ಒದಗಿಸುವ ಜೀವಂತ ಸಾಧನ. ಮಣ್ಣು ವಿವಿಧ ಲವಣಾಂಶ, ಸಾವಯವ ವಸ್ತುಗಳು, ನೀರು, ಗಾಳಿಯನ್ನು ವಿವಿಧ ಪ್ರಮಾಣಗಳಲ್ಲಿ ಹೊಂದಿದ್ದು, ಸಸ್ಯಗಳ ಬೆಳವಣಿಗೆ ಸಹಕಾರಿಯಾಗಿರುತ್ತದೆ. ರಸಗೊಬ್ಬರ ಬಳಕೆ ಪದ್ದತಿಯಲ್ಲಿನ ನ್ಯೂನತೆಗಳನ್ನು ಸರಿಪಡಿಸಲು ಹಾಗೂ ಸೂಕ್ತ ಬೆಳೆಯನ್ನು ಆಯ್ಕೆ ಮಾಡಿಕೊಳ್ಳಲು ವೈಜ್ಞಾನಿಕ ರೀತಿಯಲ್ಲಿ ಬೆಳೆಯನ್ನು ಬೆಳೆದು ಹೆಚ್ಚಿನ ಇಳುವರಿ ಪಡೆದು, ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಪಡೆಯಲು ಪ್ರತಿ 3 ವರ್ಷಗಳಿಗೊಮ್ಮೆ ದೇಶದ ಎಲ್ಲಾ ರೈತರು ಮಣ್ಣು ಪರೀಕ್ಷೆ ಮಾಡಿಸುವುದು ಅವಶ್ಯಕವಾಗಿರುತ್ತದೆ.
ಗ್ರಾಮೀಣ ಯುವಕರು, ಕೃಷಿ ಕ್ಲಿನಿಕ್ ಮತ್ತು ಕೃಷಿ ವ್ಯಾಪಾರ ಕೇಂದ್ರಗಳು (Agri Clinics & Agri Buisness Centres), ಕೃಷಿ ಉದ್ದಿಮೆದಾರರು, ಮಾಜಿ ಯೋಧರು, ಸ್ವಸಹಾಯ ಸಂಘಗಳು, ರೈತರ ಉತ್ಪಾದಕರ ಸಂಸ್ಥೆಗಳು (FPOs), ರೈತ ಉತ್ಪನ್ನ ಕಂಪನಿಗಳು, ರೈತರ ಜಂಟಿ ಜವಾಬ್ದಾರಿ ಗುಂಪುಗಳು (Farmer Joint Liability Groups), ರೈತರ ಸಹಕಾರ ಸಂಘಗಳು PACS, ಪರಿಕರಗಳ ರಿಟೇಲ್ ಔಟ್‍ಲೆಟ್‌ಗಳು, ಪರಿಕರಗಳ ರಿಟೇಲ್‍ದಾರರು ಅರ್ಜಿ ಸಲ್ಲಿಸಬಹುದಾಗಿರುತ್ತದೆ.
ಭರ್ತಿ ಮಾಡಿದ ಅರ್ಜಿಗಳನ್ನು ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಉಪ ಕೃಷಿ ನಿರ್ದೇಶಕರ ಕಚೇರಿ, ಬೀರಸಂದ್ರ, ದೇವನಹಳ್ಳಿ ತಾಲ್ಲೂಕು ಅಥವಾ ಜಂಟಿ ಕೃಷಿ ನಿರ್ದೇಶಕರ ಕಚೇರಿ ಬನಶಂಕರಿ, ಬೆಂಗಳೂರು ಇಲ್ಲಿಗೆ ಸಲ್ಲಿಸುವುದು. ಅರ್ಜಿ ಸಲ್ಲಿಸಲು 2020ರ ಅಕ್ಟೋಬರ್ 10 ಕೊನೆಯ ದಿನವಾಗಿದೆ.
ಅರ್ಜಿದಾರರು ಕನಿಷ್ಠ ಪಕ್ಷ ಮೆಟ್ರಿಕ್‌ನಲ್ಲಿ 2ನೇ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ವಿಜ್ಞಾನ ಮತ್ತು ಕಂಪ್ಯೂಟರ್ ಜ್ಞಾನ, PAN ಸಂಖ್ಯೆ ಮತ್ತು ಆಧಾರ್ ಸಂಖ್ಯೆಯ ದಾಖಲಾತಿಗಳನ್ನು ಹೊಂದಿರಬೇಕು, ಅರ್ಜಿದಾರರು/ಫಲಾನುಭವಿಗಳು ಗ್ರಾಮ ಮಟ್ಟದಲ್ಲಿ ಮಣ್ಣು ಪರೀಕ್ಷಾ ಘಟಕಗಳನ್ನು ಸ್ಥಾಪಿಸಲು ಸ್ವಂತ ಕಟ್ಟಡ ಅಥವಾ ಬಾಡಿಗೆ ಕಟ್ಟಡವನ್ನು ಹೊಂದಿರಬೇಕು. ಕನಿಷ್ಠ 4 ವರ್ಷಗಳ ಅವಧಿಗೆ ಬಾಡಿಗೆ ಕರಾರು ಪತ್ರವನ್ನು ಹೊಂದಿರಬೇಕು, ಗ್ರಾಮ ಮಟ್ಟದಲ್ಲಿ ಮಣ್ಣು ಪರೀಕ್ಷಾ ಘಟಕಗಳನ್ನು ಸ್ಥಾಪಿಸಲು ಯೋಜನಾ ವೆಚ್ಚ ರೂ.5.00 ಲಕ್ಷಗಳು. ಫಲಾನುಭವಿಗಳಿಗೆ ಯೋಜನಾ ವೆಚ್ಚದ ಶೇ 75.00 ರಷ್ಟು ಆರ್ಥಿಕ ಸಹಾಯವನ್ನು ಸಬ್ಸಿಡಿಯನ್ನಾಗಿ ಘಟಕ ಅನುಷ್ಠಾನ ಮಾಡಿದ ನಂತರ ಸಂಬಂಧಪಟ್ಟ ಅಧಿಕಾರಿಗಳಿಂದ ಪರಿಶೀಲಿಸಿದ ನಂತರ ನೀಡಲಾಗುವುದು.
ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕಿನ ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳು, ತಾಲ್ಲೂಕು ಸಹಾಯಕ ಕೃಷಿ ನಿದೇಶಕರ ಕಚೇರಿ, ಉಪ ಕೃಷಿ ನಿರ್ದೇಶಕರ ಕಚೇರಿ ಬೀರಸಂದ್ರ, ದೇವನಹಳ್ಳಿ ಅಥವಾ ಬೆಂಗಳೂರು ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

